ನವದೆಹಲಿ: ಈಚೆಗೆ ಮುಕ್ತಾಯಗೊಂಡ ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಹೀನಾಯವಾಗಿ ಸೋಲುಂಡಿರುವ ಆಮ್ ಆದ್ಮಿ ಪಕ್ಷವು ಭಾರೀ ಮುಖಭಂಗವನ್ನು ಅನುಭವಿಸಿದೆ, ಆಪ್ ಸೋಲಿಗೆ ಕಾರಣವಾದ ಅಂಶಗಳನ್ನು ನಾಯಕರು ಹುಡುಕಾಡುತ್ತಿರುವ ನಡುವೆಯೇ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಪಂಜಾಬ್ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ ಎಂಬ ವಿಚಾರ ತೀವ್ರ ಚರ್ಚೇಗೀಡಾಗಿತ್ತು. ಇದೀಗ ಅರವಿಂದ್ ಕೇಜ್ರಿವಾಲ್ (Arvind Kejriwal) ಅವರು ರಾಜ್ಯಸಭೆ ಪ್ರವೇಶಿಸಲಿದ್ದಾರೆ ಎಂಬ ಸುದ್ದಿ ಹರಿದಾಡಲು ಶುರುವಾಗಿದ್ದು, ಇದಕ್ಕೆ ಪೂರಕವೆಂಬಂತೆ ಎಎಪಿ ಕೂಡ ನಡೆದುಕೊಂಡಿದೆ.
ಎಎಪಿ ಶಾಸಕ ಗುರುಪ್ರೀತ್ ಗೋಗಿ ಅವರ ಸಾವಿನಿಂದ ತೆರವಾಗಿದ್ದ ಲುಧಿಯಾನ ಪಶ್ಚಿಮ ಕ್ಷೇತ್ರಕ್ಕೆ ಉಪಚುನಾವಣೆ ನಡೆಯಲಿದ್ದು, ಚುನಾವಣೆಗೆ ದಿನಾಂಕ ಘೋಷಣೆಯಾಗುವ ಮುನ್ನವೇ ಆಪ್ ತನ್ನ ಪಕ್ಷದ ರಾಜ್ಯಸಭಾ ಸದಸ್ಯರಾದ ಸಂಜೀವ್ ಅರೋರಾರನ್ನು ತಮ್ಮ ಅಭ್ಯರ್ಥಿ ಎಂದು ಘೋಷಿಸಿದೆ. ಇದೀಗ ಈ ವಿಚಾರ ರಾಜಕೀಯ ಪಡಸಾಲೆಯಲ್ಲಿ ಹೊಸ ಚರ್ಚೆಯನ್ನು ಹುಟ್ಟುಹಾಕಿದ್ದು, ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಸೋತ ಕೇಜ್ರಿವಾಲ್ (Kejriwal) ರಾಜ್ಯಸಭೆ ಪ್ರವೇಶಿಸಲು ಮುಂದಾಗಿರುವ ಕ್ರಮವನ್ನು ವಿರೋಧ ಪಕ್ಷಗಳು ಟೀಕಿಸಿವೆ.
ರಾಜ್ಯಸಭಾ ಸಂಸದ ಸಂಜೀವ್ ಅರೋರಾ ಅವರನ್ನು ಲುಧಿಯಾನ ಪಶ್ಚಿಮ ವಿಧಾನಸಭಾ ಉಪಚುನಾವಣೆಯಲ್ಲಿ ಸ್ಪರ್ಧಿಸಲು ಆಪ್ ನಾಮನಿರ್ದೇಶನ ಮಾಡಿದೆ. ಅರೋರಾ 2022ರಲ್ಲಿ ಪಂಜಾಬ್‌ನಿಂದ ರಾಜ್ಯಸಭೆಗೆ ಆಯ್ಕೆಯಾದರು. ಅಧಿಕಾರಾವಧಿ 2028 ರಲ್ಲಿ ಕೊನೆಗೊಳ್ಳುತ್ತದೆ. ರಾಜ್ಯಸಭೆಯಿಂದ ಚುನಾವಣೆಗೆ ಸ್ಪರ್ಧಿಸಲು ಅವರು ರಾಜೀನಾಮೆ ನೀಡಬೇಕಾಗುತ್ತದೆ. ಅವರು ರಾಜೀನಾಮೆ ನೀಡಿದರೆ, ಅವರ ಖಾಲಿ ರಾಜ್ಯಸಭಾ ಸ್ಥಾನವನ್ನು ಕೇಜ್ರಿವಾಲ್ (Kejriwal) ಅವರಿಗೆ ನೀಡಬಹುದು ಎಂದು ಹೇಳಲಾಗಿದೆ.
ಕೇಜ್ರಿವಾಲ್ ರಾಜ್ಯಸಭೆ ಪ್ರವೇಶದ ಕುರಿತು ಪ್ರತಿಕ್ರಿಯಿಸಿರುವ ಎಎಪಿ, ಕಾಂಗ್ರೆಸ್ ಸೇರಿದಂತೆ ಇತರೆ ವಿರೋಧ ಪಕ್ಷಗಳು ಸುಳ್ಳು ಹೇಳಿಕೆಗಳನ್ನು ನೀಡುತ್ತಿದ್ದು,ಮ ವದಂತಿಗಳಿಗೆ ಯಾರು ಕಿವಿಗೊಡಬೇಡಿ ಎಂದು ಹೇಳಿದೆ. ಒಟ್ಟಿನಲ್ಲಿ ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಸೋಲುಂಡಿರುವ ಅರವಿಂದ್ ಕೇಜ್ರಿವಾಲ್ ಅವರನ್ನು ರಾಜ್ಯಸಭೆಗೆ ಕಳುಹಿಸುವ ಮೂಲಕ, ಸಕ್ರಿಯ ರಾಜಕಾರಣದಲ್ಲಿ ಅವರ ಪ್ರಸ್ತುತತೆಯನ್ನು ಜೀವಂತವಾಗಿಡುವುದು ಆಪ್‌ನ ಉದ್ದೇಶವಾಗಿದೆ. ಆದರೆ ಈ ಕುರಿತು ಪಕ್ಷವು ಅಂತಿಮ ನಿರ್ಧಾರ ಕೈಗೊಳ್ಳಬೇಕಿದೆ.