ನ್ಯೂಸ್

ಹಣ ಕೇಳಿದರೆ ದಿನಕ್ಕೊಂದು ಕಥೆ! ಹಲವು ಆಮಿಷವೊಡ್ಡಿ ಧೋಖಾ

ಬೆಂಗಳೂರು: ದುಬೈ ಮತ್ತು ಶ್ರೀಲಂಕಾದಲ್ಲಿ ಅತಿಥಿ ಸತ್ಕಾರ, ಕ್ಯಾಸಿನೋ ಮತ್ತು ಬಿಟ್ ಕಾಯಿನ್ ಹೆಸರಿನಲ್ಲಿ ಉದ್ಯಮಿಗೆ ವಂಚನೆ ಪ್ರಕರಣದಲ್ಲಿ ಮತ್ತಷ್ಟು ಸ್ಪೋಟಕ ಮಾಹಿತಿ ಬಹಿರಂಗವಾಗಿದೆ. ಬಸವೇಶ್ವರನಗರ ಉದ್ಯಮಿ ವಿವೇಕ್ ಪಿ. ಹೆಗಡೆ ಎಂಬುವರಿಗೆ 25.50 ಕೋಟಿ ರೂ. ವಂಚನೆ ಪ್ರಕರಣದಲ್ಲಿ ಬಂಧಿತ ರಾಮಕೃಷ್ಣ ರಾವ್ ಮತ್ತು ಈತನ ಪುತ್ರ ರಾಹುಲ್ ತೋನ್ಸೆ ಸೇರಿ ಕುಟುಂಬಸ್ಥರು ದಿನಕ್ಕೊಂದು ಸುಳ್ಳು ಹೇಳುತ್ತಿದ್ದ ಪರಿ ಬಯಲಾಗಿದೆ.

ವಿವೇಕ್ ಕಡೆಯಿಂದ ಕೋಟ್ಯಂತರ ರೂ. ಪಡೆದು ಮತ್ತೆ 1.5 ಕೋಟಿ ರೂ. ಕೇಳಿದಾಗ ಅನುಮಾನ ವ್ಯಕ್ತವಾಗಿತ್ತು. ಹಣ ವಾಪಸ್ ಕೇಳಿದಾಗ ರಾಮಕೃಷ್ಣ ರಾವ್ ಮತ್ತು ರಾಹುಲ್ ತೋನ್ಸೆ ದೂರುದಾರ ವಿವೇಕ್​ನನ್ನು ನಂಬಿಸಲು ಪ್ರತಿತಂತ್ರ ಹೆಣೆಯುತ್ತಿದ್ದರು. 2024ರ ನ.6ರಂದು ಶ್ರೀಲಂಕಾದಲ್ಲಿ ಕ್ಯಾಸಿನೊ ಉದ್ಘಾಟನೆಗೆ ದಿನಾಂಕ ನಿಗದಿ ಮಾಡಲಾಗಿದೆ. ನೀನು (ವಿವೇಕ್) ಮತ್ತು ನಿನ್ನ ಪತ್ನಿ ಶ್ರೀಲಂಕಾಗೆ ಬರಬೇಕಿದೆ. ಪೂಜೆ ಸಲುವಾಗಿ ಪುರೋಹಿತರನ್ನು ಬುಕ್ ಮಾಡು. ಅದಕ್ಕೆ ಬೇಕಾದ ಎಲ್ಲ ವ್ಯವಸ್ಥೆ ನಾನು ಮಾಡುತ್ತೇನೆ ಎಂದು ವಿಮಾನ ಟಿಕೆಟ್ ಬುಕ್ ಮಾಡಲು ಪುರೋಹಿತರ ಪಾಸ್​ಪೋರ್ಟ್ ಕೊಡುವಂತೆ ರಾಹುಲ್ ತಿಳಿಸಿದ್ದನು. ಉದ್ಘಾಟನೆಗೆ 1.50 ಕೋಟಿ ರೂ. ತುರ್ತಾಗಿ ಬೇಕು. ವ್ಯವಸ್ಥೆ ಮಾಡದಿದ್ದರೆ ಪೂಜೆ ನಡೆಯುವುದಿಲ್ಲ ಎಂದು ತಾಕೀತು ಮಾಡಿದ್ದನು.

ನವೆಂಬರ್ 6ರ ರಾತ್ರಿ 9 ಗಂಟೆಗೆ ಶ್ರೀಲಂಕಾಗೆ ಬರಲು ವಿವೇಕ್​ಗೆ ಆರೋಪಿ ರಾಹುಲ್ ತೋನ್ಸೆ ವಿಮಾನ ಟಿಕೆಟ್ ಬುಕ್ ಮಾಡಿದ್ದ. ಅದರಂತೆ ಒಂಟಿಯಾಗಿ ವಿವೇಕ್ ಶ್ರೀಲಂಕಾಗೆ ಹೋದಾಗ ರಾಹುಲ್ ಭೇಟಿಯೇ ಮಾಡುವುದಿಲ್ಲ. ಕರೆ ಮಾಡಿ ಪ್ರಶ್ನಿಸಿದಾಗ, ದುಬೈನಲ್ಲಿ ಇದ್ದೇನೆ. ನ.8ರ ಬೆಳಗ್ಗೆ ಶ್ರೀಲಂಕಾಗೆ ಬರುವುದಾಗಿ ತಿಳಿಸಿದ್ದ. ಅಂದು ಸಹ ಬಾರದಿದ್ದಾಗ ವಿವೇಕ್ ಕರೆ ಮಾಡಿ ಕೇಳಿದಾಗ, ಶ್ರೀಲಂಕಾದಲ್ಲಿ ನನಗೆ ಜೀವ ಬೆದರಿಕೆ ಇದೆ. ಆದ್ದರಿಂದ ಬರುವುದಿಲ್ಲ. ವಾಪಸ್ ಬೆಂಗಳೂರಿಗೆ ಹೋಗುವಂತೆ ಸೂಚನೆ ನೀಡಿದ್ದ. ಹೋಟೆಲ್ ತೆರವು ಮಾಡಬೇಕಾದರೆ ಬಿಲ್ ಸಹ ಪಾವತಿ ಮಾಡಿರಲಿಲ್ಲ. ವಿಧಿ ಇಲ್ಲದೆ, ಹೋಟೆಲ್ ಬಿಲ್ ಪಾವತಿಸಿ ವಿಮಾನ ಟಿಕೆಟ್ ಬುಕ್ ಮಾಡಿಕೊಂಡು ಬೆಂಗಳೂರಿಗೆ ವಿವೇಕ್ ವಾಪಸ್ ಬಂದಿದ್ದರು. ನಂತರ ರಾಮಕೃಷ್ಣ ರಾವ್ ದಂಪತಿ ಬಳಿಗೆ ಹೋಗಿ ಕೇಳಿದಾಗ ರಾಹುಲ್ ತೋನ್ಸೆಗೆ ಆರೋಗ್ಯ ಸರಿ ಇಲ್ಲವೆಂದು ಸಬೂಬು ಹೇಳಿ ವಾಪಸ್ ಕಳುಹಿಸಿದ್ದರು.

ತಾನೇ ಕಾರು ಕೊಟ್ಟು ಸುಳ್ಳು ದೂರನ್ನೂ ಕೊಟ್ಟ: 2024ರ ಆಗಸ್ಟ್ 23ರಂದು ರಾಮಕೃಷ್ಣರಾವ್ ತುರ್ತು 25 ಲಕ್ಷ ರೂ. ಬೇಕೆಂದು ಒತ್ತಾಯ ಮಾಡಿದ್ದ. ಇಲ್ಲವೆಂದರೂ ಬಿಡದೆ ವಿವೇಕ್ ಹೆಗಡೆಗೆ ನಮ್ಮ ಬಳಿ ಇರುವ ಇನ್ನೋವಾ ಐ-ಕ್ರಾಸ್ ವಾಹನ ಇಟ್ಟುಕೊಂಡು ಹಣ ಕೊಡುವಂತೆ ಮನವಿ ಮಾಡಿದ್ದ. ಕೊನೆಗೆ ಕಾರು ಪಡೆದು ನಗದು ಕೊಟ್ಟಿದ್ದರು. ಚನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸರು ನವೆಂಬರ್ 22ಕ್ಕೆ ವಿವೇಕ್ ಮನೆಗೆ ಹೋಗಿ ಜಾಲಿರೈಡ್​ಗೆಂದು ಕಾರು ಪಡೆದು ವಾಪಸ್ ಕೊಟ್ಟಿಲ್ಲವೆಂದು ಪೊಲೀಸ್ ಆಯುಕ್ತರ ಕಚೇರಿಗೆ ರಾಮಕೃಷ್ಣರಾವ್ ನಿಮ್ಮ ವಿರುದ್ಧ ದೂರು ನೀಡಿದ್ದಾರೆ ಎಂದು ವಿಷಯ ತಿಳಿಸಿದ್ದರು. ಮಾರನೇ ದಿನ ಠಾಣಾಧಿಕಾರಿಗಳ ಮುಂದೆ ಹಾಜರಾಗಿ ನಡೆದ ವಿಷಯ ತಿಳಿಸಿ ಕಾರನ್ನು ವಾಪಸ್ ಕೊಟ್ಟು ಬಂದಿದ್ದರು. ಇದಾದ ಮೇಲೆ ರಾಮಕೃಷ್ಣ ರಾವ್ ಇಡೀ ಕುಟುಂಬ ವಿವೇಕ್ ಅವರ ಫೋನ್ ಸಂಪರ್ಕವನ್ನೇ ಕಡಿತ ಮಾಡಿಕೊಂಡಿತ್ತು.

ಹಣ ವಾಪಸ್ ಕೇಳಿದಾಗ ಮಕ್ಕಳ ಕೊಲ್ಲುವ ಬೆದರಿಕೆ: ನವೆಂಬರ್ 5ಕ್ಕೆ ರಾಮಕೃಷ್ಣ ರಾವ್​ಗೆ ವಿವೇಕ್ ಕರೆ ಮಾಡಿ ಕೊಟ್ಟಿರುವ ಹಣ ವಾಪಸ್ ನೀಡುವಂತೆ ಒತ್ತಾಯಿಸಿದ್ದರು. ಅದಕ್ಕೆ ಕುಪಿತಗೊಂಡ ರಾಮಕೃಷ್ಣ ರಾವ್, ನಿಮ್ಮ ಹಣ ಮರೆತುಬಿಡಿ. ನಮಗೆ ಹಿರಿಯ ಪೊಲೀಸ್ ಅಧಿಕಾರಿಗಳು, ನ್ಯಾಯಾಧೀಶರನ್ನು ನಿಭಾಯಿಸುವ ಸಾಮರ್ಥ್ಯವಿದೆ. ಜತೆಗೆ ಪೊಲೀಸ್ ಇಲಾಖೆ ಮತ್ತು ನ್ಯಾಯಾಂಗದಲ್ಲಿ ಸಾಕಷ್ಟು ಸಂಪರ್ಕ ಇದೆ ಎಂದು ಬೆದರಿಕೆ ಒಡ್ಡಿದ್ದರು. ತನ್ನ ತಂದೆ ಬಳಿ ಹಣ ಕೇಳಿದರೆ ಪರಿಣಾಮ ನೆಟ್ಟಿಗಿರುವುದಿಲ್ಲ. ನಿನ್ನ ಮಕ್ಕಳು ಯಾವ ಶಾಲೆಗೆ ಹೋಗುತ್ತಾರೆ ಎಂಬುದು ನನಗೆ ಗೊತ್ತಿದೆ. ಹಣದ ವಿಷಯಕ್ಕೆ ಬಂದರೆ ನಿಮ್ಮ ಮಕ್ಕಳು ಮನೆಗೆ ಬರುವುದಿಲ್ಲ ಎಂದು ವಿವೇಕ್​ಗೆ ರಾಹುಲ್ ತೋನ್ಸೆ ಹೆದರಿಸಿದ್ದನು ಎಂದು ಆರೋಪಿಸಲಾಗಿದೆ.

150ಕ್ಕೂ ಹೆಚ್ಚು ಹೂಡಿಕೆದಾರರು ಹಾಜರು: ರಾಮಕೃಷ್ಣ ರಾವ್ ಅವರ ಪುತ್ರಿ ರಕ್ಷಾ ತೋನ್ಸೆ ಮತ್ತು ಅಳಿಯ ಚೇತನ್ ನಾರಾಯಣ ಶ್ರೀಲಂಕಾದಲ್ಲಿ ಕ್ಯಾಸಿನೋ ನೆಪದಲ್ಲಿ 25 ಕೋಟಿ ರೂ. ಸಂಗ್ರಹಿಸಲು ಪ್ಲಾ್ಯನ್ ಮಾಡಿದ್ದರು. ಅದಕ್ಕಾಗಿ 2023ರ ಡಿಸೆಂಬರ್ ಅಂತ್ಯದಲ್ಲಿ ಹೂಡಿಕೆದಾರರನ್ನು ಜೂಮ್ ಮೀಟಿಂಗ್​ನಲ್ಲಿ ಸೇರಿಸುವಂತೆ ವಿವೇಕ್​ಗೆ ಸಲಹೆ ನೀಡಿದ್ದರು. ಜೂಮ್ ಮೀಟಿಂಗ್​ನಲ್ಲಿ 150 ಜನರು ಜಾಯಿನ್ ಆಗಿದ್ದರು. ಆ ವೇಳೆ ರಕ್ಷಾ ಮತ್ತು ಚೇತನ್, ರಾಮಕೃಷ್ಣ ರಾವ್ ಕ್ಯಾಸಿನೋ ಬಗ್ಗೆ ಮಾಹಿತಿ ಹಂಚಿಕೊಂಡಿದ್ದರು. ಶ್ರೀಲಂಕಾದಲ್ಲಿ ಹೂಡಿಕೆ ಮಾಡಿದರೆ ಭವಿಷ್ಯದಲ್ಲಿ ಉತ್ತಮ ಲಾಭಾಂಶ ಸಿಗಲಿದೆ ಎಂದು ಆಮಿಷವೊಡ್ಡಿದ್ದರು. 40 ಜನರು ಹೂಡಿಕೆಗೆ ಆಸಕ್ತಿ ತೋರಿದ್ದರು. ನವೆಂಬರ್ 15ರಂದು ರಾಹುಲ್​ಗೆ ಸೇರಿದ ಬನಶಂಕರಿಯ ಫ್ಲ್ಯಾಟ್​ನಲ್ಲಿ ಎಲ್ಲರಿಗೂ ರಾಮಕೃಷ್ಣ ರಾವ್ ಭೋಜನ ಕೂಟ ಏರ್ಪಡಿಸಿದ್ದನು.