ಜೈಪುರ: ರಾಜಕೀಯ ಬಿಕ್ಕಟ್ಟು ಬಂತೆಂದರೆ ಶಾಸಕರಿಗೆ ನಿಜಕ್ಕೂ ಹಬ್ಬವೇ ಸರಿ. ಬಂಡಾಯವೇ ಆಗಿರಲಿ; ಸರ್ಕಾರದ ಪರವೇ ಇರಲಿ. ಇವರಿಗಂತೂ ರಾಜವೈಭೋಗ ತಪ್ಪಿದ್ದಲ್ಲ.
ಜುಲೈ 13ರಿಂದ ರಾಜಸ್ಥಾನ ಶಾಸಕರು ರೆಸಾರ್ಟ್, ಪಂಚತಾರಾ ಹೋಟೇಲ್ಗಳಲ್ಲಿಯೇ ಬೀಡು ಬಿಟ್ಟಿದ್ದಾರೆ. ಗೆಹ್ಲೋಟ್ ಪರ ಶಾಸಕರು ಜೈಪುರ ಹೊರವಲಯದಲ್ಲಿರುವ ಫೇರ್ಮೌಂಟ್ ಹೋಟೆಲ್ನಲ್ಲಿದ್ದಾರೆ. ಅತ್ತ ಸಚಿನ್ ಪೈಲಟ್ ಬಣದವರು ಹರಿಯಾಣದ ಮಾನೇಸರ್ನಲ್ಲಿ ಸಕಲ ಐಷಾರಾಮ ಅನುಭವಿಸುತ್ತಿದ್ದಾರೆ.
ಇದೀಗ, ಆಗಸ್ಟ್ 14ಕ್ಕೆ ವಿಧಾನಸಭೆ ಅಧಿವೇಶನ ಆರಂಭವಾಗಲಿದೆ. ಹೀಗಾಗಿ ಅಲ್ಲಿಯವರೆಗೂ ಅವರನ್ನು ಕಾದಿಡುವುದು ಭಾರಿ ಸವಾಲಿನ ಕೆಲಸವೇ ಅಗಿದೆ. ಗೆಹ್ಲೋಟ್ ಬೆಂಬಲಿಗರನ್ನು ಜೈಪುರದಿಂದ 550 ಕಿ.ಮೀ. ದೂರದಲ್ಲಿರುವ ಜೈಸಲ್ಮೇರ್ನ ಮಾರಿಯಟ್ ರೆಸಾರ್ಟ್ ಹಾಗೂ ಸೂರ್ಯಗಢ್ ಹೋಟೆಲ್ಗೆ ಸ್ಥಳಾಂತರಿಸಲಾಗಿದೆ.
ಶಾಸಕರನ್ನು ಕರೆದೊಯ್ಯಲು ಮೂರು ವಿಶೇಷ ವಿಮಾನಗಳನ್ನು ಬುಕ್ ಮಾಡಲಾಗಿತ್ತು. ಜೈಸಲ್ಮೇರ್ನ ಎರಡೂ ವಾಸ್ತವ್ಯಗಳು ಕೂಡ ಐಷಾರಾಮಿ ಸೌಲಭ್ಯ ಹೊಂದಿವೆ. ಪ್ರತಿ ದಿನದ ಬಾಡಿಗೆ 10,000 ರೂ.ಗಳಿಂದ ಹಲವು ಲಕ್ಷ ರೂ. ಬಾಡಿಗೆಯ ಕೊಠಡಿಗಳು ಇಲ್ಲಿವೆ.
ಇದನ್ನೂ ಓದಿ; ರಾಜಸ್ಥಾನದಲ್ಲಿ ‘ಕುದುರೆ ವ್ಯಾಪಾರ’ಕ್ಕೆ ಅನ್ಲಿಮಿಟೆಡ್ ಆಫರ್; ವಿಧಾನಸಭೆ ಅಧಿವೇಶನ ನಿಗದಿ ಬಳಿಕ ಬೆಲೆಯಲ್ಲಿ ಭಾರಿ ಏರಿಕೆ
ಜೈಪುರ ಹೋಟೆಲ್ ಗೆಹ್ಲೋಟ್ ಆಪ್ತರಿಗೆ ಸೇರಿದ್ದು ಎನ್ನಲಾಗಿತ್ತು. ಇಲ್ಲಿಯೂ ಕೂಡ ಸರ್ಕಾರದ ಪರ ಇರುವ ಉದ್ಯಮಿಯೊಬ್ಬರು ಶಾಸಕರ ವಾಸ್ತವ್ಯದ ಉಸ್ತುವಾರಿ ವಹಿಸಿಕೊಂಡಿದ್ದಾರೆ ಎಂದೇ ಹೇಳಲಾಗಿದೆ.