ಗುವಾಹಟಿ: ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ ಅವರ ಪತ್ನಿ ರಿನಿಕಿ ಭುಯಾನ್ ಶರ್ಮಾ ಅವರು ಕಾಂಗ್ರೆಸ್ ಸಂಸದ ಗೌರವ್ ಗಗೋಯ್ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದು, 10 ಕೋಟಿ ರೂಪಾಯಿ ಪರಿಹಾರ ಕೇಳಿದ್ದಾರೆ.
ಪೆಡ್ ಈಸ್ಟ್ ಎಂಟರ್ಟೈನ್ಮೆಂಟ್ಸ್ ಕಂಪನಿಯು ಪ್ರಧಾನ ಮಂತ್ರಿ ಕಿಸಾನ್ ಸಂಪದಾ ಯೋಜನೆಯಡಿ ಕೇಂದ್ರ ಸರ್ಕಾರದಿಂದ 10 ಕೋಟಿ ರೂಪಾಯಿ ಪಡೆದಿದೆ ಎಂದು ಕಾಂಗ್ರೆಸ್ ನಾಯಕ ಗಗೋಯ್ ಆರೋಪಿಸಿದ್ದಾರೆ. ಅವರು ಈ ಆರೋಪ ಸಾಬೀತುಪಡಿಸದಿದ್ದರೆ 10 ಕೋಟಿ ರೂಪಾಯಿ ನೀಡಬೇಕು ಎಂದು ರಿನಿಕಿ ಭುಯಾನ್ ಶರ್ಮಾ ಹೇಳಿದ್ದಾರೆ.
ಕಾಮರೂಪ ಮೆಟ್ರೋಪಾಲಿಟನ್ ಸಿವಿಲ್ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿದ್ದು, ಸೆ.26ರಂದು ಪ್ರಕರಣದ ವಿಚಾರಣೆ ನಡೆಯಲಿದೆ. ಕೇಂದ್ರ ಸರ್ಕಾರದಿಂದ ಯಾವುದೇ ಸಬ್ಸಿಡಿ ಪಡೆದಿಲ್ಲ. ಸಬ್ಸಿಡಿ ಪಡೆಯಲು ಕೈಗೊಳ್ಳಬೇಕಾದ ಪ್ರಕ್ರಿಯೆ ನಡೆದಿಲ್ಲ. ಗೌರವ್ ಗೊಗೊಯ್ ಅವರು ಮಾಡಿರುವ ಮಿಥ್ಯಾರೋಪದಿಂದ ರಿನಿಕಿ ಅವರ ಪ್ರತಿಷ್ಠೆಗೆ ಹಾನಿಯಾಗಿದೆ ಎಂದು ರಿನಿಕಿ ಭುಯಾನ್ ಪರ ವಕಾಲತ್ತು ವಹಿಸಿರುವ ಹಿರಿಯ ವಕೀಲ ದೇವಜಿತ್ ಸೈಕಿಯಾ ತಿಳಿಸಿದ್ದಾರೆ.
ನಾಗಾಂವ್ ಜಿಲ್ಲೆಯ ದರಿಗಾಜಿಯಲ್ಲಿ 30 ಎಕರೆ ಕೃಷಿ ಭೂಮಿ ಕೈಗಾರಿಕಾ ಭೂಮಿಯಾಗಿ ವರ್ಗಾವಣೆಯಾದ ಒಂದು ತಿಂಗಳಲ್ಲೆ ಸಿಎಂ ಹಿಮಂತ ಬಿಸ್ವಾ ಶರ್ಮಾ ಕುಟುಂಬಸ್ಥರು ಭೂಮಿ ಖರೀದಿಸಿದ್ದಾರೆ ಎಂಬ ಆರೋಪ ಇದ್ದು, ಈ ಬಗ್ಗೆ ನ್ಯಾಯಾಂಗ ತನಿಖೆಗಾಗಿ ಗುವಾಹಟಿ ಹೈಕೋರ್ಟ್ನಲ್ಲಿ ಅರ್ಜಿಯನ್ನೂ ಸಲ್ಲಿಸಲಾಗಿದೆ. ಈ ಎಲ್ಲ ಆರೋಪಗಳನ್ನು ತಳ್ಳಿ ಹಾಕಿರುವ ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ, ಪ್ರಧಾನ ಮಂತ್ರಿ ಕಿಸಾನ್ ಸಂಪದಾ ಯೋಜನೆ ಮೂಲಕ ತಮ್ಮ ಪತ್ನಿ ಮತ್ತು ಅವರ ಕಂಪನಿಗೆ ಯಾವುದೇ ಹಣ ನೀಡಲಾಗಿಲ್ಲ ಎಂದಿದ್ದಾರೆ.