ನ್ಯೂಸ್

'ಕಾಂಗ್ರೆಸ್​ ತಮ್ಮ ಪಾಪಗಳನ್ನು ಸರಿಪಡಿಸಿಕೊಳ್ಳುವ ಸುವರ್ಣಾವಕಾಶ ಕಳೆದುಕೊಂಡಿದೆ': ಅಸ್ಸಾಂ ಸಿಎಂ ವ್ಯಂಗ್ಯ

ಅಸ್ಸಾಂ: ಅಯೋಧ್ಯೆ ರಾಮಮಂದಿರ ಉದ್ಘಾಟನೆಗೆ ಇದೀಗ ದಿನಗಣನೆ ಆರಂಭಗೊಂಡಿದ್ದು, ಕಾರ್ಯಕ್ರಮಕ್ಕೆ ಆಗಮಿಸಲಿರುವ ಸಹಸ್ರಾರು ಸಂಖ್ಯೆಯ ಭಕ್ತಾಧಿಗಳಿಗೆ ಅನುಕೂಲವಾಗುವಂತೆ ಈಗಾಗಲೇ ಉತ್ತರಪ್ರದೇಶ ಸರ್ಕಾರ ಸಕಲ ತಯಾರಿಗಳನ್ನು ಮಾಡಿಕೊಂಡಿದೆ. ಜನವರಿ 22ರಂದು ಅದ್ದೂರಿಯಾಗಿ ನಡೆಯಲಿರುವ ರಾಮನ ವಿಗ್ರಹ ಪ್ರತಿಷ್ಠಾಪನೆ ಸಮಾರಂಭಕ್ಕೆ ಗಣ್ಯಾತಿ ಗಣ್ಯರಿಗೆ ಆಹ್ವಾನ ನೀಡಲಾಗಿದ್ದು, ಕಾಂಗ್ರೆಸ್​ ಪಕ್ಷದ ಸದಸ್ಯರನ್ನು ಕೂಡ ಆಹ್ವಾನಿಸಲಾಗಿತ್ತು. ಆದ್ರೆ, ಇದನ್ನು ತಿರಸ್ಕರಿಸಿದ ಕೈ ನಾಯಕರ ವಿರುದ್ಧ ಇದೀಗ ಅಸ್ಸಾಂ ಸಿಎಂ ಹಿಮಂತ ಬಿಸ್ವಾ ವ್ಯಂಗ್ಯವಾಡಿದ್ದಾರೆ.

ರಾಮಮಂದಿರ ಉದ್ಘಾಟನಾ ಸಮಾರಂಭದ ಆಹ್ವಾನವನ್ನು ಕಾಂಗ್ರೆಸ್ ತಿರಸ್ಕರಿಸುತ್ತಿದ್ದಂತೆ ಪ್ರತಿಕ್ರಿಯಿಸಿದ ಅಸ್ಸಾಂ ಸಿಎಂ, "ಅಯೋಧ್ಯೆಗೆ ಆಹ್ವಾನ ಪಡೆಯಲು ಕಾಂಗ್ರೆಸ್ ಅರ್ಹವಲ್ಲ. ಕೊಟ್ಟ ಆಹ್ವಾನವನ್ನು ನಿರಾಕರಿಸುವ ಮೂಲಕ ಪಕ್ಷವು ತಮ್ಮ ಪಾಪಗಳನ್ನು ಸರಿಪಡಿಸಿಕೊಳ್ಳಲು ಸಿಕ್ಕಿದ್ದ ಸುವರ್ಣಾವಕಾಶವನ್ನು ಕಳೆದುಕೊಂಡಿದೆ" ಎಂದು ಹೇಳಿದ್ದಾರೆ.

"ಮೊದಲಿನಿಂದಲೂ ರಾಮ ಮಂದಿರದ ವಿರುದ್ಧ ತಮ್ಮ ಅಭಿಪ್ರಾಯಗಳಿಗಾಗಿ ಕಾಂಗ್ರೆಸ್ ಹಿಂದೂ ಸಮಾಜಕ್ಕೆ ಕ್ಷಮೆಯಾಚನೆ ಮಾಡಬಹುದಿತ್ತು. ನೆಹರು ಸೋಮನಾಥ ದೇಗುಲದಲ್ಲಿ ಮಾಡಿದಂತೆಯೇ, ರಾಮಮಂದಿರದ ವಿಷಯದಲ್ಲಿ ಕಾಂಗ್ರೆಸ್ ನಾಯಕತ್ವ ಮಾಡಿದೆ. ಇತಿಹಾಸವು ಅವರನ್ನು ಹಿಂದೂ ವಿರೋಧಿ ಪಕ್ಷ ಎಂದು ನಿರ್ಣಯಿಸುವುದು ಮುಂದುವರಿಯುತ್ತದೆ" ಎಂದು ಟ್ವೀಟ್ ಮಾಡಿದ, ವ್ಯಂಗ್ಯವಾಡಿದ್ದಾರೆ,(ಏಜೆನ್ಸೀಸ್).