ನವದೆಹಲಿ: ದೇಶಾದ್ಯಂತ ಬೆಳಕಿನ ಹಬ್ಬ ದೀಪಾವಳಿಯನ್ನು ಸಂಭ್ರಮ ಸಡಗರದಿಂದ ಆಚರಿಸಲಾಗುತ್ತಿದ್ದು, ಉತ್ತರ ಭಾರತದ ಭಾಗದಲ್ಲಿ ದೀಪಾವಳಿ ಹಬ್ಬವನ್ನು ಜೋರಾಗಿ ಆಚರಿಸಲಾಗುತ್ತದೆ. ಇನ್ನೂ ದೆಹಲಿಯಲ್ಲಿ ಸರ್ಕಾರ ಪಟಾಕಿ ಹೊಡೆಯದಂತೆ ನಿಷೇಧ ಹೇರಿರುವ ಕ್ರಮವನ್ನು ಸಮರ್ಥಿಸಿಕೊಂಡಿರುವ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Arvind Kejriwal) ಮಾಲಿನ್ಯದಿಂದ ಜನರನ್ನು ರಕ್ಷಿಸಲು ಇದು ಅವಶ್ಯಕ ಎಂದು ಹೇಳಿದ್ದಾರೆ.
ನವದೆಹಲಿಯಲ್ಲಿ ಈ ಕುರಿತು ಮಾತನಾಡಿದ ದೆಹಲಿ ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್ (Arvind Kejriwal), ದೆಹಲಿಯಲ್ಲಿ ಉಂಟಾಗುತ್ತಿರುವ ಮಾಲಿನ್ಯವನ್ನು ಪರಿಗಣಿಸಿ ಪಟಾಕಿ ಬದಲು ದೀಪವನ್ನು ಬೆಳಗಿಸುವಂತೆ ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟ್ ಈಗಾಗಲೇ ಜನರಿಗೆ ತಿಳಿಸಿದೆ. ಬೆಳಕಿನ ಹಬ್ಬವಾದ ದೀಪಾವಳಿಯನ್ನು ನಾವು ಪಟಾಕಿ ಸಿಡಿಸುವ ಬದಲು ಜ್ಯೋತಿ ಬೆಳಗಿಸುವ ಮೂಲಕ ಅರ್ಥಪೂರ್ಣವಾಗಿ ಆಚರಿಸೋಣ.
ನಾವು ಪಟಾಕಿ ಸಿಡಿಸುವುದನ್ನು ನಿಷೇಧಿಸುವ ಮೂಲಕ ನಾವು ಯಾರಿಗೋ ಸಹಕಾರ ಮಾಡುತ್ತಿದ್ಧೇವೆ ಎಂದು ಹೇಳಲಾಗುತ್ತಿದೆ. ಆದರೆ, ನಾವು ಯಾರ ಪರವಾಗಿಯೂ ಇಲ್ಲ. ನಮ್ಮೆಲ್ಲರ ಪರವಾಗಿಯೇ ಇದನ್ನು ಮಾಡಿದ್ದೇವೆ. ಕೊನೆಯದಾಗಿ ಪಟಾಕಿಯಿಂದ ಉಂಟಾಗುವ ಮಾಲಿನ್ಯದಿಂದ ನಮ್ಮ ಮಕ್ಕಳು ತೊಂದರೆ ಅನುಭವಿಸಲಿದ್ದಾರೆ.
ಇದರಲ್ಲಿ ಹಿಂದೂ-ಮುಸ್ಲಿಂ ಧೋರಣೆಯೇ ಇಲ್ಲ. ಪ್ರತಿಯೊಬ್ಬರೂ ಉಸಿರಾಡುವುದು ಮತ್ತು ಪ್ರಾಣ ಮುಖ್ಯ. ದೀಪಾವಳಿ ಬೆಳಕಿನ ಹಬ್ಬವಾಗಿದ್ದು, ಮಾಲಿನ್ಯಕ್ಕೆ ಕಾರಣವಾಗುವ ಪಟಾಕಿಗಳನ್ನು ಸಿಡಿಸುವ ಬದಲು ದೀಪ ಮತ್ತು ಮೇಣದ ಬತ್ತಿಗಳನ್ನು ಬೆಳಗಿಸುವ ಮೂಲಕ ಹಬ್ಬವನ್ನು ಆಚರಿಸಬೇಕು ಎಂದು ದೆಹಲಿ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Arvind Kejriwal) ಹೇಳಿದ್ದಾರೆ.
ವಾಯು ಮಾಲಿನ್ಯವನ್ನು ನಿಯಂತ್ರಿಸುವ ಉದ್ದೇಶದಿಂದ ರಾಷ್ಟ್ರ ರಾಜಧಾನಿಯಲ್ಲಿ ಪಟಾಕಿಗಳ ಉತ್ಪಾದನೆ, ಮಾರಾಟ ಮತ್ತು ಬಳಕೆಯನ್ನು ನಿಷೇಧಿಸಿ ದೆಹಲಿ ಸರ್ಕಾರ ಆದೇಶ ಹೊರಡಿಸಿದೆ. 2025ರ ಜನವರಿ 1ರವರೆಗೆ ಇದು ಜಾರಿಯಲ್ಲಿರುತ್ತದೆ.