ಗುವಾಹಟಿ: ಯುವ ಕಾಂಗ್ರೆಸ್‌ನ ರಾಷ್ಟ್ರೀಯ ಅಧ್ಯಕ್ಷ ಬಿ.ವಿ. ಶ್ರೀನಿವಾಸ್ ಮೇಲೆ ಅವರದೇ ಪಕ್ಷದ ಯುವ ಘಟಕದ ಮಹಿಳಾ ಕಾರ್ಯಕರ್ತೆಯೊಬ್ಬರು ಕಿರುಕುಳದ ಗಂಭೀರ ಆರೋಪ ಹೊರಿಸಿರುವುದು ಇದೀಗ ದೇಶಾದ್ಯಂತ ತೀವ್ರ ಸುದ್ದಿಗೆ ಗ್ರಾಸವಾಗಿದೆ.
ಯುವ ಕಾಂಗ್ರೆಸ್‌ನ ಅಸ್ಸಾಂ ಘಟಕದ ಅಧ್ಯಕ್ಷೆ ಅಂಕಿತಾ ದತ್ತಾ ಅವರೇ ಈ ಆರೋಪ ಹೊರಿಸಿದವರು. ‘‘ಶ್ರೀನಿವಾಸ್ ಹಲವಾರು ತಿಂಗಳುಗಳಿಂದ ನನಗೆ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ. ಅವರೊಬ್ಬ ಮಹಿಳಾ ವಿರೋಧಿ. ಪ್ರತಿಯೊಂದು ಕೆಲಸದಲ್ಲೂ ಲಿಂಗಭೇದ ಮಾಡುತ್ತಾರೆ. ನಾನು ಮಹಿಳೆ ಎಂಬುದನ್ನೂ ಪರಿಗಣಿಸದೇ ನಿರಂತರವಾಗಿ ಕಿರುಕುಳ ನೀಡುತ್ತಿದ್ದಾರೆ. ಈ ಕುರಿತು ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿದಂತೆ ಪಕ್ಷದ ನಾಯಕರೆಲ್ಲರಿಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ’’ ಎಂದು ನೇರ ಆರೋಪ ಮಾಡಿದ್ದಾರೆ.
ಈ ಕುರಿತು ಸರಣಿ ಟ್ವೀಟ್ ಮಾಡಿರುವ ಅಂಕಿತಾ ದತ್ತಾ, ‘‘ಲಡಕಿ ಹ್ಞೂ, ಲಡ್ ಸಕ್ತೀ ಹ್ಞೂ (ಮಹಿಳೆಯಿದ್ದೇನೆ, ಹೋರಾಡಬಲ್ಲೆ) ಎನ್ನುವ ಪ್ರಿಯಾಂಕಾ ಗಾಂಧಿ ವಾದ್ರಾ ಕೂಡ ನನ್ನ ವಿಷಯದಲ್ಲಿ ಮೌನ ವಹಿಸಿದ್ದಾರೆ. ಶ್ರೀನಿವಾಸ್ ತನಗಿರುವ ಉನ್ನತ ನಾಯಕರ ನಿಕಟ ಸಂಪರ್ಕವನ್ನು ಉಪಯೋಗಿಸಿಕೊಂಡು ನನ್ನನ್ನು ತುಳಿಯುತ್ತಿದ್ದಾರೆ. ಜಮ್ಮು ಕಾಶ್ಮೀರದಲ್ಲಿ ನಡೆದ ಭಾರತ್ ಜೋಡೋ ಸಮಾರೋಪ ಸಮಾರಂಭದ ಸಂದರ್ಭದಲ್ಲಿಯೇ ರಾಹುಲ್ ಗಾಂಧಿ ಅವರಿಗೆ ಶ್ರೀನಿವಾಸ್ ಕಿರುಕುಳದ ಕುರಿತು ವಿವರ ನೀಡಿದ್ದೆ. ಆದರೆ ಈವರೆಗೂ ರಾಹುಲ್ ಗಾಂಧಿ ಆತನ ವಿರುದ್ಧ ವಿಚಾರಣೆ ನಡೆಸುವ ಗೋಜಿಗೂ ಹೋಗಿಲ್ಲ’’ ಎಂದು ವಿವರಿಸಿದ್ದಾರೆ.
ಇದನ್ನೂ ಓದಿ: ಕಾನೂನಿಂದ ಬೇರ್ಪಟ್ಟ ಇವರು ನೆಟ್ಫ್ಲಿಕ್ಸ್ನಿಂದ ಒಂದಾಗಿದ್ದಾರೆ! ಫೋಟೋ ಜತೆಗೆ ಸಚಿವರ ಶೀರ್ಷಿಕೆಯೂ ವೈರಲ್…
‘‘ನಾನು ಸದ್ಯದಲ್ಲೇ ಕಾಂಗ್ರೆಸ್ ತ್ಯಜಿಸುತ್ತೇನೆ, ಬಿಜೆಪಿ ಸೇರುತ್ತೇನೆ ಎನ್ನುವ ಅರ್ಥ ಬರುವಂತೆ ನನ್ನ ವಿರುದ್ಧ ಪೋಸ್ಟರ್‌ಗಳನ್ನು ಮಾಡಿಸಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗುವಂತೆ ಶ್ರೀನಿವಾಸ್ ನೋಡಿಕೊಳ್ಳುತ್ತಿದ್ದಾನೆ. ನಾಲ್ಕು ಪೀಳಿಗೆಯಿಂದಲೂ ನಮ್ಮದು ಕಾಂಗ್ರೆಸ್ ಕುಟುಂಬ. ಹಲವು ವರ್ಷಗಳಿಂದ ಕಾಂಗ್ರೆಸ್ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದೇನೆ. ನನ್ನಂಥವರಿಗೇ ಈ ವ್ಯಕ್ತಿ ಇಂತಹ ಕಿರುಕುಳ ನೀಡಬೇಕೆಂದರೆ ಇನ್ನು ಯುವ ಕಾಂಗ್ರೆಸ್‌ನ ಸಾಮಾನ್ಯ ಕಾರ್ಯಕರ್ತೆಯರಿಗೆ ಇನ್ನೆಂಥ ಕಿರುಕುಳ ಆಗುತ್ತಿರಬಾರದು?’’ ಎಂದು ಅಂಕಿತಾ ದತ್ತಾ ಪ್ರಶ್ನಿಸಿದ್ದಾರೆ.