ನವದೆಹಲಿ: ಪಂಜಾಬ್ ಸಿಎಂ ಹಾಗೂ ಎಎಪಿ ನಾಯಕ ಭಗವಂತ್ ಮಾನ್ ಅವರ ದೆಹಲಿ ನಿವಾಸದ ಮೇಲೆ ಗುರುವಾರ ಚುನಾವಣಾ ಆಯೋಗದ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎಂದು ಎಎಪಿ ಆರೋಪ ಮಾಡಿದೆ. ಇದು ರಾಜಕೀಯ ವಾಗ್ವಾದಕ್ಕೂ ಕಾರಣವಾಗಿದೆ. ಆದರೆ ಇದನ್ನು ಚುನಾವಣಾ ಆಯೋಗ ತಿರಸ್ಕರಿಸಿದೆ.
ಪ್ರಸ್ತುತ ದೆಹಲಿ ಚುನಾವಣೆಗೆ ಪ್ರಚಾರ ನಡೆಸುತ್ತಿರುವ ಮಾನ್, ದೆಹಲಿಯ ಕಪುರ್ತಲಾ ಪ್ರದೇಶದಲ್ಲಿ ಮನೆ ಹೊಂದಿದ್ದಾರೆ. ಗುರುವಾರ ಚುನಾವಣಾ ಅಧಿಕಾರಿಗಳ ಈ ಮನೆಯ ಮೇಲೆ ದಾಳಿ ಮಾಡಿ, ಶೋಧ ಕಾರ್ಯ ನಡೆಸಿದ್ದಾರೆ ಎಂದು ಎಎಪಿ ನಾಯಕರು ದೂರಿದ್ದಾರೆ. ‘ಬಿಜೆಪಿಯವರು ಹಾಡಹಗಲೇ ಮತದಾರರಿಗೆ ಹಣ ಹಂಚುತ್ತಿದ್ದಾರೆ. ಅವರ ಮೇಲೆ ದಾಳಿ ಮಾಡುವುದನ್ನು ಬಿಟ್ಟು ಅಧಿಕಾರಿಗಳು ಎಎಪಿ ನಾಯಕರ ಮನೆ ಮೇಲೆ ದಾಳಿ ನಡೆಸುತ್ತಿದ್ದಾರೆ. ಮತದಾರರಿಗೆ ಹಣ ಹಂಚುತ್ತಿರುವುದಾಗಿ ಬಿಜೆಪಿ ಅಭ್ಯರ್ಥಿ ಪರ್ವೆಶ್ ವರ್ವ ಇತ್ತೀಚೆಗೆ ಬಹಿರಂಗವಾಗಿ ಹೇಳಿಕೆ ನೀಡಿದ್ದಾರೆ. ಆದರೆ ಅವರ ಮೇಲೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೆಹಲಿ ಸಿಎಂ ಆತಿಷಿ, ಮಾಜಿ ಸಿಎಂ ಕೇಜ್ರಿವಾಲ್ ಆರೋಪ ಮಾಡಿದ್ದಾರೆ. ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಕೂಡ ಈ ಆರೋಪಕ್ಕೆ ದನಿಗೂಡಿಸಿದ್ದಾರೆ.
ನದಿ ಮಲಿನಕ್ಕೆ ಕೇಜ್ರಿವಾಲ್ ಕಾರಣ: ಯಮುನಾ ನದಿ ಕಲುಷಿತಗೊಳ್ಳಲು ಎಎಪಿ ಮುಖ್ಯಸ್ಥ ಅರವಿಂದ ಕೇಜ್ರಿವಾಲ್ ಅವಕಾಶ ಮಾಡಿಕೊಟ್ಟಿದ್ದರು. ನಂತರ ಈ ನೀರನ್ನು ಕುಡಿಯುವಂತೆ ದೆಹಲಿಯ ಜನರನ್ನು ಅವರು ಒತ್ತಾಯಿಸಿದರು ಎಂದು ಕೇಂದ್ರ ಗೃಹ ಸಚಿವ ಅಮಿತ್ ಷಾ ಗುರುವಾರ ಆರೋಪಿಸಿದ್ದಾರೆ. ಲಂಡನ್ನಲ್ಲಿರುವ ಥೇಮ್ಸ್ ನದಿಯಂತೆ ಯಮುನಾ ನದಿಯನ್ನು ಶುದ್ಧೀಕರಿಸುವ ಭರವಸೆ ಏನಾಯಿತು? ಎಂದು ಎಎಪಿಯನ್ನು ಪ್ರಶ್ನಿಸಿದ ಅಮಿತ್ ಷಾ, ಹರಿಯಾಣದ ಬಿಜೆಪಿ ಸರ್ಕಾರವು ನದಿಯಲ್ಲಿ ವಿಷವನ್ನು ಬೆರೆಸುತ್ತಿದೆ ಎಂದು ಸುಳ್ಳು ಆರೋಪ ಮಾಡುವ ಮೂಲಕ ಕೇಜ್ರಿವಾಲ್ ಕ್ಷುಲ್ಲಕ ರಾಜಕಾರಣ ಮಾಡುತ್ತಿದ್ದಾರೆ ಎಂದು ತಿರುಗೇಟು ನೀಡಿದರು. ಎಎಪಿ ಸರ್ಕಾರದ ಭ್ರಷ್ಟಾಚಾರದಿಂದಾಗಿ ಕಳೆದ 10 ವರ್ಷಗಳಲ್ಲಿ ಯಮುನಾ ನದಿಯನ್ನು ಸ್ವಚ್ಛಗೊಳಿಸಲು ಎಎಪಿ ಸರ್ಕಾರಕ್ಕೆ ಸಾಧ್ಯವಾಗಲಿಲ್ಲ. ಈಗ ಚುನಾವಣೆಯಲ್ಲಿ ಗೆಲ್ಲಲು ಕೇಜ್ರಿವಾಲ್ ಹರಿಯಾಣದ ಮೇಲೆ ಸುಳ್ಳು ಆರೋಪ ಮಾಡುತ್ತಿದ್ದಾರೆ. ನದಿಯನ್ನು ಸ್ವಚ್ಛಗೊಳಿಸಲು ಬಳಸಬೇಕಾದ ಹಣವನ್ನು ಎಎಪಿ ಭ್ರಷ್ಟಾಚಾರದಲ್ಲಿ ವ್ಯರ್ಥ ಮಾಡಿದೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಸೋಲನ್ನು ಈಗಾಗಲೇ ಅರಿತುಕೊಂಡಿರುವ ಕೇಜ್ರಿವಾಲ್, ಕ್ಷುಲ್ಲಕ ರಾಜಕಾರಣ ನಡೆಸುತ್ತಿದ್ದಾರೆ ಎಂದು ಸಚಿವ ಷಾ ಆರೋಪಿಸಿದ್ದಾರೆ.
ಆಯೋಗ ಹೇಳಿದ್ದೇನು?: ಹಣ ಹಂಚಲಾಗುತ್ತಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಲಾಗಿತ್ತು. ಆದರೆ ಅಲ್ಲಿನ ಭದ್ರತಾ ಸಿಬ್ಬಂದಿ ತಮ್ಮನ್ನು ಒಳಗೆ ಬಿಡಲಿಲ್ಲ. ಮನೆಯ ಎಲ್ಲ ಕೊಠಡಿಗಳನ್ನು ಬಂದ್ ಮಾಡಲಾಗಿತ್ತು. ತಾವು ಯಾವುದೇ ದಾಳಿಯನ್ನು ನಡೆಸಿಲ್ಲ. ದೂರಿನ ಹಿನ್ನೆಲೆಯಲ್ಲಿ ನಿಯಮದ ಪ್ರಕಾರ ಕ್ರಮ ಕೈಗೊಂಡಿದ್ದೇವೆ. ಆಯೋಗದ ಫ್ಲೈಯಿಂಗ್ ಸ್ಕಾ್ವಡ್ ಸಿಬ್ಬಂದಿ ಸಿಎಂ ಮಾನ್ ಮನೆಗೆ ಭೇಟಿ ನೀಡಿದ್ದರು ಎಂದು ಆಯೋಗ ಸ್ಪಷ್ಟನೆ ನೀಡಿದೆ. ಸಿಎಂ ಮಾನ್ ಮನೆ ಬಳಿ ತೆರಳಿದ್ದ ಸಂದರ್ಭದಲ್ಲಿ ಪರಿಶೀಲನೆ ನಡೆಸಲು ತಮಗೆ ಅವಕಾಶ ನೀಡಿಲ್ಲ. ಕರ್ತವ್ಯಕ್ಕೆ ಅಡ್ಡಿ ಪಡಿಸಲಾಗಿದೆ. ಈ ಕುರಿತು ಠಾಣೆಯಲ್ಲಿ ದೂರು ದಾಖಲಿಸಲಾಗಿದೆ ಎಂದು ಚುನಾವಣಾ ಅಧಿಕಾರಿಗಳು ತಿಳಿಸಿದ್ದಾರೆ.