ನ್ಯೂಸ್

50ನೇ ದಿನಕ್ಕೆ ಕಾಲಿಟ್ಟ ಮುಷ್ಕರ! ಕೂದಲು ಕತ್ತರಿಸಿ ಆಕ್ರೋಶ ಹೊರಹಾಕಿದ ಕೇರಳ ಆಶಾ ಕಾರ್ಯಕರ್ತೆಯರು | ASHA Workers

ASHA Workers: ಕೇರಳ ಸಚಿವಾಲಯದ ಮುಂಭಾಗ ತಮ್ಮ ಪ್ರತಿಭಟನೆ ಆರಂಭಿಸಿದ ರಾಜ್ಯದ ಆಶಾ ಕಾರ್ಯಕರ್ತೆಯರು ಇದೀಗ ಮುಷ್ಕರದ 50ನೇ ದಿನಕ್ಕೆ ಕಾಲಿಟ್ಟಿದ್ದಾರೆ. ತಮ್ಮ ಹಲವು ಬೇಡಿಕೆಗಳನ್ನು ಈಡೇರಿಸಿ, ಇಲ್ಲವೇ ನಮ್ಮ ಪ್ರತಿಭಟನೆ ಇನ್ನೂ ಮುಂದುವರಿಯುತ್ತದೆ ಎಂದು ಕೇರಳ ಸರ್ಕಾರಕ್ಕೆ ಎಚ್ಚರಿಕೆ ರವಾನಿಸಿದ್ದಾರೆ.

ಕಳೆದ ತಿಂಗಳು ರಸ್ತೆಗಿಳಿದು ದೊಡ್ಡ ಮಟ್ಟದಲ್ಲಿ ಮುಷ್ಕರ ಕೈಗೊಂಡ ಕಾರ್ಯಕರ್ತೆಯರಿಗೆ ಬೆದರಿಕೆ ಹಾಕಿದ್ದ ಕಾರ್ಮಿಕ ಸಂಘದ ನಾಯಕಿಯೊಬ್ಬರು, ಕೆಲಸಕ್ಕೆ ಮರಳದೆ ಮುಷ್ಕರ ಮುಂದುವರಿಸಿದರೆ ನಿಮ್ಮ ಉದ್ಯೋಗವನ್ನು ಕಳೆದುಕೊಳ್ಳುತ್ತೀರಿ ಎಂದು ಎಚ್ಚರಿಕೆ ರವಾನಿಸಿದ್ದರು. ಇದ್ಯಾವುದಕ್ಕೂ ಬಗ್ಗದ ಆಶಾ ಕಾರ್ಯಕರ್ತೆಯರು ಸರ್ಕಾರದ ವಿರುದ್ಧ ತಮ್ಮ ಪ್ರತಿಭಟನೆಯನ್ನು 50ನೇ ದಿನಕ್ಕೆ ಕೊಂಡೊಯ್ದಿದ್ದಾರೆ.

ಇಂದು ಬೆಳಗ್ಗೆಯಿಂದಲೇ ಕೇರಳ ಸಚಿವಾಲಯದ ಮುಂದೆ ತಮ್ಮ ವಿವಿಧ ಬೇಡಿಕೆಗಳಿಗಾಗಿ ಬೃಹತ್​ ಪ್ರತಿಭಟನೆ ಕೈಗೊಂಡ ಆಶಾ ಕಾರ್ಯಕರ್ತೆಯರು, 50ನೇ ದಿನದ ಹೋರಾಟದಂದೇ ತಮ್ಮ ಕೂದಲು ಕತ್ತರಿಸಿಕೊಳ್ಳುವ ಮೂಲಕ ಪ್ರತಿಭಟನೆಯನ್ನು ಮತ್ತಷ್ಟು ತೀವ್ರಗೊಳಿಸಿದ್ದಾರೆ. ನೂರಾರು ಮಹಿಳೆಯರು ಒಟ್ಟುಗೂಡಿ, ಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿದ್ದಾರೆ. ಈ ವೇಳೆ ಹಲವರು ತಮ್ಮ ಕೂದಲನ್ನು ಕತ್ತರಿಸಿ, ಕಣ್ಣೀರಿಟ್ಟರು.

"ನಮಗೆ ಕೂದಲು ನಮ್ಮ ಮಕ್ಕಳಂತೆ. ಈಗಾಗಲೇ ಸಲ್ಲಿಸಿರುವ ವಿವಿಧ ಬೇಡಿಕೆಗಳ ಬಗ್ಗೆ ಕಿಂಚಿತ್ತು ಸ್ಪಂದಿಸದೆ ಸುಮ್ಮನೆ ಕುಳಿತಿರುವ ರಾಜ್ಯ ಸರ್ಕಾರದ ನಿಲುವೇನು ಎಂಬುದು ನಮಗೆ ತಿಳಿಯುತ್ತಿಲ್ಲ. ನಮ್ಮ ವಿಷಯದಲ್ಲಿ ಕೇರಳ ಸರ್ಕಾರ ಸಂಪೂರ್ಣವಾಗಿ ಮೌನ ತಾಳಿದೆ. ಅವರು ಮೌನಕ್ಕೆ ಜಾರಿದ್ದಾರೆ ಎಂದು ನಾವು ಸುಮ್ಮನಿರುವುದಿಲ್ಲ. ಈ ಹೋರಾಟ ಇಲ್ಲಿಗೆ ನಿಲ್ಲುವುದಿಲ್ಲ. ನಾವು ಮುಂದಿಟ್ಟಿರುವ ಬೇಡಿಕೆಗಳನ್ನು ಈಡೇರಿಸುವವರೆಗೂ ಈ ಹೋರಾಟಕ್ಕೆ ಕೊನೆಯೇ ಇಲ್ಲ" ಎಂದು ಕಾರ್ಯಕರ್ತೆ ಬಿಂದು ಎಚ್ಚರಿಕೆ ರವಾನಿಸಿದ್ದಾರೆ,(ಏಜೆನ್ಸೀಸ್).