ನ್ಯೂಸ್

ರಿಷಬ್ ಶೆಟ್ಟಿ, ಯಶ್... 'ಕಾಂತಾರ' ಮೆಚ್ಚಿದ ಸ್ಟಾರ್​ ನಿರ್ದೇಶಕ, ಕನ್ನಡ ನಟರನ್ನು ಕೊಂಡಾಡಿದ ಅಟ್ಲಿ | Kantara Chapter 1

Kantara Chapter 1: ಅ.02ರಂದು ರಿಲೀಸ್​ ಆದ ರಿಷಬ್ ಶೆಟ್ಟಿ ನಟಿಸಿ ನಿರ್ದೇಶಿಸಿದ 'ಕಾಂತಾರ ಚಾಪ್ಟರ್ 1' ಚಿತ್ರವು ಇದೀಗ ತೆರೆಕಂಡ 9 ದಿನಗಳಲ್ಲಿ ಜಾಗತಿಕವಾಗಿ 500 ಕೋಟಿ ರೂ. ಲಾಭ ಗಳಿಸಿದೆ. ಇದು ಚಿತ್ರತಂಡಕ್ಕೆ ಹೊಸ ಮೈಲಿಗಲ್ಲು ನೀಡಿದ್ದು, ವ್ಯಾಪಕ ಮನ್ನಣೆಯನ್ನು ತಂದುಕೊಟ್ಟಿದೆ. ದಿನ ಕಳೆದಂತೆ ಚಿತ್ರವು ಪ್ರೇಕ್ಷಕರನ್ನು ಚಿತ್ರಮಂದಿರಗಳತ್ತ ಹೆಚ್ಚಿನ ಸಂಖ್ಯೆಯಲ್ಲಿ ಕರೆತರುವಲ್ಲಿಯೂ ಯಶಸ್ವಿಯಾಗಿದೆ.

ಇನ್ನು ಇತ್ತೀಚೆಗಷ್ಟೇ ವರ್ಲ್ಡ್​ ಪಿಕಲ್​ಬಾಲ್​ ಲೀಗ್​ ನಿಮಿತ್ತ ಬೆಂಗಳೂರಿಗೆ ಆಗಮಿಸಿದ್ದ ಸ್ಟಾರ್​ ನಿರ್ದೇಶಕ ಅಟ್ಲಿ ಕುಮಾರ್​, ತಾವು 'ಕಾಂತಾರ' ಚಿತ್ರವನ್ನು ವೀಕ್ಷಿಸಿದ್ದಾಗಿ ಹೇಳಿದ್ದಾರೆ. ಇದರೊಟ್ಟಿಗೆ ಕನ್ನಡ ಸಿನಿಮಾಗಳ ಬೆಳವಣಿಗೆ ಹಾಗೂ ನಟರಾದ ರಿಷಬ್ ಶೆಟ್ಟಿ ಮತ್ತು ಯಶ್​ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

'ಸಿನಿಮಾ ಎಕ್ಸ್​ಪ್ರೆಸ್'​ ವರದಿ ಪ್ರಕಾರ, "ಕಾಂತಾರ ಒಂದು ಅದ್ಭುತ. ಚಿತ್ರವನ್ನು ವೀಕ್ಷಿಸಿದ ಬಳಿಕ ನಾನು ರಿಷಬ್ ಅವರೊಟ್ಟಿಗೆ ಮಾತನಾಡಿದೆ. ಈ ಚಿತ್ರಕ್ಕೆ ನನ್ನ ವಿಶೇಷ ಮೆಚ್ಚುಗೆ ಹಾಗೂ ಅಭಿನಂದನೆ. ಚಿತ್ರದ ಬಗ್ಗೆ ನನಗೆ ಖುಷಿಯಿದೆ. ಕಳೆದ ವರ್ಷಗಳಲ್ಲಿ ರಿಷಬ್ ಮತ್ತು ಯಶ್​ ಕನ್ನಡ ಸಿನಿಮಾವನ್ನು ಮತ್ತೊಂದು ಎತ್ತರಕ್ಕೆ ಕೊಂಡೊಯ್ದಿದ್ದಾರೆ. ನನಗೆ ಯಶ್​ ಅವರು ಒಳ್ಳೆಯ ಸ್ನೇಹಿತರು. ಇವರಿಬ್ಬರ ಕೊಡುಗೆಗಳು ಚಿತ್ರರಂಗಕ್ಕೆ ಅಪಾರ ಮತ್ತು ನಮ್ಮಂತಹ ಸಿನಿಮಾ ತಯಾರಕರಿಗೆ ಸ್ಪೂರ್ತಿ" ಎಂದಿದ್ದಾರೆ ಅಟ್ಲಿ.

ಬ್ಲಾಕ್​ಬಸ್ಟರ್​ ಚಿತ್ರಗಳಾದ 'ಜವಾನ್'​, 'ಬಿಗಿಲ್'​ ಮತ್ತು 'ತೇರಿ' ಮೂಲಕ ಭಾರತೀಯ ಚಿತ್ರೋದ್ಯಮದಲ್ಲಿ ತಮ್ಮ ಹೆಸರನ್ನು ಪರಿಚಯಿಸಿರುವ ಅಟ್ಲೀ, ಇದೀಗ ಅಲ್ಲು ಅರ್ಜುನ್​ ಅವರೊಂದಿಗೆ ಬಹುದೊಡ್ಡ ಪ್ರಾಜೆಕ್ಟ್​ಗಾಗಿ ಕೈಜೋಡಿಸಿದ್ದಾರೆ. ಪ್ರಸ್ತುತ, ಈ ಚಿತ್ರದ ಕೆಲಸದಲ್ಲಿ ಸಖತ್ ಬಿಜಿಯಾಗಿದ್ದಾರೆ,(ಏಜೆನ್ಸೀಸ್).