ನ್ಯೂಸ್

ರಾಮಮಂದಿರ ಭೂಮಿ ಪೂಜೆಗೆ ಆ.5ರ ಮುಹೂರ್ತ ಚೆನ್ನಾಗಿಲ್ಲ; ವಾರಾಣಸಿ ಶ್ರಿಗಳು ಆಕ್ಷೇಪಿಸುತ್ತಿರುವುದೇಕೆ?

ವಾರಾಣಸಿ: ಅಯೋಧ್ಯಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣಕ್ಕೆ  ಪ್ರಧಾನಿ ನರೇಂದ್ರ ಮೋದಿ ಅವರಿಂದ ಭೂಮಿಪೂಜೆ ನಡೆಸಲು ನಿಗದಿ ಪಡಿಸಲಾಗಿರುವ ಆಗಸ್ಟ್​ 5ರ ಮುಹೂರ್ತ ಶುಭಪ್ರದವಲ್ಲ ಎಂದು ವಾರಾಣಸಿಯ ಶ್ರೀಗಳು ಹಾಗೂ ಸಂತರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಸರ್ರೆ ಶಂಕರಾಚಾರ್ಯ ಸ್ವರೂಪಾನಂದ ಸರಸ್ವತಿ ಶ್ರೀಗಳ ಬಳಿಕ ಈಗ, ಸ್ವಾಮಿ ಶ್ರೀ ಅವಿಕ್ತೇಶ್ವರಾನಂದ ಹಾಗೂ ಸುಮೇರು ಪೀಠದ ಶ್ರೀ ನರೇಂದ್ರಾನಂದ ಮಹಾರಾಜ್​ ಕೂಡ ಆ.5ರ ಮುಹೂರ್ತದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಆಗಸ್ಟ್​ನಲ್ಲಿ ಭೂಮಿ ಪೂಜೆಗೆ ಯಾವುದೇ ಶುಭ ಮುಹೂರ್ತಗಳಿಲ್ಲ. ಅವರು ತಮ್ಮ ಅನುಕೂಲಕ್ಕಾಗಿ ಭೂಮಿಪೂಜೆ ನಡೆಸುತ್ತಿದ್ದಾರೆ. ಶಾಸ್ತ್ರಸಮ್ಮತವಾಗಿ ಭೂಮಿ ಪೂಜೆ ನಡೆಯದಿದ್ದರೆ, ಋಣಾತ್ಮಕ ಪರಿಣಾಮಗಳು ಉಂಟಾಗುತ್ತವೆ ಎಂದು ಸ್ವಾಮಿ ಶ್ರೀ ಅವಿಕ್ತೇಶ್ವರಾನಂದ ಶ್ರಿಗಳು ಹೇಳಿದ್ದಾರೆ.

ಶ್ರೀರಾಮ ಮಂದಿರಕ್ಕೆ 1990 ನವೆಂಬರ್​ 5ರಂದೇ ವಿಎಚ್​ಪಿ ಮುಖಂಡರು, ಅಂದಿನ ಆರ್​ಎಸ್​ಎಸ್​ ಮುಖ್ಯಸ್ಥರು ಹಾಗೂ ಶ್ರೀಗಳ ಸಮ್ಮುಖದಲ್ಲಿ ಭೂಮಿಪೂಜೆ ನಡೆಸಲಾಗಿದೆ ಎಂದು ಶ್ರೀ ನರೇಂದ್ರಾನಂದ ಮಹಾರಾಜ್​ ಹೇಳಿದ್ದಾರೆ.

ನಮಗೆ ರಾಮ ಜನ್ಮಭೂಮಿ ಟ್ರಸ್ಟ್​ನಲ್ಲಿ ಯಾವುದೇ ಹುದ್ದೆ ಬೇಡ. ಮಂದಿರ ನಿರ್ಮಾಣ ಕಾರ್ಯ ಶುಭಕಾಲದಲ್ಲಿ ಆರಂಭವಾಗಬೇಕು ಎಂಬುದಷ್ಟೇ ನಮ್ಮ ಇಚ್ಛೆಯಾಗಿದೆ. ಇಂಥ ಅಶುಭ ಗಳಿಗೆಯಲ್ಲಿ ಭೂಮಿಪೂಜೆ ನಡೆಸುವುದು ಬೇಡ ಎಂದು ಶ್ರೀ ಅವಿಕ್ತೇಶ್ವರಾನಂದ ಶ್ರಿಗಳು ಹೇಳಿದ್ದಾರೆ.