ನ್ಯೂಸ್

Bihar Election | ಅಕ್ರಮ ಮತದಾನ ತಡೆಯಲು ಬುರ್ಖಾ ಧರಿಸಿದ ಮತದಾರರ ಪರಿಶೀಲನೆ ನಡೆಯಲಿ ಎಂದ ಬಿಹಾರ ಡಿಸಿಎಂ ಸಿನ್ಹಾ

Bihar Election: ಬಿಹಾರ ವಿಧಾನಸಭಾ ಚುನಾವಣೆಯ ಸಮಯದಲ್ಲಿ ಬುರ್ಖಾ ಧರಿಸಿದ ಮತದಾರರನ್ನು, ಅವರ ಗುರುತಿನ ಚೀಟಿಯೊಂದಿಗೆ ಕಟ್ಟುನಿಟ್ಟಾಗಿ ಪರಿಶೀಲಿಸಬೇಕು ಎಂಬ ಬಿಜೆಪಿ ನಾಯಕರ ಹೇಳಿಕೆಯನ್ನು ಉಪಮುಖ್ಯಮಂತ್ರಿ ವಿಜಯ್ ಕುಮಾರ್ ಸಿನ್ಹಾ ಸಮರ್ಥಿಸಿಕೊಂಡಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಸಿನ್ಹಾ, ಇದು ಸದಾ ಕಾಲ ಚರ್ಚೆಯ ವಿಷಯವಾಗಿದ್ದು, ಒಂದು ಕಾಲದಲ್ಲಿ ಬುರ್ಖಾ ಮತ್ತು ಘೂನ್‌ಘಾಟ್ ಧರಿಸಿ ಅಕ್ರಮ ಮತ ಚಲಾಯಿಸಲಾಗುತ್ತಿತ್ತು, ಆದ್ದರಿಂದ, ಅಂತಹವರನ್ನು ಪರಿಶೀಲಿಸುವುದು ತಪ್ಪಲ್ಲ ಎಂದರು. ನಾವು ಎಲ್ಲಾ ರೀತಿಯ ಮಹಿಳಾ ಶಕ್ತಿಯನ್ನು ಗೌರವಿಸುತ್ತೇವೆ. ಈ ಶಕ್ತಿ ಭಗವತಿಯ ರೂಪವಾಗಿದ್ದು, ತನ್ನ ಮತದಾನದ ಹಕ್ಕನ್ನು ಪ್ರಾಮಾಣಿವಾಗಿ ಚಲಾಯಿಸುವುದು ಸಾಂವಿಧಾನಿಕ ಜವಾಬ್ದಾರಿಯಾಗಿದೆ ಎಂದು ಹೇಳಿದರು.

ಚುನಾವಣಾ ಆಯೋಗಕ್ಕೆ ಬಿಜೆಪಿ ಒತ್ತಾಯ..

ಮತಗಟ್ಟೆಗಳಲ್ಲಿ ಬುರ್ಖಾ ಧರಿಸಿದ ಮಹಿಳೆಯರ ಗುರುತಿನ ಚೀಟಿಗಳ ಕುರಿತು ಸಂಪೂರ್ಣ ಪರಿಶೀಲನೆ ನಡೆಸಬೇಕೆಂದು ಬಿಹಾರ ಬಿಜೆಪಿ ಚುನಾವಣಾ ಆಯೋಗವನ್ನು ಒತ್ತಾಯಿಸಿದ ಒಂದು ದಿನದ ನಂತರ ಸಿನ್ಹಾ ಅವರ ಹೇಳಿಕೆಗಳು ಹೊರಬಂದಿವೆ. ನಕಲಿ ಮತದಾನವನ್ನು ತಡೆಗಟ್ಟಲು ಮತದಾರರ ಗುರುತಿನ ಚೀಟಿಯೊಂದಿಗೆ, ಮುಖ ಪರಿಶೀಲನೆ ನಡೆಸಬೇಕು ಎಂದು ಬಿಜೆಪಿ ಮನವಿ ಮಾಡಿದೆ.

ಪಾಟ್ನಾದಲ್ಲಿ ನಡೆದ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್​ ಜೊತೆಗಿನ ಸಭೆಯ ಬಳಿಕ, ಬಿಹಾರ ಬಿಜೆಪಿ ಮುಖ್ಯಸ್ಥ ದಿಲೀಪ್ ಜೈಸ್ವಾಲ್, ಮತದಾರರ, ವಿಶೇಷವಾಗಿ ಬುರ್ಖಾ ಧರಿಸಿದ ಮಹಿಳೆಯರ ಮುಖಗಳ ಎಣಿಕೆಯನ್ನು ಆಯಾ ಎಪಿಕ್ ಕಾರ್ಡ್‌ಗಳೊಂದಿಗೆ ಖಚಿತಪಡಿಸಿಕೊಳ್ಳಬೇಕು ಇದರಿಂದ ನಿಜವಾದ ಮತದಾರರು ಮಾತ್ರ ತಮ್ಮ ಮತದಾನವನ್ನು ಚಲಾಯಿಸಬಹುದು ಎಂದು ಹೇಳಿದರು.

ಜೈಸ್ವಾಲ್​ ಹೇಳಿಕೆಯನ್ನು ರಾಷ್ಟ್ರೀಯ ಜನತಾ ದಳ ಟೀಕಿಸಿದ್ದು, ಬಿಜೆಪಿ ಮತದಾರರನ್ನು ಧ್ರುವೀಕರಿಸುವ ಪ್ರಯತ್ನ ನಡೆಸುತ್ತಿದೆ ಎಂದು ಆರೋಪಿಸಿದೆ. ಇದು ಸಂಪೂರ್ಣ ರಾಜಕೀಯ ಪಿತೂರಿಯಾಗಿದೆ, ಮತದಾರರನ್ನು ಗುರುತಿಸುವುದು ದೊಡ್ಡ ವಿಷಯವಲ್ಲ, ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆಯ ನಂತರ ಹೊಸ ಎಪಿಕ್ ಕಾರ್ಡ್‌ಗಳನ್ನು ನೀಡಲಾಗುತ್ತಿದೆ. ಬಿಜೆಪಿ ತನ್ನ ಕಾರ್ಯಸೂಚಿಯನ್ನು ಮುಂದಕ್ಕೆ ತಳ್ಳಲು ಮಾತ್ರ ಬಯಸುತ್ತದೆ ಎಂದು ಆರ್‌ಜೆಡಿ ಸಂಸದ ಅಭಯ್ ಕುಶ್ವಾಹ ವಾಗ್ದಾಳಿ ನಡೆಸಿದ್ದಾರೆ.

ಪಾರದರ್ಶಕತೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ದುರ್ಬಲ ವರ್ಗಗಳ ಮತದಾರರನ್ನು ಬೆದರಿಸುವುದನ್ನು ತಡೆಯಲು ಎಲ್ಲಾ ಸೂಕ್ಷ್ಮ ಮತಗಟ್ಟೆಗಳನ್ನು ಗುರುತಿಸಿ, ರಾಜಕೀಯ ಪಕ್ಷಗಳೊಂದಿಗೆ ವಿವರಗಳನ್ನು ಹಂಚಿಕೊಳ್ಳುವಂತೆ ಆರ್‌ಜೆಡಿ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ.

2024 ರ ಲೋಕಸಭಾ ಚುನಾವಣೆಯ ಸಮಯದಲ್ಲಿ ದೆಹಲಿ ಬಿಜೆಪಿ ನಾಯಕರು ನಕಲಿ ಮತದಾನದ ಬಗ್ಗೆ ಕಳವಳ ವ್ಯಕ್ತಪಡಿಸಿದಾಗ ಮತ್ತು ಹೈದರಾಬಾದ್ ಬಿಜೆಪಿ ಅಭ್ಯರ್ಥಿ ಮಾಧವಿ ಲತಾ ಅವರು ಮತಗಟ್ಟೆಯಲ್ಲಿ ಮಹಿಳೆಯರ ಗುರುತಿನ ಚೀಟಿಗಳನ್ನು ಪರಿಶೀಲಿಸುತ್ತಿರುವುದನ್ನು ಚಿತ್ರೀಕರಿಸಿದ ನಂತರ ಪ್ರತಿಕ್ರಿಯೆಯನ್ನು ಎದುರಿಸಿದಾಗ ಬುರ್ಖಾ ಧರಿಸಿದ ಮತದಾರರ ಪರಿಶೀಲನೆಗೆ ಇದೇ ರೀತಿಯ ಬೇಡಿಕೆಗಳು ಬಂದವು.(ಏಜೆನ್ಸೀಸ್​)