ವಾಷಿಂಗ್ಟನ್ ಡಿಸಿ: ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಚುನಾವಣೆ ಪ್ರಚಾರ ನಡೆಸುತ್ತಿರುವುದು ಎಲ್ಲರಿಗೂ ಗೊತ್ತಿದೆ. ಆದರೆ ಪೆನ್ಸಿಲ್ವೇನಿಯಾದ ಬಟ್ಲರ್‌ನಲ್ಲಿ ಚುನಾವಣಾ ರ್ಯಾಲಿಯಲ್ಲಿ ಮಾತನಾಡುತ್ತಿದ್ದ ಡೊನಾಲ್ಡ್ ಟ್ರಂಪ್ ಅವರ ತಲೆಯನ್ನು ಗುರಿಯಾಗಿಸಿಕೊಂಡು ಗುಂಡುಗಳನ್ನು ಹಾರಿಸಲಾಗಿದೆ. ವೇಗವಾಗಿ ಬಂದ ಬುಲೆಟ್ನಿಂದ ಟ್ರಂಪ್ ಅವರ ಕಿವಿಗೆ ಗಾಯ ಮಾಡಿದೆ. ಟ್ರಂಪ್ ಅವರ ಕಿವಿ ಮತ್ತು ಮುಖದ ಮೇಲೆ ಗಾಯಗಳಾಗಿವೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಆಗಿಲ್ಲ.
ಆದರೆ ಅಮೆರಿಕದ ಸಿಕ್ರೇಟ್ ಸರ್ವೀಸ್ ಟ್ರಂಪ್ ಅವರನ್ನು ಘಟನಾ ಸ್ಥಳದಿಂದ ಸುರಕ್ಷಿತವಾಗಿ ರಕ್ಷಿಸಿದ್ದಾರೆ. ಯುಎಸ್ ಸಿಕ್ರೇಟ್ ಸರ್ವೀಸ್ ಏಜೆಂಟರು ಟ್ರಂಪ್ ಅವರ ಮೇಲೆ ಗುಂಡು ಹಾರಿಸಿದ ದಾಳಿಕೊರನನ್ನು ಎನ್ಕೌಂಟರ್ ಮಾಡಿದ್ದಾರೆ. ಘಟನೆಯಿಂದ ಒಬ್ಬರು ಮೃತಪಟ್ಟಿದ್ದು, ಮತ್ತೊಬ್ಬರು ಸ್ಥಿತಿ ಚಿಂತಾಜನಕವಾಗಿದೆ ಎನ್ನಲಾಗಿದೆ.
ಪೆನ್ಸಿಲ್ವೇನಿಯಾದಲ್ಲಿ ಡೊನಾಲ್ಡ್ ಟ್ರಂಪ್ ಅವರ ಮೇಲೆ ನಡೆದ ದಾಳಿಯ ಬಗ್ಗೆ ಮಾಹಿತಿ ಸಿಕ್ಕಿದೆ. ಅವರು ಸುರಕ್ಷಿತವಾಗಿದ್ದಾರೆ ಎಂಬುದನ್ನು ಕೇಳಿ ಸಂತೋಷವಾಗಿದೆ. ಟ್ರಂಪ್ ಅವರನ್ನು ರಕ್ಷಿಸಿದ ಬೆಂಗಾವಲು ಪಡೆಗೆ ಕೃತಜ್ಞರಾಗಿದ್ದೇವೆ. ಅಮೆರಿಕದಲ್ಲಿ ಈ ರೀತಿಯ ಹಿಂಸಾಚಾರಕ್ಕೆ ಅವಕಾಶವಿಲ್ಲ. ಇದನ್ನು ಖಂಡಿಸಲು ನಾವು ರಾಷ್ಟ್ರವಾಗಿ ಒಂದಾಗಬೇಕು ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಹೇಳಿದ್ದಾರೆ.
ರಾಜಕೀಯ ಹಿಂಸಾಚಾರಕ್ಕೆ ನಮ್ಮ ಪ್ರಜಾಪ್ರಭುತ್ವದಲ್ಲಿ ಸ್ಥಳವಿಲ್ಲ. ಏನಾಯಿತು ಎಂದು ನಮಗೆ ಇನ್ನೂ ನಿಖರವಾಗಿ ತಿಳಿದಿಲ್ಲವಾದರೂ, ಮಾಜಿ ಅಧ್ಯಕ್ಷ ಟ್ರಂಪ್ ಅವರು ಗಂಭೀರವಾಗಿ ಗಾಯಗೊಂಡಿಲ್ಲ ಎಂಬುದು ನಮಗೆ ಸಮಾಧಾನಕರವಾಗಿದೆ. ಅವರು ಶೀಘ್ರವಾಗಿ ಚೇತರಿಸಿಕೊಳ್ಳಬೇಕೆಂದು ಹಾರೈಸುತ್ತೇವೆ ಎಂದು ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ತಿಳಿಸಿದರು.
ಇನ್ನು ಭಾರತೀಯ-ಅಮೆರಿಕನ್ ಉದ್ಯಮಿ ವಿವೇಕ್ ರಾಮಸ್ವಾಮಿ ಅವರು ಡೊನಾಲ್ಡ್ ಟ್ರಂಪ್ ಮೇಲಿನ ದಾಳಿಯನ್ನು ಖಂಡಿಸಿ ಇದು ಸ್ವೀಕಾರಾರ್ಹವಲ್ಲ ಎಂದು ಹೇಳಿದ್ದಾರೆ. 1981 ಮಾರ್ಚ್ 30ರಂದು ಅಧ್ಯಕ್ಷ ರೊನಾಲ್ಡ್ ರೇಗನ್ ಅವರ ಮೇಲೆ ಗುಂಡು ಹಾರಿಸಿದ ನಂತರ ಅಮೆರಿಕದಲ್ಲಿ ಮಾಜಿ ಅಧ್ಯಕ್ಷ ಅಥವಾ ಅಧ್ಯಕ್ಷೀಯ ಅಭ್ಯರ್ಥಿಯ ಮೇಲೆ ಹತ್ಯೆಯ ಪ್ರಯತ್ನ ಮಾಡಿರುವ ಮೊದಲ ಪ್ರಕರಣ ಇದಾಗಿದೆ. (ಏಜೆನ್ಸೀಸ್)