ಪುಣೆ: ಆಕ್ಸ್ಫರ್ಡ್ ಮತ್ತು ಅಸ್ತ್ರಾಜೆನೆಕಾ ಸಂಸ್ಥೆ ತಯಾರಿಸಿರುವ ಕೋವಿಶೀಲ್ಡ್ ಲಸಿಕೆಯನ್ನು ಉತ್ಪಾದಿಸುತ್ತಿರುವ ಪುಣೆಯ ಸೆರಂ ಇನ್ಸ್ಟಿಟ್ಯೂಟ್ನಲ್ಲಿ ಸಂಭವಿಸಿದ ಬೆಂಕಿ ಅವಘಡಕ್ಕೆ ಕನಿಷ್ಠ ಐದು ಮಂದಿ ಬಲಿಯಾಗಿದ್ದಾರೆ ಎನ್ನಲಾಗಿದೆ. ಅವಘಡದಲ್ಲಿ ಲಸಿಕೆಗೆ ಯಾವುದೇ ತೊಂದರೆಯಾಗಿಲ್ಲ ಎಂದು ಸಂಸ್ಥೆ ತಿಳಿಸಿದೆ.
ಗುರುವಾರ ಮಧ್ಯಾಹ್ನ ಸಂಭವಿಸಿದ ಬೆಂಕಿ ಅವಘಡಕ್ಕೆ ಕನಿಷ್ಠ ಐದು ಮಂದಿ ಮೃತರಾಗಿರುವುದಾಗಿ ಪುಣೆ ಜಿಲ್ಲಾಧಿಕಾರಿ ರಾಜೇಶ್ ದೇಶ್ಮುಖ್ ತಿಳಿಸಿದ್ದಾರೆ. ನಾಲ್ವರನ್ನು ರಕ್ಷಣೆ ಮಾಡಲಾಗಿದೆ. ಪರಿಸ್ಥಿತಿ ನಿಯಂತ್ರಣಕ್ಕೆ ಬಂದಾಗ ಒಳಗೆ ನೋಡಿದಾಗ ಐದು ಮೃತ ದೇಹಗಳು ಸಿಕ್ಕಿವೆ ಎಂದು ಪುಣೆಯ ಮೇಯರ್ ಮುರುಳಿಧರ್ ಮೊಹೊಲ್ ತಿಳಿಸಿದ್ದಾರೆ. ಮೃತರಾದವರೆಲ್ಲರೂ ಕಟ್ಟದ ಕಾಮಗಾರಿಯಲ್ಲಿ ತೊಡಗಿಕೊಂಡವರಾಗಿದ್ದರು ಎನ್ನಲಾಗಿದೆ.
ಬೆಂಕಿ ಕಾಣಿಸಿಕೊಂಡ ಕಟ್ಟಡ ಇನ್ನೂ ನಿರ್ಮಾಣ ಹಂತದಲ್ಲಿತ್ತು. ಅಲ್ಲಿ ಯಾವುದೇ ಲಸಿಕೆ ಉತ್ಪಾದನೆಯಾಗಲೀ ಅಥವಾ ಶೇಖರಣೆ ಆಗಿರಲಿಲ್ಲ. ಕಟ್ಟಡದಲ್ಲಿ ವೆಲ್ಡಿಂಗ್ ಕೆಲಸ ಮಾಡಲಾಗುತ್ತಿತ್ತು. ಅದೇ ಕಾರಣದಿಂದಾಗಿ ಬೆಂಕಿ ಹತ್ತಿಕೊಂಡಿರಬಹುದು ಎನ್ನಲಾಗಿದೆ. ಆದರೆ ಬೆಂಕಿಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ.
ಇದನ್ನೂ ಓದಿ: ನೀವು ಈ ಆ್ಯಪ್ ಬಳಸುತ್ತಿದ್ದರೆ ನಿಮ್ಮ ಮಾಹಿತಿ ಕಳವಾಗಿರುವ ಸಾಧ್ಯತೆ ಇದೆ; 19 ಲಕ್ಷ ಬಳಕೆದಾರರ ಡೇಟಾ ಕದ್ದ ಹ್ಯಾಕರ್…
ಪುಣೆಯ ಮಂಜಿರಾ ಪ್ರದೇಶದಲ್ಲಿರುವ ಸೆರಂ ಇನ್ಸ್ಟಿಟ್ಯೂಟ್ನ ಟರ್ಮಿನಲ್ ಗೇಟ್-1 ಒಳಗಿನ SEZ-3 ಕಟ್ಟಡದ ನಾಲ್ಕನೇ ಮತ್ತು ಐದನೇ ಮಹಡಿಯಲ್ಲಿ ಗುರುವಾರ ಮಧ್ಯಾಹ್ನದ ವೇಳೆ ಬೆಂಕಿ ಕಾಣಿಸಿಕೊಂಡಿತ್ತು. ಅಗ್ನಿಶಾಮಕ ದಳದ 10 ವಾಹನಗಳು ಮತ್ತು ಎನ್ಡಿಆರ್ಎಫ್ ತಂಡ ಸ್ಥಳಕ್ಕೆ ಬಂದು ಬೆಂಕಿ ನಂದಿಸಿ, ಒಳಗಿದ್ದವರನ್ನು ರಕ್ಷಣೆ ಮಾಡಿದೆ. (ಏಜೆನ್ಸೀಸ್)