ಮುಂಬೈ: ಬಾಲಿವುಡ್ ಬಾದ್ಷಾ ಶಾರುಖ್ ಖಾನ್ರ ಮಗ ಆರ್ಯನ್ ಖಾನ್ ಇಂದು ಬೆಳಿಗ್ಗೆ ಜಾಮೀನಿನ ಮೇಲೆ ಬಿಡುಗಡೆ ಹೊಂದಿದ್ದು, 28 ದಿನಗಳ ನಂತರ ತಮ್ಮ ಮನೆ 'ಮನ್ನತ್' ತಲುಪಿದ್ದಾರೆ. ಜೈಲಿನ ಹೊರಗಡೆ ಆರ್ಯನ್ರ ಝಲಕ್ ನೋಡಲು ಶಾರುಖ್ ಅಭಿಮಾನಿಗಳ ದಂಡೇ ನೆರೆದಿತ್ತು. ಮನ್ನತ್ ಬಳಿಯೂ ಕೂಡಿದ್ದ ಜನಸಾಗರ ಆರ್ಯನ್ ಆಗಮನಕ್ಕೆ ಹರ್ಷೋತ್ಸವ ಆಚರಿಸಿತು.
ಕ್ರೂಸ್ ಶಿಪ್ನಲ್ಲಿ ನಡೆಯುತ್ತಿದ್ದ ಡ್ರಗ್ಸ್ ಪಾರ್ಟಿ ಮೇಲಿನ ದಾಳಿಯ ನಂತರ ಆರ್ಯನ್ ಖಾನ್ರನ್ನು ಅಕ್ಟೋಬರ್ 3 ರಂದು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ(ಎನ್ಸಿಬಿ) ಅಧಿಕಾರಿಗಳು ಬಂಧಿಸಿದ್ದರು. ಡ್ರಗ್ಸ್ ಕೇಸಿನ ಆರೋಪಿಯಾಗಿರುವ ಆರ್ಯನ್ರ ಜಾಮೀನು ಅರ್ಜಿ ಎರಡು ನ್ಯಾಯಾಲಯಗಳಲ್ಲಿ ವಜಾ ಆದ ಮೇಲೆ, ಹೈಕೋರ್ಟ್ ಅ.28 ರಂದು ಅವರಿಗೆ 3 ವಾರಗಳ ಜಾಮೀನು ನೀಡಿತು.
ಮುಂಬೈನ ಆರ್ಥರ್ ರಸ್ತೆ ಜೈಲಿನಿಂದ ಬಿಡುಗಡೆಗೊಂಡ ಆರ್ಯನ್ರನ್ನು ಮನೆಗೆ ಕರೆದುಕೊಂಡು ಬರಲು ಶಾರುಖ್ ಖುದ್ದಾಗಿ ಹೋಗಿದ್ದರು ಎನ್ನಲಾಗಿದೆ. ಅವರ ಪರ್ಸನಲ್ ಬಾಡಿಗಾರ್ಡ್ ರವಿ ಸಿಂಗ್ ಆರ್ಯನ್ರನ್ನು ಕಾರಿನ ಕಡೆಗೆ ಕರೆದುಕೊಂಡು ಹೋಗುತ್ತಿರುವ ಫೋಟೋ ವೈರಲ್ ಆಗಿದೆ. ಶಾರುಖ್ ನಿವಾಸ ಮನ್ನತ್ ಮಗನ ವಾಪಸಾತಿಗೆ ಅಲಂಕೃತಗೊಂಡಿದ್ದು, ಅದರ ಸುತ್ತಲೂ ಅವರ ಅಭಿಮಾನಿಗಳು ಬ್ಯಾಂಡ್ ಬಾಜಾ ಸಮೇತ ನೆರೆದಿದ್ದರು. ಬಿಳಿಯ ರೇಂಜ್ ರೋವರ್ ಕಾರಿನಲ್ಲಿ ಆರ್ಯನ್ ಮನೆಗೆ ಮರಳಿದ ಸಂದರ್ಭದಲ್ಲಿ ಜನರು ಪಟಾಕಿಗಳನ್ನೂ ಹೊಡೆದು, ಹರ್ಷೋದ್ಗಾರ ನಡೆಸಿದ್ದಾರೆ. (ಏಜೆನ್ಸೀಸ್)