ನ್ಯೂಸ್

ಚುನಾವಣಾ ಫಲಿತಾಂಶಕ್ಕೂ ಮುನ್ನವೇ ಬಿಜೆಪಿ ವಿರುದ್ಧ ಗಂಭೀರ ಆರೋಪ ಮಾಡಿದ Arvind Kejriwal; ಕಾನೂನು ಕ್ರಮದ ಎಚ್ಚರಿಕೆ ನೀಡಿದ ಕಮಲಪಡೆ

ನವದೆಹಲಿ: ತೀವ್ರ ಕುತೂಹಲ ಕೆರಳಿಸಿರುವ ದೆಹಲಿ ವಿಧಾನಸಭೆ ಚುನಾವಣಾ ಫಲಿತಾಂಶ ಫೆಬ್ರವರಿ 08ರಂದು ಹೊರಬೀಳಲಿದ್ದು, ಬಹುತೇಕ ಸಮೀಕ್ಷೆಗಳು ಬಿಜೆಪಿ ಪರ ಒಲವು ತೋರಿಸಿವೆ. ಇನ್ನೂ ಸಮೀಕ್ಷೆಗಳೆಲ್ಲ ಸುಳ್ಳು ಎಂದು ಹೇಳಿರುವ ಆಪ್​ ನಾಲ್ಕನೇ ಅವಧಿಗೂ ಅಧಿಕಾರ ಮುಂದುವರೆಸುವ ವಿಶ್ವಾಸವನ್ನು ವ್ಯಕ್ತಪಡಿಸಿದೆ. ಗ್ಯಾರಂಟಿಗಳ ಗುಂಗಿನಲ್ಲಿ ಅಬ್ಬರದ ಪ್ರಚಾರ ನಡೆಸಿದ್ದ ಕಾಂಗ್ರೆಸ್​ 2-3 ಸ್ಥಾನ ಗೆಲ್ಲುತ್ತದೆ ಎಂದು ಸಮೀಕ್ಷೆಗಳು ಹೇಳಿದ್ದು, ಅಂತಿಮವಾಗಿ ಜಯ ಯಾರ ಪಾಲಾಗಲಿದೆ ಎಂದು ಕಾದು ನೋಡಬೇಕಿದೆ.

ಇನ್ನೂ ಫಲಿತಾಂಶ ಪ್ರಕಟವಾಗುವುದಕ್ಕೆ ದಿನಗಣನೆ ಆರಂಭವಾಗಿರುವ ಹೊಸ್ತಿಲಲ್ಲೇ ಎಎಪಿ ರಾಷ್ಟ್ರೀಯ ಸಂಚಾಲಕ ಅರವಿಂದ್​ ಕೇಜ್ರಿವಾಲ್ (Arvind Kejriwal)​ ಬಿಜೆಪಿ ವಿರುದ್ಧ ಆರೋಪ ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದಗ್ದು. ರಾಷ್ಟ್ರ ರಾಜಧಾನಿಯಲ್ಲಿ ಬಿಜೆಪಿ ನಾಯಕರು ನಡೆಸಲು ಮುಂದಾಗಿರುವ ಆಪರೇಷನ್ ಕಮಲದ ಬಗ್ಗೆ ಮಾತನಾಡಿದ್ದಾರೆ.

ಈ ಬಗ್ಗೆ ಸಾಮಾಜಿಕ ಜಾಲತಾಣ ಟ್ವಿಟರ್​ನಲ್ಲಿ ಪೋಸ್ಟ್ ಮಾಡಿರುವ ಅರವಿಂದ್ರ ಕೇಜ್ರಿವಾಲ್ (Arvind Kejriwal)​, ಕಳೆದ ಎರಡು ಗಂಟೆಗಳ ಅವಧಿಯಲ್ಲಿ ಬಿಜೆಪಿ ನಾಯಕರು ಎಎಪಿಯ 16 ಅಭ್ಯರ್ಥಿಗಳಿಗೆ ಕರೆ ಮಾಡಿ ತಮ್ಮ ಪಕ್ಷಕ್ಕೆ ಬರುವಂತೆ ಆಹ್ವಾನಿಸಿದ್ದಾರೆ. ಚುನಾವಣೆ ಫಲಿತಾಂಶದ ಬಳಿಕ ನೀವು ಎಎಪಿಯನ್ನು ಬಿಟ್ಟು ಬಿಜೆಪಿ ಸೇರಿದರೆ 15 ಕೋಟಿ ರೂ. ಹಣ ಹಾಗೂ ಸಚಿವರನ್ನಾಗಿ ಮಾಡುವುದಾಗಿ ಆಮಿಷವನ್ನು ಒಡ್ಡಿದ್ದಾರೆ. ಕೆಲವು ಅಭ್ಯರ್ಥಿಗಳ ಮೇಲೆ ಒತ್ತಡ ಹೇರುವ ಏಕೈಕ ಉದ್ದೇಶದಿಂದ ಈ ನಕಲಿ ಸಮೀಕ್ಷೆಗಳನ್ನು ನಡೆಸಲಾಗಿದೆ. ಆದರೆ ನಮ್ಮವರು ಯಾವುದೇ ಕಾರಣಕ್ಕೂ ಬಿಜೆಪಿಗೆ ಹೋಗುವುದಿಲ್ಲ ಎಂದು ಎಎಪಿ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್​ ಟ್ವೀಟ್ ಮಾಡಿ ಆರೋಪಿಸಿದ್ಧಾರೆ.

ಸದ್ಯ ಅರವಿಂದ್​ ಕೇಜ್ರಿವಾಲ್ ಪೋಸ್ಟ್ ಹೊಸ ರಾಜಕೀಯ ಸಂಘರ್ಷಕ್ಕೆ ನಾಂದಿ ಹಾಡಿದ್ದು, ಬಿಜೆಪಿ ಕಾನೂನು ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಿದೆ. ಎಎಪಿ ನಾಯಕರು ಸೋಲು ಹತಾಶೆಯಿಂದ ಈ ರೀತಿಯ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಈ ರೀತಿಯ ಸುಳ್ಳು ಆರೋಪ ಮಾಡಿದವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ವೀರೇಂದ್ರ ಸಚ್​ದೇವ ಎಚ್ಚರಿಕೆ ನೀಡಿದ್ದಾರೆ.

25 ವರ್ಷಗಳ ಬಳಿಕ ಅಧಿಕಾರಕ್ಕೇರಲು ಪಣ ತೊಟ್ಟಿರುವ ಬಿಜೆಪಿ (BJP) ಪ್ರಮುಖವಾಗಿ ಆಪ್​ ಸರ್ಕಾರದ ವೈಫಲ್ಯ ಹಾಗೂ ಕೇಂದ್ರ ಸರ್ಕಾರದ ಸಾಧನೆಗಳನ್ನು ಜನರ ಮುಂದಿಟ್ಟು ಮತಯಾಚಿಸಿದೆ. ತನ್ನ ಓಟವನ್ನು ನಾಲ್ಕನೇ ಅವಧಿಗೆ ವಿಸ್ತರಿಸುವ ನಿಟ್ಟಿನಲ್ಲಿ ಆಪ್ ಹಿಂದೆಗಿಂತಲೂ ಈ ಬಾರಿ ಹೆಚ್ಚು ಉಚಿತ ಯೋಜನೆಗಳನ್ನು ಘೋಷಿಸಿದ್ದು, ಕಾಂಗ್ರೆಸ್ ಕರ್ನಾಟಕದ ಮಾದರಿಯಲ್ಲೇ ಗ್ಯಾರಂಟಿಗಳನ್ನು ಘೋಷಿಸಿ ಮತಯಾಚಿಸಿದೆ. ಅಂತಿಮವಾಗಿ ವಿಜಯಲಕ್ಷ್ಮೀ ಯಾರಿಗೆ ಒಲಿಯಲಿದ್ದಾಳೆ ಎಂದು ಕಾದು ನೋಡಬೇಕಿದೆ.