ನ್ಯೂಸ್

ಅಬಕಾರಿ ನೀತಿ ಪ್ರಕರಣದಲ್ಲಿ ದೆಹಲಿ ಸಿಎಂಗೆ​ ತಪ್ಪದ ಸಂಕಷ್ಟ: ಅರವಿಂದ್ ಕೇಜ್ರಿವಾಲ್​ ಬಂಧಿಸಿದ ಸಿಬಿಐ

ನವದೆಹಲಿ: ಅಕ್ರಮ ಮದ್ಯ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಸಿಬಿಐ ಬುಧವಾರ (ಜೂನ್​ 26) ಬಂಧಿಸಿದೆ. ನ್ಯಾಯಾಲಯದಲ್ಲಿ ಎಎಪಿ ಮುಖ್ಯಸ್ಥರನ್ನು ಪರೀಕ್ಷಿಸಲು ಸಿಬಿಐಗೆ ರೋಸ್​ ಅವೆನ್ಯೂ ಕೋರ್ಟ್​ ಅನುಮತಿ ನೀಡಿದ ಬಳಿಕ ಬಂಧನವಾಗಿದೆ.

ಸಿಬಿಐ ಬಂಧನದ ನಂತರ, ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾಮೀನಿಗೆ ತಡೆ ನೀಡಿ ದೆಹಲಿ ಹೈಕೋರ್ಟ್ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಿದ್ದ ಅರ್ಜಿಯನ್ನು ಕೇಜ್ರಿವಾಲ್​ ಹಿಂಪಡೆದಿದ್ದಾರೆ.

ಅಕ್ರಮ ಮದ್ಯ ನೀತಿ ಹಗರಣದಿಂದ ಉಂಟಾದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಕೇಜ್ರಿವಾಲ್ ಅವರನ್ನು ಕಳೆದ ಮಾರ್ಚ್ 21ರಂದು ಇಡಿ ಬಂಧಿಸಿತು. ಕೇಜ್ರಿವಾಲ್​ ಅವರು ಪ್ರಸ್ತುತ ತಿಹಾರ್ ಜೈಲಿನಲ್ಲಿದ್ದಾರೆ. ಇದರ ನಡುವೆ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಕೇಜ್ರಿವಾಲ್​ಗೆ ವಿಚಾರಣಾ ನ್ಯಾಯಾಲಯ ಜಾಮೀನು ಸಹ ನೀಡಿತ್ತು. ಆದರೆ, ಆ ಜಾಮೀನಿಗೆ ತಡೆ ನೀಡುವಂತೆ ಕೋರಿ ಜಾರಿ ನಿರ್ದೇಶನಾಲಯ ಸಲ್ಲಿಸಿದ್ದ ಮನವಿಗೆ ದೆಹಲಿ ಹೈಕೋರ್ಟ್ ಬುಧವಾರ ಸಮ್ಮತಿ ಸೂಚಿಸಿತ್ತು. ಬಳಿಕ ಆಮ್​ ಆದ್ಮಿ ಪಕ್ಷ ಸುಪ್ರೀಂಕೋರ್ಟ್​ಗೆ ಅರ್ಜಿ ಸಲ್ಲಿಸಿತ್ತು. ಇಂದು ವಿಚಾರಣೆಗೂ ಮುನ್ನವೇ ಕೇಜ್ರಿವಾಲ್​ ಅವರನ್ನು ಸಿಬಿಐ ಬಂಧನ ಮಾಡಿದೆ.

ಕೇಜ್ರಿವಾಲ್ ಅವರನ್ನು ತಮ್ಮ ಕಸ್ಟಡಿಗೆ ನೀಡಬೇಕೆಂದು ಸಿಬಿಐ ರೂಸ್ ಅವೆನ್ಯೂ ನ್ಯಾಯಾಲಯದ ಮುಂದೆ ಕೋರಿತ್ತು. (ಏಜೆನ್ಸೀಸ್​)