ನ್ಯೂಸ್

Assembly Elections| ಕಾಂಗ್ರೆಸ್​ ಅಧಿಕಾರಕ್ಕೆ ಬಂದರೆ ನುಸುಳುಕೋರರು ಸೇರಿದಂತೆ ಎಲ್ಲರಿಗೂ Gas Cylinder; ವಿವಾದದ ಕಿಡಿ ಹೊತ್ತಿಸಿದ ಉಸ್ತುವಾರಿಯ ಹೇಳಿಕೆ

ರಾಂಚಿ: 81 ಸದಸ್ಯಬಲದ ಜಾರ್ಖಂಡ್​ ವಿಧಾನಸಬೆಗೆ (Jharkhand Assembly Election) ನವೆಂಬರ್​ 13ರಂದು ಮೊದಲನೇ ಹಂತದ ಮತದಾನ ನಡೆದಿದ್ದು, ಉಳಿದ 38 ಸ್ಥಾನಗಳಿಗೆ ನವೆಂಬರ್​ 20ರಂದು ಮತದಾನ ನಡೆಯಲಿದೆ. ಎರಡನೇ ಹಂತದ ಮತದಾನಕ್ಕೆ ದಿನಗಣನೆ ಆರಂಭವಾಗುತ್ತಿದ್ದಂತೆ ರಾಜಕೀಯ ಪಕ್ಷಗಳ ನಾಯಕರು ಬಿರುಸಿನ ಪ್ರಚಾರ ನಡೆಸುತ್ತಿದ್ದು, ಹಾದಿಯಾಗಿ ವಿವಾದಾತ್ಮಕ ಹೇಳಿಕೆಗಳನ್ನು ಕೊಡುತ್ತಿದ್ದಾರೆ. ಇದರಲ್ಲಿ ಪ್ರಮುಖವಾಗಿ ಕಾಂಗ್ರೆಸ್​ ನಾಯಕರು ಮುಂಚೂಣಿಯಲ್ಲಿದ್ದು, ಇದೀಗ ಜಮ್ಮು-ಕಾಶ್ಮೀರ ವಿಧಾನಸಭೆಯ ಶಾಸಕರೊಬ್ಬರು ಜಾರ್ಖಂಡ್​ ಚುನಾವಣಾ ಪ್ರಚಾರದ ವೇಳೆ ನೀಡಿರುವ ಹೇಳಿಕೆ ವಿವಾದಕ್ಕೆ ಆಸ್ಪದ ಮಾಡಿಕೊಟ್ಟಿದ್ದು, ಸಖತ್​ ವೈರಲ್​ ಆಗುತ್ತಿದೆ.

ಬಿಜೆಪಿಯೂ ಈ ಬಾರಿ ಜಾರ್ಖಂಡ್​ ವಿಧಾನಸಭೆ ಚುನಾವಣೆಯಲ್ಲಿ ಬಾಂಗ್ಲಾ ನುಸುಳುಕೋರರ ವಿಚಾರವನ್ನು ಮುಂದಿಟ್ಟುಕೊಂಡು ಆಡಳಿತರೂಢ ಜೆಜೆಎಂ ಹಾಗೂ ಕಾಂಗ್ರೆಸ್​ ಪಕ್ಷಗಳಿಗೆ ಚಾಟಿ ಬೀಸುತ್ತಿರುವ ನಡುವೆಯೇ ರಾಜ್ಯ ಕಾಂಗ್ರೆಸ್​ ಉಸ್ತುವಾರಿ ಗುಲಾಮ್ ಅಹ್ಮದ್ ಮಿರ್ ಈ ಹೇಳಿಕೆ ನೀಡಿದ್ದು, ಕಾಂಗ್ರೆಸ್​ಗೆ ಮಗ್ಗಲ ಮುಳ್ಳಾಗಿ ಪರಿಣಮಿಸಿದ್ದು, ಇದು ಚುನಾವಣೆಯ ಮೇಲೆ ಪರಿಣಾಮ ಬೀರುವುದು ಪಕ್ಕಾ ಎಂದು ಹೇಳಲಾಗಿದೆ.

ಬೆರ್ಮೊ ವಿಧಾನಸಭಾ ಕ್ಷೇತ್ರದ ಚಂದ್ರಾಪುರದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿದ ಗುಲಾಮ್ ಅಹ್ಮದ್ ಮಿರ್, ರಾಜ್ಯದಲ್ಲಿ ಕಾಂಗ್ರೆಸ್‌ ಪಕ್ಷ ಅಧಿಕಾರಕ್ಕೆ ಬಂದರೆ ಎಲ್ಲ ನಾಗರಿಕರಿಗೆ ₹450ಕ್ಕೆ ಅಡುಗೆ ಅನಿಲ ಸಿಲಿಂಡರ್‌ ನೀಡಲಾಗುವುದು. ಅವರು ನುಸುಳುಕೋರರು ಆಗಿರಲಿ, ಅಲ್ಲದೇ ಇರಲಿ ಎಂದು ಹೇಳಿದ್ದಾರೆ.

ನಮ್ಮ ಸರ್ಕಾರ ರಚನೆಯಾದರೆ ಡಿಸೆಂಬರ್‌ 1ರಿಂದ ₹450ಕ್ಕೆ ಅಡುಗೆ ಅನಿಲ ಸಿಲಿಂಡರ್ ನೀಡುವುದಾಗಿ ಭರವಸೆ ನೀಡಿದ್ದೇವೆ. ಜನಸಾಮಾನ್ಯರಿಗಾಗಿ ಈ ಯೋಜನೆ ಜಾರಿಯಾಗಲಿದೆ. ಅವರು ಹಿಂದೂಗಳು, ಮುಸ್ಲಿಮರು, ನುಸುಳುಕೋರರೇ ಆಗಿರಲಿ - ಜಾರ್ಖಂಡ್‌ನ ಎಲ್ಲ ನಾಗರಿಕರಿಗೂ ಇದು ಅನ್ವಯವಾಗಲಿದೆ ಎಂದು ಚುನಾವಣಾ ಪ್ರಚಾರ ಸಭೆಯಲ್ಲಿ ಹೇಳಿದ್ದಾರೆ.

ಇತ್ತ ಮಿರ್​ ನೀಡಿರುವ ಹೇಳಿಕೆ ವೈರಲ್​ ಆಗುತ್ತಿದ್ದಂತೆ ಬಿಜೆಪಿ ಕಿಡಿಕಾರಿದ್ದು, ಹಿಂದೂಗಳು ಮುಸ್ಲಿಮರು ಮತ್ತು ನುಸುಳುಕೋರರಿಗೆ ಕಡಿಮೆ ದರದಲ್ಲಿ ಎಲ್‌ಪಿಜಿ ಸಿಲಿಂಡರ್‌ ನೀಡುತ್ತೇವೆ ಎಂದು ಕಾಂಗ್ರೆಸ್‌ನ ಉಸ್ತುವಾರಿ ಭರವಸೆ ನೀಡಿದ್ದಾರೆ. ಬುಡಕಟ್ಟು ಜನರ ಹಕ್ಕು ಕಸಿದು ನುಸುಳುಕೋರರಿಗೆ ನೀಡುವುದಕ್ಕೆ ಬಿಜೆಪಿ ಬಿಡುವುದಿಲ್ಲ ಎಂದು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ತಿರುಗೇಟು ನೀಡಿದ್ದಾರೆ.