ನ್ಯೂಸ್

ನಿರಹಂಕಾರ

ಮೋಹನ್​ ಶೆಟ್ಟಿ

ಸಂದೇಹವೀ ಕೃತಿಯೊಳಿನ್ನಿಲ್ಲವೆಂದಲ್ಲ| ಇಂದು ನಂಬಿಹುದೆ ಮುಂದೆಂದುಮೆಂದಲ್ಲ | ಕುಂದು ತೋರ್ದಂದದನು ತಿದ್ದುಕೊಳೆ ಮನಸುಂಟು| ಇಂದಿಗೀ ಮತವುಚಿತ - ಮಂಕುತಿಮ್ಮ || 939 ||

ಕನ್ನಡದ ಭಗವದ್ಗೀತೆಯೆಂದು ಕರೆಯಲ್ಪಟ್ಟ ಈ ಕಗ್ಗವನ್ನು ಬರೆದ ಡಿ.ವಿ.ಜಿ.ಯವರ ಮಾತಿದು. ಇದು ನಿರಹಂಕಾರಕ್ಕೆ ಉದಾಹರಣೆ. ಒಂದು ಶ್ರೇಷ್ಠ ಗ್ರಂಥವನ್ನು ಬರೆದು ಕೊನೆಯಲ್ಲಿ, ಈ ಕೃತಿಯಲ್ಲಿ ಬರೆದಿರುವುದು ಎಲ್ಲವೂ ಸರಿಯಾಗಿದೆ ಎಂದಲ್ಲ ಎಂದಿದ್ದಾರೆ. ಹೀಗೆನ್ನಲು ಅವರು ನೀಡುವ ಕಾರಣ, ತಮ್ಮ ಮನಸ್ಸು ಇಂದು ನಂಬಿರುವುದನ್ನು ನಾಳೆ ನಿರಾಕರಿಸಬಹುದೆಂಬ ಸತ್ಯ. ಮನಸ್ಸಿನ ಸ್ವಭಾವವೇ ಇದು. ಬಾಲ್ಯದಲ್ಲಿ ಆಟದ ಸಾಮಾನುಗಳನ್ನು ಬಯಸುತ್ತಿದ್ದ ನಾವು, ಬೆಳೆದ ಹಾಗೆ ಅವುಗಳಲ್ಲಿ ಆಸಕ್ತಿಯನ್ನು ಕಳೆದುಕೊಂಡು ಬೇರೆ ವಸ್ತು ಹಾಗೂ ವಿಷಯಗಳತ್ತ ಗಮನ ಹರಿಸುತ್ತೇವೆ. ಹೀಗೆ ನಮ್ಮ ಆಸಕ್ತಿಯ ವಸ್ತು, ವಿಷಯ ಹಾಗೂ ವ್ಯಕ್ತಿಗಳು ಸದಾ ಬದಲಾಗುತ್ತಿರುತ್ತವೆ. ಆದ್ದರಿಂದ ಇಂದು ನಂಬಿದ್ದು ನಾಳೆ ನಂಬದಿರಬಹುದು ಅಥವಾ ಇಂದು ನಂಬದಿರುವುದನ್ನು ನಾಳೆ ನಂಬಬಹುದು.

ಯಾರಾದರೂ ಬಂದು ‘ನೀವು ಬರೆದ ಕಗ್ಗದಲ್ಲಿ ತಪ್ಪಿದೆ’ ಎಂದು ಹೇಳಿದರೆ ಡಿ.ವಿ.ಜಿ. ಕೊಡುವ ಉತ್ತರ ‘ಕುಂದು ತೋರ್ದಂದು ತಿದ್ದುಕೊಳೆ ಮನಸುಂಟು’ ತಪ್ಪಿದ್ದರೆ ತಿದ್ದಿಕೊಳ್ಳಲು ಮನಸ್ಸು ಸಿದ್ಧವಿದೆ. ಇದೇ ಡಿ.ವಿ.ಜಿಯವರ ನಿರಹಂಕಾರಕ್ಕೆ ನಿದರ್ಶನ. ಜ್ಞಾನಿಯ ಜೀವನ ಹೀಗಿರುತ್ತದೆ. ಆತ ಎಂದೂ ಅಹಂಕಾರಕ್ಕೆ ಬಲಿಯಾಗುವುದಿಲ್ಲ. ಪೂರ್ಣ ಜ್ಞಾನ ಇಲ್ಲದವನು ಮಾತ್ರ ಅಹಂಕಾರಕ್ಕೆ ಬಲಿಯಾಗುತ್ತಾನೆ. ಒಬ್ಬ ಪರಿಪೂರ್ಣ ಜ್ಞಾನಿಯಾದವನು ತನ್ನನ್ನು ಸದಾ ವಿದ್ಯಾರ್ಥಿಯೆಂದು ಕರೆಯುತ್ತಿರುತ್ತಾನೆ. ಏಕೆಂದರೆ ಜೀವನದಲ್ಲಿ ಕಲಿಯುವಂಥದ್ದು ಸಾಕಷ್ಟು ಇದೆ. ಪೂರ್ತಿ ಕಲಿತಿದ್ದೇನೆ ಎಂದು ಹೇಳಿದರೆ ಅದು ಆತನ ಅಜ್ಞಾನ ಮಾತ್ರ ಆಗಿರುತ್ತದೆ. ಜೀವನದಲ್ಲಿ ಒಂದು ಅಭಿಪ್ರಾಯವನ್ನು ನಾವು ಹೊಂದಿರಬೇಕು, ಆದರೆ ಅದು ತಪ್ಪೆಂದು ಯಾರಾದರೂ ಮನದಟ್ಟು ಮಾಡಿದರೆ, ಆಗ ಅದನ್ನು ಸರಿಪಡಿಸಿಕೊಳ್ಳಲು ಸಿದ್ಧವಾಗಿರಬೇಕು. ಇದೇ ನಿರಹಂಕಾರಿಯ ಲಕ್ಷಣ.