ಸಾಂದರ್ಭಿಕ ಚಿತ್ರ 
ನ್ಯೂಸ್

5, 8, 9,11ನೇ ಕ್ಲಾಸ್​ಗೆ ಮೌಲ್ಯಾಂಕನ?

|ಶಿವಮಾದು ಎನ್.ಎಲ್. ಬೆಂಗಳೂರು
ಈ ವರ್ಷ 5, 8, 9 ಮತ್ತು 11ನೇ ತರಗತಿ ಮೌಲ್ಯಾಂಕನ ಪರೀಕ್ಷೆ ನಡೆಸಲು ಶಾಲಾ ಶಿಕ್ಷಣ ಇಲಾಖೆಯು ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಕರೊನಾ ಬಳಿಕ ಮಕ್ಕಳು ಕಲಿಕೆಯಲ್ಲಿ ಸಾಕಷ್ಟು ಹಿಂದುಳಿದಿರುವುದು ಇಲಾಖೆ ಸಮೀಕ್ಷೆಯಿಂದಲೇ ಹೊರಬಿದ್ದಿದೆ. ಹೀಗಾಗಿ, ಮಕ್ಕಳ ಕಲಿಕೆಯನ್ನು ಪ್ರತಿ ವರ್ಷ ಮೌಲ್ಯಾಂಕನ ಮಾಡುವುದು ಅನಿವಾರ್ಯ ಎನ್ನುವುದು ಇಲಾಖೆ ವಾದ. ಆದರೆ, ಈ ಪ್ರಕ್ರಿಯೆಯಿಂದ 1ರಿಂದ 12ನೇ ತರಗತಿವರೆಗೆ 12 ವರ್ಷಗಳಲ್ಲಿ 6 ಪಬ್ಲಿಕ್ ಪರೀಕ್ಷೆಗಳಾಗಲಿವೆ. ಅದರಲ್ಲೂ 8ನೇ ತರಗತಿಯಿಂದ 12ನೇ ತರಗತಿಯ ಎಲ್ಲ ಐದೂ ವರ್ಷಗಳಲ್ಲೂ ನಿರಂತರವಾಗಿ 5 ವರ್ಷ ಪಬ್ಲಿಕ್ ಪರೀಕ್ಷೆಗಳನ್ನು ನಡೆಸಿದಂತಾಗಲಿದೆ.

ಶಾಲಾ ಶಿಕ್ಷಣ ಇಲಾಖೆಯು 2023-24ನೇ ವರ್ಷದಲ್ಲಿ 5, 8, 9 ಮತ್ತು 11ನೇ ತರಗತಿ ಮೌಲ್ಯಾಂಕನ ಪರೀಕ್ಷೆ ನಡೆಸಲು ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಕಳೆದ ವರ್ಷ 5 ಮತ್ತು 8ನೇ ತರಗತಿ ಮೌಲ್ಯಾಂಕನ ವಿಚಾರ ಸಾಕಷ್ಟು ಚರ್ಚೆಗೆ ಕಾರಣವಾಗಿ, ನ್ಯಾಯಾಲಯದ ಮೆಟ್ಟಿಲೇರಿತ್ತು.

ಎನ್​ಇಪಿ ಜಾರಿಯಾದ ಬಳಿಕ ದ್ವಿತೀಯ ಪಿಯುಸಿವರೆಗಿನ ತರಗತಿಗಳನ್ನು ಶಾಲಾ ಶಿಕ್ಷಣ ಎಂದು ಪರಿಗಣಿಸಲಾಗಿದೆ. ಆ ಪ್ರಕಾರ 1ರಿಂದ 12ನೇ ತರಗತಿವರೆಗೆ 12 ವರ್ಷಗಳಲ್ಲಿ 6 ಪಬ್ಲಿಕ್ ಪರೀಕ್ಷೆಗಳಾಗಲಿವೆ. ಎಸ್​ಎಸ್​ಎಲ್​ಸಿ ಮತ್ತು ದ್ವಿತೀಯ ಪಿಯುಸಿಗೆ ವಾರ್ಷಿಕ ಮುಖ್ಯ ಪರೀಕ್ಷೆಗಳು ನಡೆಯಲಿವೆ. 8ನೇ ತರಗತಿಯಿಂದ 12ನೇ ತರಗತಿಯ ಎಲ್ಲ ಐದೂ ವರ್ಷಗಳಲ್ಲೂ ನಿರಂತರವಾಗಿ 5 ವರ್ಷ ಪಬ್ಲಿಕ್ ಪರೀಕ್ಷೆಗಳನ್ನು ನಡೆಸಿದಂತಾಗಲಿದೆ.

ಅನಿವಾರ್ಯ ಪ್ರಕ್ರಿಯೆ: ಕರೊನಾ ಬಳಿಕ ಮಕ್ಕಳು ಕಲಿಕೆಯಲ್ಲಿ ಸಾಕಷ್ಟು ಹಿಂದುಳಿದಿರುವುದು ಇಲಾಖೆ ಸಮೀಕ್ಷೆಯಿಂದಲೇ ಹೊರಬಿದ್ದಿದೆ. ಹೀಗಾಗಿ, ಮಕ್ಕಳ ಕಲಿಕೆಯನ್ನು ಪ್ರತಿ ವರ್ಷ ಮೌಲ್ಯಾಂಕನ ಮಾಡುವುದು ಅನಿವಾರ್ಯ. ಮಕ್ಕಳನ್ನು ಉತ್ತೀರ್ಣ/ಅನುತ್ತೀರ್ಣ ಮಾಡುವುದು ಮುಖ್ಯವಲ್ಲ. ವಯಸ್ಸು ಮತ್ತು ತರಗತಿಗೆ ಅನುಗುಣವಾಗಿ ಮಕ್ಕಳ ಕಲಿಕೆಯ ಪ್ರಗತಿಯಾಗುತ್ತಿದೆಯೇ ಎಂಬುದನ್ನು ಅವಶ್ಯವಾಗಿ ತಿಳಿಯಬೇಕಿದೆ. ಈ ಉದ್ದೇಶದಿಂದಲೇ ಮೌಲ್ಯಾಂಕನ ಮಾಡಲಾಗುತ್ತದೆ ಎಂದು ಇಲಾಖೆ ಉನ್ನತ ಮೂಲಗಳು ತಿಳಿಸಿವೆ.

ಆದರೆ, ಕೆಲವು ಶಾಲೆಗಳಲ್ಲಿ ತಮ್ಮ ಪ್ರತಿಷ್ಠೆಗಾಗಿ ಮತ್ತು ಉತ್ತಮ ಫಲಿತಾಂಶಕ್ಕಾಗಿ ಮಕ್ಕಳಿಗೆ ಉತ್ತರ ಹೇಳಿಕೊಟ್ಟು ಬರೆಸುವುದರಿಂದ ಮೌಲ್ಯಾಂಕನ ಪ್ರಯೋಜನ ವಾಗುವುದಿಲ್ಲ. ಮಕ್ಕಳ ಕಲಿಕೆಯ ನಿಜಾಂಶ ತಿಳಿಯುವುದು ಎಲ್ಲರ ಉದ್ದೇಶವಾಗಬೇಕು ಎಂದು ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ನಿಯಮ ಬದಲಿಸಿದ್ದ ಸರ್ಕಾರ

ಶಿಕ್ಷಣ ಹಕ್ಕು ಕಾಯ್ದೆ ಅಡಿ 8ನೇ ತರಗತಿವರೆಗೂ ಮಕ್ಕಳನ್ನು ಅನುತ್ತೀರ್ಣ ಮಾಡುವಂತಿಲ್ಲ. ಹೀಗಾಗಿ ವಿದ್ಯಾರ್ಥಿಗಳು ಏಕಾಏಕಿ ಎಸ್​ಎಸ್​ಎಲ್​ಸಿ ಪಬ್ಲಿಕ್ ಪರೀಕ್ಷೆ ಎದುರಿಸುವುದರಿಂದ ಮಕ್ಕಳಲ್ಲಿ ಪರೀಕ್ಷೆ ಭೀತಿ ಉಂಟಾಗಲಿದೆ. ಹೀಗಾಗಿ ಪ್ರತಿ ಎರಡು ವರ್ಷಗಳ ಅಂತರದಲ್ಲಿ ಒಂದು ಪಬ್ಲಿಕ್ ಪರೀಕ್ಷೆ ನಡೆಸುವುದರಿಂದ ಮಕ್ಕಳಲ್ಲಿ ಪರೀಕ್ಷೆ ಭಯ ಹೋಗಲಿದೆ ಎಂಬ ಕಾರಣಕ್ಕೆ ಮೌಲ್ಯಾಂಕನ ಆರಂಭಿಸಲಾಗಿತ್ತು. ಆದರೆ, ಖಾಸಗಿ ಶಾಲೆಗಳು ಕೋರ್ಟ್ ಮೆಟ್ಟಿಲೇರಿದ ಪರಿಣಾಮ ನ್ಯಾಯಾಲಯದ ನಿರ್ದೇಶನದಂತೆ ನಿಯಮಗಳನ್ನು ಬದಲಿಸಿ ಪೂರಕ ಪರೀಕ್ಷೆಯನ್ನು ಕೈಬಿಟ್ಟಿತ್ತು. 6ರಿಂದ 10ನೇ ತರಗತಿಯ ಎಲ್ಲ ಶಾಲೆಗಳು ಎನ್​ಸಿಇಆರ್​ಟಿ ಪಠ್ಯಕ್ರಮವನ್ನೇ ಬೋಧಿಸುತ್ತಿವೆ. ಸರ್ಕಾರಿ ಮತ್ತು ಖಾಸಗಿ ಎಲ್ಲ ಶಾಲೆಗಳಲ್ಲಿಯೂ ಮಾಧ್ಯಮ ಬೇರೆ ಇದ್ದು, ಪಾಠಗಳು ಒಂದೇ ಇರುತ್ತವೆ. ಆದರೆ, ಸರ್ಕಾರ ನಿಗದಿ ಮಾಡಿರುವ ಪಠ್ಯಕ್ರಮ ಹೊರತುಪಡಿಸಿ ಖಾಸಗಿ ಶಾಲೆಗಳು ತಮಗೆ ಬೇಕಾದ ಪಠ್ಯಕ್ರಮವನ್ನು ಬೋಧಿಸುತ್ತಿರುವುದರಿಂದ ಮೌಲ್ಯಾಂಕನ ಪರೀಕ್ಷೆಯನ್ನು ವಿರೋಧಿಸುತ್ತಿವೆ.

ಆರ್​ಟಿಇ ನಿಯಮಗಳನ್ನು ತಿದ್ದುಪಡಿ ಮಾಡಿ 5 ಮತ್ತು 8ನೇ ತರಗತಿಗೆ ಮೌಲ್ಯಾಂಕನ ಮಾಡಬೇಕು ಎಂಬ ನಿಯಮವನ್ನು ಅಳವಡಿಸಿಕೊಳ್ಳಲು ಸರ್ಕಾರವೇಕೆ ಹಿಂದೇಟು ಹಾಕುತ್ತಿದೆ ಎಂಬುದು ಗೊತ್ತಾಗುತ್ತಿಲ್ಲ. ಅನುತ್ತೀರ್ಣ ಪದ್ಧತಿಯಿಂದ ಮಕ್ಕಳಲ್ಲಿ ಕಲಿಕಾ ಹೊಣೆಗಾರಿಕೆ ಇಲ್ಲದಂತಾಗಿದೆ ಎಂದು ಕೇಂದ್ರ ಸರ್ಕಾರವೇ ಅಭಿಪ್ರಾಯಪಟ್ಟಿದೆ. ಕಡ್ಡಾಯವಾಗಿ ಮೌಲ್ಯಾಂಕನ ಮಾಡಬೇಕು.

| ಡಿ. ಶಶಿಕುಮಾರ್ ಕ್ಯಾಮ್ಸ್​ ಪ್ರಧಾನ ಕಾರ್ಯದರ್ಶಿ

ಮಕ್ಕಳ ಕಲಿಕೆಯಲ್ಲಿನ ಪ್ರಗತಿ ತಿಳಿಯುವುದಕ್ಕಾಗಿ ಮೌಲ್ಯಾಂಕನ ನಡೆಸುವುದು ಇಲಾಖೆಯ ಉದ್ದೇಶವಾಗಿದೆ. ಕರೊನಾ ಬಳಿಕ ಮಕ್ಕಳ ಕಲಿಕೆಗೆ ಹೊಡೆತ ಬಿದ್ದಿದ್ದು, ಇದನ್ನು ಸರಿಪಡಿಸುವುದಕ್ಕಾಗಿ ಈ ಪ್ರಕ್ರಿಯೆ ಉತ್ತಮ ಮಾರ್ಗ.

| ಬಿ.ಬಿ. ಕಾವೇರಿ ಶಾಲಾ ಶಿಕ್ಷಣ ಇಲಾಖೆ ಆಯುಕ್ತೆ