ನವದೆಹಲಿ: ಕಾಂಗ್ರೆಸ್ ಪಕ್ಷದ ಚುಕ್ಕಾಣಿ ಹಿಡಿದಿರುವ ಗಾಂಧಿ ಕುಟುಂಬದೆಡೆಗೆ ಬೆಟ್ಟು ಮಾಡಿ, ಪಂಜಾಬ್ ಪರಿಸ್ಥಿತಿ ಸೇರಿದಂತೆ ಪಕ್ಷದ ಇತ್ತೀಚಿನ ನಿರ್ಧಾರಗಳ ಬಗ್ಗೆ ಹಿರಿಯ ಕಾಂಗ್ರೆಸ್ ನಾಯಕ ಕಪಿಲ್ ಸಿಬಾಲ್ ಅವರು ನಿನ್ನೆ ಸಾರ್ವಜನಿಕವಾಗಿ ಪ್ರಶ್ನೆ ಎತ್ತಿದ್ದರು. ಚುನಾಯಿತ ಅಧ್ಯಕ್ಷರೇ ಇಲ್ಲದೆ ಪಕ್ಷ ನಡೆಯುತ್ತಿದೆ ಎಂದು ಟೀಕಿಸಿದ್ದರು. ಸಿಬಾಲ್ರ ಈ ಮಾತುಗಳು ಮಾಧ್ಯಮದಲ್ಲಿ ಪ್ರಸಾರವಾದ ಬೆನ್ನಲ್ಲೇ ಕೆಲವು ಯುವ ಕಾಂಗ್ರೆಸ್ ಕಾರ್ಯಕರ್ತರು ಅವರ ಮನೆಯ ಮೇಲೆ ದಾಳಿ ನಡೆಸಿರುವ ಪ್ರಸಂಗ ನಡೆದಿದೆ.
ಪಕ್ಷಕ್ಕೆ ಪೂರ್ಣಕಾಲೀನ ಅಧ್ಯಕ್ಷರ ಅಗತ್ಯ ಸೇರಿದಂತೆ ಹಲವು ಸಂಘಟನಾತ್ಮಕ ಸುಧಾರಣೆಗಳಾಗಬೇಕು ಎಂದು ಆಗ್ರಹಿಸುತ್ತಿರುವ ಹಿರಿಯ ನಾಯಕರ ಗುಂಪಾದ ಜಿ-23 ಸದಸ್ಯರಲ್ಲೊಬ್ಬರಾದ ಸಿಬಾಲ್, "ನಾವು ಜೀ ಹುಜೂರ್ 23 ಅಲ್ಲ" ಎಂದು ವ್ಯಂಗ್ಯವಾಡಿದ್ದರು. ಪಂಜಾಬ್ ಪರಿಸ್ಥಿತಿ ಮತ್ತು ಹಲವು ನಾಯಕರು ಪಕ್ಷ ಬಿಟ್ಟು ಹೋಗುತ್ತಿರುವ ಬಗ್ಗೆ ತಕ್ಷಣ ಕಾಂಗ್ರೆಸ್ ಕಾರ್ಯಕಾರಿ ಸಭೆ ನಡೆಸಿ ಚರ್ಚಿಸಬೇಕು ಎಂದು ಆಗ್ರಹಿಸಿದ್ದರು.
ಇದಾದ ಕೆಲವೇ ಗಂಟೆಗಳಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಗುಂಪೊಂದು "ಗೆಟ್ ವೆಲ್ ಸೂನ್, ಕಪಿಲ್ ಸಿಬಾಲ್" ಎಂಬ ಫಲಕಗಳನ್ನು ಹಿಡಿದು, ಅವರ ಮನೆಯ ಮುಂದೆ ಪ್ರತಿಭಟನೆ ನಡೆಸಿದೆ. ನೆರೆದಿದ್ದ ಹಲವು ಯುವ ಕಾಂಗ್ರೆಸ್ ಕಾರ್ಯಕರ್ತರು, "ಪಕ್ಷವನ್ನು ತೊರೆಯಿರಿ! ಪ್ರಜ್ಞೆಗೆ ಬನ್ನಿ" ಎಂದೂ, "ರಾಹುಲ್ ಗಾಂಧಿ ಜಿಂದಾಬಾದ್" ಎಂದೂ ಘೋಷಣೆಗಳನ್ನು ಕೂಗಿದ್ದರು. ಕೆಲವರು ಸಿಬಾಲ್ ಮನೆಯ ಮೇಲೆ ಟೊಮೆಟೊಗಳನ್ನು ಎಸೆದು, ಅವರ ಕಾರನ್ನು ಹಾನಿಗೊಳಿಸಿದ್ದರು ಎನ್ನಲಾಗಿದೆ.
ಈ ಬಗ್ಗೆ ಇಂದು ಮತ್ತೊಬ್ಬ ಜಿ-23 ನಾಯಕ ಆನಂದ್ ಶರ್ಮ ಪ್ರತಿಕ್ರಿಯಿಸಿದ್ದಾರೆ. ಕಪಿಲ್ ಸಿಬಾಲ್ ಮನೆಯ ಮೇಲಿನ ದಾಳಿ ಮತ್ತು ಗೂಂಡಾಗಿರಿಯ ಬಗ್ಗೆ ಕೇಳಿ ಆಘಾತ ಮತ್ತು ಬೇಸರ ಉಂಟಾಗಿದೆ. ಈ ನಡವಳಿಕೆ ಪಕ್ಷಕ್ಕೆ ಕೆಟ್ಟ ಹೆಸರು ತರುವಂಥದ್ದು ಎಂದು ಟ್ವೀಟ್ ಮಾಡಿದ್ದಾರೆ. ಜೊತೆಗೆ, "ಕಾಂಗ್ರೆಸ್ಗೆ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಎತ್ತಿಹಿಡಿಯುವ ಇತಿಹಾಸವಿದೆ. ಅಭಿಪ್ರಾಯಭೇದವು ಪ್ರಜಾಪ್ರಭುತ್ವದ ಅವಿಭಾಜ್ಯ ಅಂಗ. ಅಸಹನೆ ಮತ್ತು ಹಿಂಸೆ ಕಾಂಗ್ರೆಸ್ ಮೌಲ್ಯಗಳಿಗೆ, ಸಂಸ್ಕೃತಿಗೆ ವಿರುದ್ದವಾಗಿದೆ. ಇದಕ್ಕೆ ಕಾರಣರಾದವರನ್ನು ಗುರುತಿಸಿ ಶಿಸ್ತು ಕ್ರಮ ತೆಗೆದುಕೊಳ್ಳಬೇಕು" ಎಂದು ಶರ್ಮ ಮತ್ತೊಂದು ಟ್ವೀಟ್ನಲ್ಲಿ ಹೇಳಿದ್ದಾರೆ. (ಏಜೆನ್ಸೀಸ್)