ನವದೆಹಲಿ: ಅರವಿಂದ್ ಕೇಜ್ರಿವಾಲ್ ಅವರು ನನ್ನ ಮೇಲೆ ವಿಶ್ವಾಸವಿಟ್ಟು, ನನನ್ನು ಶಾಸಕಿಯನ್ನಾಗಿ, ಸಚಿವೆಯನ್ನಾಗಿ ಮಾಡಿ ಇಂದು ಮುಖ್ಯಮಂತ್ರಿ ಆಗುವ ಜವಾಬ್ದಾರಿ ನೀಡಿದ್ದಾರೆ ಎಂದು ತಿಳಿಸಿದ ಅತಿಶಿ ಅರವಿಂದ್ ಕೇಜ್ರಿವಾಲ್ ಅವರಿಗೆ ಧನ್ಯವಾದ ತಿಳಿಸಿದ್ದಾರೆ.
ದೆಹಲಿ ಸಿಎಂ ಆಗಿ ನೇಮಕಗೊಂಡ ಬಳಿಕ ಮಾತನಾಡಿದ ಸಚಿವೆ ಅತಿಶಿ, ರಾಜಕಾರಣಿಯೊಬ್ಬರು ಮುಖ್ಯಮಂತ್ರಿ ಆಗಲು ಸಾಧ್ಯವಿರುವುದು ಆಪ್ ಪಕ್ಷದಲ್ಲಿ ಮಾತ್ರ. ಅರವಿಂದ್ ಕೇಜ್ರಿವಾಲ್ ಅವರು ನನ್ನ ಮೇಲೆ ಇಷ್ಟು ನಂಬಿಕೆ ಇಟ್ಟಿರುವುದಕ್ಕೆ ಸಂತೋಷವಾಗಿದೆ. ಆದರೆ ಅದಕ್ಕಿಂತ ಹೆಚ್ಚಾಗಿ ನನ್ನ ಅಣ್ಣ ರಾಜೀನಾಮೆ ನೀಡುತ್ತಿರುವ ಕಾರಣ ನನಗೆ ಬೇಸರವಾಗುತ್ತಿದೆ. ದೆಹಲಿಯಲ್ಲಿ ಒಬ್ಬರೇ ಸಿಎಂ, ಅವರ ಹೆಸರು ಅರವಿಂದ್ ಕೇಜ್ರಿವಾಲ್ ಎಂದು ಎಎಪಿ ಶಾಸಕರು ಮತ್ತು ದೆಹಲಿಯ ಜನರ ಪರವಾಗಿ ನಾನು ಹೇಳಲು ಬಯಸುತ್ತೇನೆ. ನೀವು ನನ್ನನ್ನು ಅಭಿನಂದಿಸಬೇಡಿ ಎಂದು ಅತಿಶಿ ತಿಳಿಸಿದರು.
ಅರವಿಂದ್ ಕೇಜ್ರಿವಾಲ್ ಅವರು ಈ ಹುದ್ದೆಗೆ ಮರಳುವವರೆಗೂ ಅವರ ಮಾರ್ಗದರ್ಶನದಲ್ಲಿ ಕೆಲಸ ಮಾಡುವುದಾಗಿ ಅತಿಶಿ ಹೇಳಿದರು. ದೆಹಲಿಯ ಜನರು ಉಚಿತ ವಿದ್ಯುತ್, ಉತ್ತಮ ಶಿಕ್ಷಣ ಮತ್ತು ಉಚಿತ ಚಿಕಿತ್ಸೆಯಂತಹ ಸೌಲಭ್ಯ ಪಡೆಯುತ್ತಾರೆ ಎಂಬುದನ್ನು ಖಚಿತಪಡಿಸುತ್ತೇನೆ. ಈ ಹಿಂದೆ ಯಾವ ನಾಯಕರೂ ಮಾಡದ ಕೆಲಸವನ್ನು ಅರವಿಂದ್ ಕೇಜ್ರಿವಾಲ್ ಮಾಡಿದ್ದಾರೆ. ಅವರು ಸಾರ್ವಜನಿಕ ನ್ಯಾಯಾಲಯಕ್ಕೆ ಹೋಗಲು ನಿರ್ಧರಿಸಿದ್ದಾರೆ. ದೆಹಲಿಯ ಜನರು ಅವರನ್ನು ಮತ್ತೆ ದೆಹಲಿಯ ಮುಖ್ಯಮಂತ್ರಿಯಾಗಿ ಆಯ್ಕೆ ಮಾಡುವವರೆಗೆ ಕಾಯುತ್ತಾರೆ.ಇಂತಹ ಉದಾಹರಣೆ ಭಾರತದ ಪ್ರಜಾಪ್ರಭುತ್ವದಲ್ಲಿ ಇನ್ನೊಂದಿಲ್ಲ ಎಂದು ಅತಿಶಿ ಹೇಳಿದರು.
ಮಂಗಳವಾರ(ಸೆಪ್ಟೆಂಬರ್ 17) ನಡೆದ ಎಎಪಿ ಶಾಸಕಾಂಗ ಸಭೆಯಲ್ಲಿ ಪಕ್ಷದ ಶಾಸಕರು ಅತಿಶಿ ಅವರನ್ನು ತಮ್ಮ ನಾಯಕಿಯನ್ನಾಗಿ ಆಯ್ಕೆ ಮಾಡಿದ್ದಾರೆ. ಇದರರ್ಥ ಅವರು ದೆಹಲಿಯ ನೂತನ ಮುಖ್ಯಮಂತ್ರಿ (ಸಿಎಂ) ಆಗುತ್ತಾರೆ. ದೆಹಲಿ ಲೆಫ್ಟಿನೆಂಟ್ ಗವರ್ನರ್‌ಗೆ ಕೇಜ್ರಿವಾಲ್ ರಾಜೀನಾಮೆ ನೀಡಿದ ನಂತರ ಅತಿಶಿ ಮಂಗಳವಾರ ಸಂಜೆ 4:30ರ ಸುಮಾರಿಗೆ ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆಯಿದೆ.(ಎಜೆನ್ಸೀಸ್)