ಲಖನೌ: ಅಯೋಧ್ಯೆಯಲ್ಲಿ ಆಗಸ್ಟ್ 5ರಂದು ನಡೆಯಲಿರುವ ರಾಮಮಂದಿರ ನಿರ್ಮಾಣ ಭೂಮಿ ಪೂಜೆ ಸಮಾರಂಭವನ್ನು ಅದ್ದೂರಿಯಾಗಿ ನಡೆಸಲಾಗುವುದು ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಹೇಳಿದ್ದಾರೆ.
ಆಗಸ್ಟ್ 3ರಿಂದ ಪ್ರಾರಂಭವಾಗುವ ಧಾರ್ಮಿಕ ಕಾರ್ಯಕ್ರಮಗಳ ಪೂರ್ವಭಾವಿ ಸಿದ್ಧತೆಗಳನ್ನು ಪರಿಶೀಲಿಸಲು ಇಂದು ಮುಖ್ಯಮಂತ್ರಿ ಯೋಗಿ ಅವರು ಅಯೋಧ್ಯೆಗೆ ಭೇಟಿ ನೀಡಿದ್ದಾರೆ. ಇದೇ ಸಂದರ್ಭದಲ್ಲಿ ಮಾತನಾಡಿದ ಅವರು, ರಾಮಮಂದಿರ ನಿರ್ಮಾಣಕ್ಕೆ 500 ವರ್ಷಗಳ ನಂತರ ಶುಭ ಸಂದರ್ಭ ಬಂದಿದೆ ಎಂದು ಹೇಳಿದ್ದಾರೆ.
ಜಿಲ್ಲಾಡಳಿತದ ಅಧಿಕಾರಿಗಳು, ರಾಮಮಂದಿರ ಟ್ರಸ್ಟ್ ಸದಸ್ಯರು ಹಾಗೂ ಸ್ಥಳೀಯ ಜನಪ್ರತಿನಿಧಿಗಳೊಂದಿಗೆ ಸಭೆ ನಡೆಸಿದ ಯೋಗಿ ಆದಿತ್ಯನಾಥ್, ಭೂಮಿ ಪೂಜೆಗಾಗಿ ನಡೆಯುತ್ತಿರುವ ಸಿದ್ಧತೆಗಳ ಬಗ್ಗೆ ಮಾಹಿತಿ ಪಡೆದರು.
ಇತ್ತೀಚೆಗೆ ಹಿಂದು ಸನ್ಯಾಸಿಯೋರ್ವರು ಕರೊನಾ ಸಂದರ್ಭದಲ್ಲಿ ರಾಮ ಮಂದಿರ ನಿರ್ಮಾಣ ಸರಿಯಲ್ಲ ಎಂದಿದ್ದರು. ಆದರೆ ಇಂದು ಅಯೋಧ್ಯೆಗೆ ಭೇಟಿ ನೀಡಿದ ಯೋಗಿ ಆದಿತ್ಯನಾಥ್ ಅವರು, ರಾಮ ಮಂದಿರ ನಿರ್ಮಾಣಕ್ಕೆ 500 ವರ್ಷಗಳ ನಂತರ ಮಂಗಳಕರ ಸಮಯ ಒದಗಿಬಂದಿದೆ ಎಂದಿದ್ದಾರೆ. ಇದನ್ನೂ ಓದಿ: ಬೈಕ್ನಲ್ಲಿ ಹೋಗ್ತಿದ್ದ ಮಗಳ ಪ್ರಿಯಕರನನ್ನು ದೊಣ್ಣೆಯಲ್ಲಿ ಬೀಳಿಸಿ 18 ಬಾರಿ ಎದೆಗೆ ಚಾಕು ಇರಿದರು
ಆಗಸ್ಟ್ 5ರಂದು ಮಧ್ಯಾಹ್ನ 12.15ಕ್ಕೆ ಭೂಮಿ ಪೂಜೆ ನಡೆಯಲಿದ್ದು, ಅಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಭಾಗವಹಿಸಲಿದ್ದಾರೆ ಎಂದು ಟ್ರಸ್ಟ್ ಈಗಾಗಲೇ ತಿಳಿಸಿದೆ.
ಹಾಗೇ ಯೋಗಿ ಅವರು ಹನುಮಾನ್ ಗರ್ಹಿಗೂ ಭೇಟಿ ನೀಡಿ, ಅಲ್ಲಿ ನಡೆಯುತ್ತಿರುವ ನಿರ್ಮಾಣ ಕಾರ್ಯವನ್ನ ಪರಿಶೀಲನೆ ನಡೆಸಿದರು. (ಏಜೆನ್ಸೀಸ್)