ನ್ಯೂಸ್

ಬಿಜೆಪಿಗೆ ಮತ ನೀಡಿದರೆ ಈ ಸಮಸ್ಯೆ ತಪ್ಪಿದ್ದಲ್ಲ; Arvind Kejriwal ಎಚ್ಚರಿಕೆ

ನವದೆಹಲಿ: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷಕ್ಕೆ (ಬಿಜೆಪಿ) ಮತ ಹಾಕಿದರೆ ಮತ್ತೆ ವಿದ್ಯುತ್ ಕಡಿತವನ್ನು ಎದುರಿಸಬೇಕಾಗುತ್ತದೆ ಎಂದು ಆಮ್ ಆದ್ಮಿ ಪಕ್ಷದ (ಎಎಪಿ) ಸಂಚಾಲಕ ಅರವಿಂದ್ ಕೇಜ್ರಿವಾಲ್(Arvind Kejriwal) ಶುಕ್ರವಾರ(ಅಕ್ಟೋಬರ್​ 25) ಮತದಾರರಿಗೆ ಎಚ್ಚರಿಕೆ ನೀಡಿದ್ದಾರೆ.

ದೆಹಲಿಯ ವಿಕಾಸಪುರಿಯಲ್ಲಿ ನಡೆದ ರ್ಯಾಲಿಯಲ್ಲಿ ಮಾತನಾಡಿ, ದೆಹಲಿಯಲ್ಲಿ ವಿದ್ಯುತ್​ ಉಚಿತವಾಗಿದೆ ಆದರೆ (ದೆಹಲಿ ಜನರು) ಬಿಜೆಪಿಗೆ ಮತ ಹಾಕಿದರೆ ನೀವು ಮತ್ತೊಮ್ಮೆ ವಿದ್ಯುತ್ ಕಡಿತವನ್ನು ಎದುರಿಸುತ್ತೀರಿ. ಉತ್ತರ ಪ್ರದೇಶ ಮತ್ತು ಬಿಹಾರದಲ್ಲಿ ಈಗಾಗಲೇ 8 ರಿಂದ 10 ಗಂಟೆಗಳ ಕಾಲ ವಿದ್ಯುತ್​​ ಕಡಿತಗೊಳಸಲಾಗುತ್ತಿದೆ. ಜತೆಗೆ ಉತ್ತರಪ್ರದೇಶ, ರಾಜಸ್ಥಾನ ಮತ್ತು ಬಿಹಾರದಲ್ಲಿ ವಿದ್ಯುತ್​ ಬಿಲ್​ ತುಂಬಾ ದುಬಾರಿಯಾಗಿದೆ ಎಂದು ಅರವಿಂದ್​ ಕೇಜ್ರಿವಾಲ್​ ಹೇಳಿದ್ದಾಗಿ ಪಿಟಿಐ ವರದಿ ಮಾಡಿದೆ.

ಪಾದಯಾತ್ರೆ ನಡೆಸಿದ ಭಾಗದಲ್ಲಿನ ಜನರಿಗೆ, ಈ ಕ್ಷೇತ್ರಗಳಲ್ಲಿ ಎಎಪಿಯ ಕೆಲಸಗಳು ಅಪ್ರತಿಮವಾಗಿದೆ. ಬಿಜೆಪಿ ಅಧಿಕಾರಕ್ಕೆ ಬಂದರೆ ಉತ್ತರ ಪ್ರದೇಶ ಮತ್ತು ಹರಿಯಾಣದಂತಹ ನೆರೆಯ ರಾಜ್ಯಗಳಲ್ಲಿ ಕಂಡುಬರುವಂತೆಯೇ ದೆಹಲಿಯು ದೀರ್ಘಾವಧಿಯ ವಿದ್ಯುತ್ ಕಡಿತಕ್ಕೆ ಮರಳಬಹುದು ಎಂದು ಅವರು ಹೇಳಿದ್ದಾರೆ. ಕೆಲವರು ನೀರಿನ ಬಿಲ್ ಹೆಚ್ಚುತ್ತಿದೆ ಎಂದು ಕೇಳಿದ್ದಕ್ಕೆ ನೀವು ಚಿಂತಿಸಬೇಡಿ, ನನಗೆ ಮತ ನೀಡಿ-ನನ್ನನ್ನು ಮುಖ್ಯಮಂತ್ರಿಯನ್ನಾಗಿ ಮಾಡಿ, ನಿಮ್ಮ ಎಲ್ಲಾ ನೀರಿನ ಬಿಲ್‌ಗಳನ್ನು ನಾನು ಮನ್ನಾ ಮಾಡುತ್ತೇನೆ ಎಂದು ಕೇಜ್ರಿವಾಲ್ ಭರವಸೆ ನೀಡಿರುವುದಾಗಿ ಪಿಟಿಐ ಉಲ್ಲೇಖಿಸಿದೆ.

ಮುಂದಿನ ವರ್ಷ ಫೆಬ್ರವರಿಯಲ್ಲಿ ನಡೆಯಲಿರುವ ದೆಹಲಿ ವಿಧಾನಸಭಾ ಚುನಾವಣೆಗೆ ಆಮ್ ಆದ್ಮಿ ಪಕ್ಷ ತನ್ನ ತಯಾರಿಯನ್ನು ತೀವ್ರಗೊಳಿಸಿದೆ. ಇತ್ತೀಚೆಗಷ್ಟೇ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದಿರುವ ಅರವಿಂದ್​​​ ಕೇಜ್ರಿವಾಲ್ ನಗರದಾದ್ಯಂತ ಪ್ರಚಾರ ನಡೆಸುತ್ತಿದ್ದಾರೆ. (ಏಜೆನ್ನೀಸ್​​)