ನವದೆಹಲಿ: ಸುಮಾರು ಆರು ತಿಂಗಳ ಬಳಿಕ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಶುಕ್ರವಾರ (ಸೆಪ್ಟೆಂಬರ್ 13) ತಿಹಾರ್ ಜೈಲಿನಿಂದ ಹೊರಬಂದಿದ್ದಾರೆ. ಅಬಕಾರಿ ನೀತಿ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ಅವರಿಗೆ ಜಾಮೀನು ನೀಡಿದ ಕೆಲವೇ ಗಂಟೆಗಳ ನಂತರ ತಿಹಾರ್ ಜೈಲಿನಿಂದ ನಿರ್ಗಮಿಸಿದ್ದಾರೆ. ಪತ್ನಿ ಸುನೀತಾ ಕೇಜ್ರಿವಾಲ್, ಮನೀಶ್ ಸಿಸೋಡಿಯಾ, ಪಂಜಾಬ್ ಸಿಎಂ ಭಾಗವತ್ ಮಾನ್ ಮತ್ತು ಪಕ್ಷದ ನಾಯಕರು ಎಎಪಿ ನಾಯಕನಿಗೆ ಸ್ವಾಗತ ಕೋರಿದರು.
ಈ ಮಳೆಯಲ್ಲಿ ನನಗಾಗಿ ಕಾಯುತ್ತಿರುವ ಜನರಿಗೆ ಧನ್ಯವಾದ ತಿಳಿಸಿ ಮಾತನಾಡಿದ ಸಿಎಂ ಅರವಿಂದ್ ಕೇಜ್ರಿವಾಲ್, ನನ್ನ ಪ್ರತಿ ರಕ್ತದ ಹನಿಯೂ ದೇಶಕ್ಕೆ ಸಮರ್ಪಿತವಾಗಿದೆ. ಕಷ್ಟಗಳನ್ನು ಎದುರಿಸಿದೆ ಆದರೆ ದೇವರು ಯಾವಾಗಲೂ ನನ್ನೊಂದಿಗೆ ಇದ್ದಾನೆ, ಅವರು ನನ್ನ ನೈತಿಕತೆಯನ್ನು ಮುರಿಯಲು ನನ್ನನ್ನು ಜೈಲಿಗೆ ಹಾಕಿದರು. ಆದರೆ ನನ್ನ ನೈತಿಕತೆ ಹಿಂದೆಂದಿಗಿಂತಲೂ ಹೆಚ್ಚಾಗಿದೆ. ಜೈಲುಗಳು ನನ್ನನ್ನು ದುರ್ಬಲಗೊಳಿಸುವುದಿಲ್ಲ ಎಂದು ಹೇಳಿದರು. ರಾಷ್ಟ್ರವನ್ನು ದುರ್ಬಲಗೊಳಿಸಲು ಕೆಲಸ ಮಾಡುವ ದೇಶವಿರೋಧಿ ಶಕ್ತಿಗಳ ಹೋರಾಟವನ್ನು ಮುಂದುವರಿಸುವುದಾಗಿ ಅವರು ಪ್ರತಿಜ್ಞೆ ಮಾಡಿದರು.
ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಉಜ್ಜಲ್ ಭುಯಾನ್ ಅವರಿದ್ದ ಪೀಠವು ಕೇಜ್ರಿವಾಲ್ ಅವರನ್ನು ಬಿಡುಗಡೆ ಮಾಡುವ ಮೊದಲು ಕೆಲವು ಷರತ್ತುಗಳನ್ನು ಹಾಕಿತು. ತೀರ್ಪನ್ನು ಓದುವಾಗ ನ್ಯಾಯಮೂರ್ತಿ ಸೂರ್ಯ ಕಾಂತ್ ಅವರು, 10 ಲಕ್ಷ ರೂಪಾಯಿಗಳ ಜಾಮೀನು ಬಾಂಡ್ಗಳಿಗೆ ಒಳಪಟ್ಟು ಜಾಮೀನಿನ ಮೇಲೆ ಬಿಡುಗಡೆ ಮಾಡಲು ನಾವು ಅರವಿಂದ್ ಕೇಜ್ರಿವಾಲ್ ಅವರನ್ನು ನಿರ್ದೇಶಿಸುತ್ತೇವೆ ಎಂದು ಹೇಳಿದರು.
ಪ್ರಕರಣದ ಬಗ್ಗೆ ಯಾವುದೇ ಸಾರ್ವಜನಿಕ ಕಾಮೆಂಟ್‌ಗಳನ್ನು ಮಾಡದಂತೆ ಹಾಗೂ ವಿನಾಯಿತಿ ನೀಡದ ಹೊರತು ವಿಚಾರಣಾ ನ್ಯಾಯಾಲಯದ ಮುಂದೆ ಎಲ್ಲಾ ವಿಚಾರಣೆಗಳಿಗೆ ಹಾಜರಾಗುವಂತೆ ನ್ಯಾಯಾಲಯ ಕೇಜ್ರಿವಾಲ್‌ಗೆ ಸೂಚಿಸಿದೆ. ಇಡಿ ಪ್ರಕರಣದಲ್ಲಿ ವಿಧಿಸಿರುವ ನಿಯಮಗಳು ಮತ್ತು ಷರತ್ತುಗಳು ಇಲ್ಲಿಯೂ ಅನ್ವಯಿಸುತ್ತವೆ ಎಂದು ಹೇಳಿದೆ. ಅವರು ಮುಖ್ಯಮಂತ್ರಿ ಕಚೇರಿಗೆ ಪ್ರವೇಶಿಸುವುದನ್ನು ನ್ಯಾಯಾಲಯವು ನಿರ್ಬಂಧಿಸಿದೆ.
ದೆಹಲಿ ಅಬಕಾರಿ ನೀತಿ ಅಕ್ರಮಗಳಿಗೆ ಸಂಬಂಧಿಸಿದಂತೆ ಅಕ್ರಮ ಹಣ ವರ್ಗಾವಣೆ ತನಿಖೆಗೆ ಸಂಬಂಧಿಸಿದಂತೆ 2024 ಮಾರ್ಚ್ 21ರಂದು ಜಾರಿ ನಿರ್ದೇಶನಾಲಯ(ಇಡಿ) ಕೇಜ್ರಿವಾಲ್ ಅವರನ್ನು ಬಂಧಿಸಿತು. ಜಾರಿ ನಿರ್ದೇಶನಾಲಯದ ವಶದಲ್ಲಿದ್ದಾಗಲೆ 2024 ಜೂನ್ 26ರಂದು ಸಿಬಿಐನಿಂದ ಬಂಧಿಸಲ್ಪಟ್ಟರು. (ಏಜೆನ್ಸೀಸ್)