ಚೆನ್ನೈ: ಐವತ್ತೈದು ಪ್ರಯಾಣಿಕರಿದ್ದ ಟೂರಿಸ್ಟ್ ಬಸ್ಸೊಂದು ಕಂದಕಕ್ಕೆ ಉರುಳಿ ಸಂಭವಿಸಿದ ಭೀಕರ ಅಪಘಾತದಲ್ಲಿ ಎಂಟು ಮಂದಿ ಸಾವಿಗೀಡಾಗಿದ್ದು, ಸುಮಾರು 35 ಜನರು ಗಾಯಗೊಂಡಿದ್ದಾರೆ. ತಮಿಳುನಾಡಿನ ಮರಪಲಂ ಎಂಬಲ್ಲಿ ಇಂದು ಸಂಜೆ ಈ ಅಪಘಾತ ಸಂಭವಿಸಿದೆ.
ಊಟಿಯಿಂದ ಹೊರಟಿದ್ದ ಈ ಟೂರಿಸ್ಟ್ ಬಸ್ ಕೊಯಮತ್ತೂರು ಜಿಲ್ಲೆಯ ಮೆಟ್ಟುಪಾಳ್ಯಂ ಕಡೆಗೆ ಹೋಗುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಕುನೂರ್ ಬಳಿ ಚಾಲಕನ ನಿಯಂತ್ರಣ ತಪ್ಪಿದ ಬಸ್ ಸುಮಾರು 100 ಅಡಿ ಆಳದ ಕಂದಕಕ್ಕೆ ಉರುಳಿದೆ.
ಪರಿಣಾಮವಾಗಿ, ಬಸ್ನಲ್ಲಿದ್ದ ಸುಮಾರು 35 ಪ್ರಯಾಣಿಕರು ಗಾಯಗೊಂಡಿದ್ದು, ಆ ಪೈಕಿ ಕನಿಷ್ಠ 25 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಕುನೂರ್ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಅಪಘಾತದಲ್ಲಿ 8 ಮಂದಿ ಸಾವಿಗೀಡಾಗಿದ್ದಾರೆ. ಸತ್ತವರ ಪೈಕಿ ಮೂವರು ಮಹಿಳೆಯರು, ಐವರು ಪುರುಷರು ಎಂಬುದಾಗಿ ಕುನೂರ್ ಸರ್ಕಾರಿ ಆಸ್ಪತ್ರೆಯ ಜಂಟಿ ನಿರ್ದೇಶಕ ಪಳನಿ ಸ್ವಾಮಿ ತಿಳಿಸಿದ್ದಾರೆ. ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.