ನ್ಯೂಸ್

ಕನಿಷ್ಠ ಪಕ್ಷ 6 ತಿಂಗಳಾದ್ರೂ ಸಿಎಂ ಮಾಡಿ: ಏಕನಾಥ್​ ಶಿಂಧೆ ಮನವಿಗೆ ಬಿಜೆಪಿ ಹೇಳಿದ್ದಿಷ್ಟು...! Eknath Shinde

Eknath Shinde : ಮಹಾರಾಷ್ಟ್ರ ವಿಧಾನಸಭಾ ಚುನಾವಣಾ ಫಲಿತಾಂಶ ಹೊರಬಿದ್ದು 10 ದಿನಗಳು ಕಳೆದರೂ ಇನ್ನೂ ಹೊಸ ಸರ್ಕಾರ ರಚನೆಯಾಗಿಲ್ಲ. ಮುಖ್ಯಮಂತ್ರಿ ಸ್ಥಾನದ ವಿಚಾರವಾಗಿ ಸಭೆ ಮೇಲೆ ಸಭೆಗಳು ನಡೆಯುತ್ತಲೇ ಇವೆ. ಮಹಾಯುತಿ ಸರ್ಕಾರದ ಮುಖ್ಯಮಂತ್ರಿಯಾಗಿ ಮುಂದುವರಿಯಬೇಕೆನ್ನುವ ಹಂಗಾಮಿ ಸಿಎಂ ಹಾಗೂ ಶಿವಸೇನೆ ಮುಖಂಡ ಏಕನಾಥ್ ಶಿಂಧೆ ಅವರ ಬೇಡಿಕೆಯನ್ನು ಬಿಜೆಪಿ ತಿರಸ್ಕರಿಸಿದೆ. ಇದರ ಬೆನ್ನಲ್ಲೇ ಶಿಂಧೆ ಅವರು ಮೈತ್ರಿ ಮುಂದೆ ಮತ್ತೊಂದು ಬೇಡಿಕೆ ಇಟ್ಟಿದ್ದಾರೆ.

ಕಳೆದ ವಾರ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್​ ಷಾ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಶಿಂಧೆ ಹೊಸ ಬೇಡಿಕೆ ಮುಂದಿಟ್ಟಿದ್ದಾರೆ. ಅದೇನೆಂದರೆ, ಮಹಾಯುತಿ ಸರ್ಕಾರದಲ್ಲಿ ಪೂರ್ಣಾವಧಿವರೆಗೂ ಸಿಎಂ ಸ್ಥಾನವನ್ನು ನೀಡಲು ಸಾಧ್ಯವಾಗದಿದ್ದರೆ, ಕನಿಷ್ಠ ಪಕ್ಷ ಮೊದಲ 6 ತಿಂಗಳವರೆಗಾದರೂ ಸಿಎಂ ಸ್ಥಾನವನ್ನು ಬಿಟ್ಟುಕೊಡಿ ಎಂದು ಕೇಳಿದ್ದಾರಂತೆ. ಆದರೆ, ಶಿಂಧೆ ಬೇಡಿಕೆಯನ್ನ ಬಿಜೆಪಿ ನಾಯಕತ್ವ ಸಾರಾಸಗಟಾಗಿ ತಿರಸ್ಕರಿಸಿದ್ದು, ಇದೊಂದು ಕೆಟ್ಟ ನಿದರ್ಶನವನ್ನು ನೀಡುತ್ತದೆ ಎಂದು ಹೇಳಿದೆ. ಈ ವಿಚಾರವನ್ನು ಹಿರಿಯ ರಾಜಕಾರಣಿಯೊಬ್ಬರು ತಿಳಿಸಿದ್ದಾರೆ.

ಕೇವಲ ಆರು ತಿಂಗಳಿಗೆ ಸಿಎಂ ನೇಮಕ ಮಾಡುವ ವ್ಯವಸ್ಥೆ ಎಲ್ಲೂ ಇಲ್ಲ. ಇದೊಂದು ಕೆಟ್ಟ ನಿರ್ಧಾರ ಮತ್ತು ಆಡಳಿತದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂದು ಬಿಜೆಪಿ ಪದಾಧಿಕಾರಿಗಳ ಹೇಳಿಕೆಯನ್ನು ಉಲ್ಲೇಖಿಸಿ ಹಿರಿಯ ರಾಜಕಾರಣಿ ತಿಳಿಸಿದರು.

ಸರ್ಕಾರ ರಚನೆಗೆ ನಾನು ಅಡ್ಡಿಯಾಗುವುದಿಲ್ಲ ಮತ್ತು ಬಿಜೆಪಿ ನಾಯಕರು ತೆಗೆದುಕೊಳ್ಳುವ ಯಾವುದೇ ನಿರ್ಧಾರವನ್ನು ನಾನು ಬೆಂಬಲಿಸುತ್ತೇನೆಂದು ಏಕನಾಥ್ ಶಿಂಧೆ ಹೇಳಿದ ಒಂದು ದಿನದ ಬಳಿಕ ನವೆಂಬರ್ 28 ರಂದು ದೆಹಲಿಯಲ್ಲಿ ಸಭೆ ನಡೆಸಲಾಯಿತು. ಬಿಜೆಪಿ ಕಾರ್ಯಾಧ್ಯಕ್ಷ ದೇವೇಂದ್ರ ಫಡ್ನವಿಸ್, ಎನ್‌ಸಿಪಿ ಅಧ್ಯಕ್ಷ ಅಜಿತ್ ಪವಾರ್, ಅದರ ಕಾರ್ಯಾಧ್ಯಕ್ಷ ಪ್ರಫುಲ್ ಪಟೇಲ್ ಮತ್ತು ಅದರ ರಾಜ್ಯ ಮುಖ್ಯಸ್ಥ ಸುನಿಲ್ ತಟ್ಕರೆ ಕೂಡ ಸಭೆಯಲ್ಲಿ ಭಾಗವಹಿಸಿದ್ದರು.

ವಿಧಾನಸಭಾ ಚುನಾವಣೆಯಲ್ಲಿ ಮಹಾಯುತಿ ಮೈತ್ರಿ ಬಹುಮತ ಪಡೆದರೆ ಮುಖ್ಯಮಂತ್ರಿಯಾಗಿ ಮುಂದುವರಿಯುತ್ತೀರಿ ಎಂದು ಲೋಕಸಭಾ ಚುನಾವಣೆ ಬಳಿಕ ನೀಡಿದ ಭರವಸೆಯನ್ನು ಏಕನಾಥ್​ ಶಿಂಧೆ ಅವರು ಸಭೆಯ ಆರಂಭದಲ್ಲಿ ನೆನೆಪಿಸಿದರು. ಅಲ್ಲದೆ, ಸಿಎಂ ಆಗಿ ಮುಂದುವರಿಯುವ ಆಸೆಯನ್ನು ವ್ಯಕ್ತಪಡಿಸಿದರು. ಆದರೆ, ಶಿಂಧೆ ಅವರ ಬೇಡಿಕೆಯನ್ನು ತಿರಸ್ಕರಿಸಲಾಯಿತು. ಬಿಜೆಪಿ ಸ್ಪಷ್ಟ ಬಹುಮತ ಸಾಧಿಸಿರುವಾಗ ಶಿಂಧೆಗೆ ಸಿಎಂ ಸ್ಥಾನ ನೀಡುವುದು ಸರಿಯಲ್ಲ ಎಂಬ ತೀರ್ಮಾನಕ್ಕೆ ಬಿಜೆಪಿ ಬಂದಿದೆ.

ಅಂದಹಾಗೆ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯ 288 ಸ್ಥಾನಗಳಲ್ಲಿ ಬಿಜೆಪಿ 132 ಸ್ಥಾನಗಳಲ್ಲಿ ಜಯಗಳಿಸಿದರೆ, ಶಿಂಧೆ ನೇತೃತ್ವದ ಶಿವಸೇನಾ ಬಣ 57 ಮತ್ತು ಅಜಿತ್​ ಪವಾರ್​ ನೇತೃತ್ವದ ಎನ್​ಸಿಪಿ 41 ಸ್ಥಾನಗಳಲ್ಲಿ ಗೆಲುವು ದಾಖಲಸಿವೆ. (ಏಜೆನ್ಸೀಸ್)