ಗುರುವಾರ ರಾಮ ಮಂದಿರದ ಪ್ರವೇಶದ್ವಾರದಲ್ಲಿ ಗಜ, ಸಿಂಹ, ಹನುಮಾನ್ ಮತ್ತು ಗರುಡನ ಪ್ರತಿಮೆಗಳನ್ನು ಸ್ಥಾಪಿಸಲಾಯಿತು. 
ನ್ಯೂಸ್

ರಾಮ ಮಂದಿರಕ್ಕೆ ಕೃತಕ ಬುದ್ಧಿಮತ್ತೆ ಭದ್ರತೆ; ಅನುಮಾನಾಸ್ಪದ ಚಟುವಟಿಕೆ ಮೇಲೆ ಹದ್ದಿನ ಕಣ್ಣು

Webdesk - Manjunatha B

ನವದೆಹಲಿ: ರಾಮ ಮಂದಿರ ಉದ್ಘಾಟನೆ ನಂತರ ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಯಾತ್ರಿಕರ ಸಂಖ್ಯೆ ಗಣನೀಯವಾಗಿ ಹೆಚ್ಚಾಗುವ ನಿರೀಕ್ಷೆಯಿರುವುದರಿಂದ ಭದ್ರತಾ ಉದ್ದೇಶಗಳಿಗಾಗಿ ಕೃತಕ ಬುದ್ಧಿಮತ್ತೆ (ಎಐ) ಕಣ್ಗಾವಲು ವ್ಯವಸ್ಥೆ ಸ್ಥಾಪಿಸಲು ಅಧಿಕಾರಿಗಳು ಮುಂದಾಗಿದ್ದಾರೆ.

ಎಐ ಕಣ್ಗಾವಲು ಪ್ರಾಯೋಗಿಕ ಯೋಜನೆಯನ್ನು ಸಧ್ಯದಲ್ಲೇ ಅಯೋಧ್ಯೆಯಲ್ಲಿ ಪ್ರಾರಂಭಿಸುವ ಸಾಧ್ಯತೆಯಿದೆ. ಫಲಿತಾಂಶ ಆಧರಿಸಿ ಭದ್ರತೆ ಮತ್ತು ಕಣ್ಗಾವಲು ಡ್ರಿಲ್​ನ ಅಂಗವಾಗಿ ಇದನ್ನು ಜಾರಿಗೆ ತರಲಾಗುವುದು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆಗಾಗ್ಗೆ ಸ್ಥಳಕ್ಕೆ ಭೇಟಿ ನೀಡುವವರು, ಜನರ ಸಾಮಾನ್ಯ ಪ್ರವೃತ್ತಿ ಅಥವಾ ದೇವಾಲಯದ ಆವರಣದಲ್ಲಿ ಕಂಡುಬರುವ ಯಾವುದೇ ಅನá-ಮಾನಾಸ್ಪದ ಚಟುವಟಿಕೆಯನ್ನು ಪತ್ತೆಹಚ್ಚಲು ಎಐ ಕಣ್ಗಾವಲು ಸಹಾಯ ಮಾಡುತ್ತದೆ. ಸುರಕ್ಷತಾ ಎಚ್ಚರಿಕೆ ಬಗ್ಗೆ ಸ್ವಯಂಚಾಲಿತವಾಗಿ ನಿಗಾ ಇಡುತ್ತದೆ. ಭದ್ರತಾ ಏಜೆನ್ಸಿಗಳಿಗೂ ಇದರಿಂದ ಅನುಕೂಲವಾಗುತ್ತದೆ. ಆದರೆ ಮಂದಿರ ಉದ್ಘಾಟನೆ ಕಾರ್ಯಕ್ರಮಕ್ಕೆ ಈ ಯೋಜನೆ ಬಳಕೆ ಮಾಡಲಾಗುತ್ತದೆಯೇ ಎಂಬ ಬಗ್ಗೆ ಖಚಿತತೆ ಇಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.

ಹೇಗಿರಲಿದೆ ಭದ್ರತೆ?: ಎಐ ಕಣ್ಗಾವಲು ಜೊತೆಗೆ 11,000 ರಾಜ್ಯ ಪೊಲೀಸರು ಮತ್ತು ಅರೆಸೇನಾ ಪಡೆಗಳನ್ನು ನಿಯೋಜಿಸುವ ಸಾಧ್ಯತೆಯಿದೆ. 26 ಕಂಪನಿಗಳ ಅರೆಸೇನಾಪಡೆ, 8,000 ಸಿವಿಲ್ ಪೊಲೀಸ್ ಸಿಬ್ಬಂದಿ ನಿಯೋಜನೆಗೆ ನಿರ್ಧಾರ ಮಾಡಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಉತ್ತರ ಪ್ರದೇಶದ ಭಯೋತ್ಪಾದನಾ ನಿಗ್ರಹ ಪಡೆ (ಎಟಿಎಸ್), ವಿಶೇಷ ಕಾರ್ಯಪಡೆ ತಂಡಗಳು ಮತ್ತು ರಾಷ್ಟ್ರೀಯ ಭದ್ರತಾ ಗಾರ್ಡ್ ಇನ್ನಿತರ ಕೇಂದ್ರೀಯ ಏಜೆನ್ಸಿಗಳನ್ನು ಸಹ ಭದ್ರತಾ ಯೋಜನೆಯ ಭಾಗವಾಗಿರಲಿವೆ. ಪ್ರತಿಯೊಂದು ಚಲನವಲನದ ಮೇಲೆ ನಿಗಾ ಇಡಲು ಸ್ಥಳೀಯ ಗುಪ್ತಚರ ಘಟಕದ ಸುಮಾರು 38 ಅಧಿಕಾರಿ ಗಳನ್ನು ನಿಯೋಜಿಸಲಾಗಿದೆ ಎನ್ನಲಾಗಿದೆ. ಟ್ಯಾಕ್ಸಿ ಚಾಲಕರು, ಇ-ರಿಕ್ಷಾ ಚಾಲಕರು, ಹೋಟೆಲ್ ಸಿಬ್ಬಂದಿ, ಭಿಕ್ಷುಕರು, ಅರ್ಚಕರು, ರಾಮ ಮಂದಿರದ ಸುತ್ತಮುತ್ತಲಿನ ನಿವಾಸಿಗಳಿಂದ ಹಿಡಿದು ಪ್ರತಿಯೊಬ್ಬ ವ್ಯಕ್ತಿಯ ಪರಿಶೀಲನೆ ಮಾಡಲಾಗುತ್ತಿದೆ. ಕಾರ್ಯಕ್ರಮದ ಅತಿಥಿಗಳು, ಸಿಬ್ಬಂದಿಯನ್ನು ಪರಿಶೀಲಿಸಲಾಗುತ್ತಿದೆ.

ಪರ್ಕಳದ ದೂರದರ್ಶಕ: ಅಯೋಧ್ಯೆ ರಾಮ ಮಂದಿರ ಭದ್ರತೆಗಾಗಿ ಉತ್ತರ ಪ್ರದೇಶ ಪೊಲೀಸರು ಪರ್ಕಳದಲ್ಲಿ ತಯಾರಾದ ಅತ್ಯುತ್ತಮ ಗುಣಮಟ್ಟದ 25 ದೂರದರ್ಶಕಗಳನ್ನು ಖರೀದಿಸಿದ್ದಾರೆ. ಮಣಿಪಾಲದ ಎಂಐಟಿಯಲ್ಲಿ ಇಂಜಿನಿಯರ್ ಆಗಿರುವ ಪರ್ಕಳದ ನಿವಾಸಿ ಆರ್. ಮನೋಹರ್ ನವೀನ ಬಗೆಯ ದೂರದರ್ಶಕಗಳನ್ನು ಆವಿಷ್ಕರಿಸಿದ್ದು, ಇದಕ್ಕಾಗಿ ಪೇಟೆಂಟ್ ಕೂಡ ಹೊಂದಿದ್ದಾರೆ. ಈಗಾಗಲೇ ಈ ಟೆಲಿಸ್ಕೋಪ್​ಗಳನ್ನು ಸೇನೆ ಹಾಗೂ ಡಿಆರ್​ಡಿಒ ಬಳಸುತ್ತಿದ್ದು, ಪ್ರಸ್ತುತ ರಾಮ ಮಂದಿರದ ಭದ್ರತೆಗೆ ನಿಯೋಜಿತರಾಗುವ ಭದ್ರತಾ ಸಿಬ್ಬಂದಿಗೆ ನೀಡಲು ತಿಂಗಳ ಹಿಂದೆ ಉತ್ತರ ಪ್ರದೇಶ ಗೃಹ ಇಲಾಖೆ 25 ದೂರದರ್ಶಕಗಳಿಗೆ ಬೇಡಿಕೆ ಸಲ್ಲಿಸಿದ್ದು, ನಾಲ್ಕು ದಿನದ ಹಿಂದೆಯೇ ಎಲ್ಲವನ್ನೂ ಅಯೋಧ್ಯೆಗೆ ಕಳುಹಿಸಿಕೊಡಲಾಗಿದೆ.

ದೂರದರ್ಶಕ ವೈಶಿಷ್ಟ್ಯ 1.5 ಅಡಿ ಉದ್ದ ಹಾಗೂ ಒಂದೂಕಾಲು ಕೆಜಿ ತೂಕದ ಟೆಲಿಸ್ಕೋಪ್ ಅನ್ನು ಬ್ಯಾಗ್​ನಲ್ಲಿ ತೆಗೆದುಕೊಂಡು ಹೋಗಬಹುದು. ಇದರಲ್ಲಿ 3 ಕಿ.ಮೀ ವರೆಗಿನ ಚಿತ್ರಣ ಸ್ಪಷ್ಟವಾಗಿ ಗೋಚರಿಸುತ್ತದೆ. ಇಷ್ಟು ಉತ್ತಮ ಗುಣಮಟ್ಟದ ದೂರದರ್ಶಕ ಇತರ ಕಂಪನಿಗಳಿಗೆ ಹೋಲಿಸಿದರೆ ಸ್ವಲ್ಪ ಅಗ್ಗದ ದರದಲ್ಲಿ ಲಭ್ಯವಾಗುತ್ತಿದ್ದು, 10 ಸಾವಿರ ರೂ. ಬೆಲೆ ನಿಗದಿ ಮಾಡಲಾಗಿದೆ.

ಎಐ ಭದ್ರತಾ ವ್ಯವಸ್ಥೆಯ ಕೆಲಸವೇನು?: ಹೆಚ್ಚಿನ ಜನಸಂದಣಿಯನ್ನು ಸ್ಕಾ್ಯನ್ ಮಾಡುವ, ಅಸಾಮಾನ್ಯ ನಡವಳಿಕೆ ಗಳನ್ನು ಪತ್ತೆಹಚ್ಚುವ, ವಿಶಾಲವಾದ ಡೇಟಾಗಳನ್ನು ವಿಶ್ಲೇಷಿಸುವ, ಸಂಭಾವ್ಯ ಬೆದರಿಕೆ ಗಳನ್ನು ತಕ್ಷಣವೇ ಗುರುತಿಸುವ, ವೈಪರೀತ್ಯಗಳನ್ನು ಪತ್ತೆಹಚ್ಚುವ ಮತ್ತು ಸುಧಾರಿತ ಕಣ್ಗಾವಲು ಎಚ್ಚರಿಕೆಗಳನ್ನು ರವಾನಿಸುವ ಸಾಮರ್ಥ್ಯವನ್ನು ಈ ವ್ಯವಸ್ಥೆ ಹೊಂದಿದೆ.

22ರಂದೇ ಬಾಲರಾಮನ ದರ್ಶನ: ಇಲ್ಲಿನ ರಾಮ ಮಂದಿರದ ಗರ್ಭಗುಡಿಯಲ್ಲಿ ಪ್ರತಿಷ್ಠಾಪಿಸುವ ಬಾಲರಾಮನ ಮೂರ್ತಿ ಯಾವುದೆಂಬುದು ಜನವರಿ 22ರಂದು ಮಂದಿರದ ಪವಿತ್ರೀಕರಣ ಕಾರ್ಯ ನಡೆಯುವ ಮಧ್ಯಾಹ್ನ 12.20ಕ್ಕಷ್ಟೇ ಗೊತ್ತಾಗಲಿದೆ ಎಂದು ‘ಪ್ರಾಣ ಪ್ರತಿಷ್ಠೆ’ ಸಮಾರಂಭಕ್ಕೆ ಸಂಬಂಧಿಸಿದ ಅಧಿಕಾರಿಗಳು ತಿಳಿಸಿದ್ದಾರೆ. ಕೆತ್ತಲಾಗಿರುವ ಮೂರು ಮೂರ್ತಿಗಳಲ್ಲಿ ಒಂದನ್ನು ಗರ್ಭಗುಡಿಯಲ್ಲಿ ಪ್ರತಿಷ್ಠಾಪಿಸಲಾಗುತ್ತದೆ. ಈ ಮೂರೂ ವಿಗ್ರಹಗಳ ಭಾವಚಿತ್ರ ಅಥವಾ ವಿಡಿಯೋಗ್ರಹಣವನ್ನು ನಿಷೇಧಿಸಿರುವುದರಿಂದ ಆಯ್ಕೆಯಾದ ವಿಗ್ರಹದ ಅಧಿಕೃತ ಪ್ರಕಟಣೆಯಿಂದ ಹೆಚ್ಚಿನ ವ್ಯತ್ಯಾಸವೇನೂ ಆಗುವುದಿಲ್ಲ. ಮೂರ್ತಿಯನ್ನು ಕೆತ್ತಲು ಬಿಳಿ ಅಮೃತಶಿಲೆಯನ್ನು ಬಳಸಲಾಗಿದೆಯೇ ಅಥವಾ ಕಪ್ಪು ಗ್ರಾನೈಟ್ ಬಳಸಲಾಗಿದೆಯೇ ಎನ್ನುವುದಷ್ಟೇ ಅಧಿಕೃತ ಪ್ರಕಟಣೆಯಿಂದ ಗೊತ್ತಾಗುತ್ತದೆ. ಜನವರಿ 17ರ ಪ್ರಸ್ತಾಪಿತ ನಗರ ಯಾತ್ರೆಯ ವಿವರಗಳನ್ನು ಇನ್ನೂ ಅಂತಿಮಗೊಳಿಸಲಾಗಿಲ್ಲ ಎಂದೂ ಮೂಲಗಳು ಹೇಳಿವೆ. ಜನಜಂಗುಳಿಯನ್ನು ತಡೆಯುವುದಕ್ಕಾಗಿ ಮುಂಜಾನೆಯೇ ನಗರ ಯಾತ್ರೆಯನ್ನು ನಡೆಸುವುದು ಉತ್ತಮವೆಂಬುದು ರಾಮ ಮಂದಿರ ಟ್ರಸ್ಟ್ ಸದಸ್ಯರ ಅಭಿಪ್ರಾಯವಾಗಿದೆ ಎಂದು ಮೂಲಗಳು ಹೇಳಿವೆ.

ಬಾಂಬ್ ಬೆದರಿಕೆ, ಇಬ್ಬರ ಬಂಧನ: ರಾಮ ಮಂದಿರಕ್ಕೆ ಬಾಂಬ್ ಬೆದರಿಕೆಯೊಡ್ಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶ ವಿಶೇಷ ಕಾರ್ಯಪಡೆ (ಎಸ್​ಟಿಎಫ್) ಬುಧವಾರ ಇಬ್ಬರನ್ನು ಬಂಧಿಸಿದೆ. ಬಂಧಿತ ಆರೋಪಿಗಳಾದ ತಹರ್ ಸಿಂಗ್ ಮತ್ತು ಓಂ ಪ್ರಕಾಶ್ ಮಿಶ್ರಾ ಗೊಂಡಾ ಮೂಲದವರು.ಇವರು ಸಾಮಾಜಿಕ ಜಾಲತಾಣದಲ್ಲಿ ಸಿಎಂ ಆದಿತ್ಯನಾಥ್, ಎಸ್​ಟಿಎಫ್ ಮುಖ್ಯಸ್ಥ ಅಮಿತಾಬ್ ಯಶ್ ಮತ್ತು ಅಯೋಧ್ಯೆಯ ರಾಮಮಂದಿರಕ್ಕೆ ಬಾಂಬ್ ಬೆದರಿಕೆ ಹಾಕಿದ್ದರು. ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್​ಐ ಅಧಿಕಾರಿ ಜುಬೇರ್ ಖಾನ್ ಹೆಸರಲ್ಲಿ ಇ ಮೇಲ್ ಕೂಡ ಕಳಿಸಲಾಗಿತ್ತು ಎಂದು ಪೊಲೀಸರು ಹೇಳಿದ್ದಾರೆ.

ಮಂದಿರದ ವೈಶಿಷ್ಟ್ಯಗಳು: ರಾಮ ಮಂದಿರ ಉದ್ಘಾಟನೆ ದಿನಾಂಕ ಹತ್ತಿರ ವಾಗುತ್ತಿದ್ದಂತೆ, ದೇವಾಲಯದ ಕುರಿತ ಹಲವು ಮಾಹಿತಿಗಳನ್ನು ಟ್ರಸ್ಟ್ ಹಂಚಿಕೊಂಡಿದೆ. ಗುರುವಾರ ಟ್ವೀಟ್ ಮೂಲಕ ಹಲವು ಮಾಹಿತಿಗಳನ್ನು ನೀಡಿದೆ.

  • ಸಾಂಪ್ರದಾಯಿಕ ನಾಗರ ಶೈಲಿಯಲ್ಲಿ ನಿರ್ಮಾಣ
  • 380 ಅಡಿ ಉದ್ದ (ಪೂರ್ವ-ಪಶ್ಚಿಮ), 250 ಅಡಿ ಅಗಲ ಮತ್ತು 161 ಅಡಿ ಎತ್ತರವನ್ನು ಹೊಂದಿದೆ.
  • ಮೂರು ಅಂತಸ್ತಿನದ್ದಾಗಿದ್ದು, ಪ್ರತಿ ಮಹಡಿಯು 20 ಅಡಿ ಎತ್ತರವಿದೆ. ಇದು ಒಟ್ಟು 392 ಕಂಬಗಳು ಮತ್ತು 44 ಬಾಗಿಲುಗಳನ್ನು ಹೊಂದಿದೆ.
  • ಮುಖ್ಯ ಗರ್ಭಗುಡಿಯಲ್ಲಿ ಭಗವಾನ್ ಶ್ರೀರಾಮನ ಬಾಲ್ಯದ ರೂಪ (ಬಾಲರಾಮ) ವಿಗ್ರಹ, ಮೊದಲ ಮಹಡಿಯಲ್ಲಿ ಶ್ರೀರಾಮ ದರ್ಬಾರ್ ಇರುತ್ತದೆ.
  • ನೃತ್ಯ ಮಂಟಪ, ರಂಗ ಮಂಟಪ, ಸಭಾ ಮಂಟಪ, ಪ್ರಾರ್ಥನೆ ಮತ್ತು ಕೀರ್ತನ ಮಂಟಪ ಎಂಬ ಐದು ಮಂಟಪಗಳು (ಹಾಲ್) ಇವೆ.
  • ದೇವತೆಗಳು, ದೇವರು ಮತ್ತು ದೇವತೆಗಳ ಪ್ರತಿಮೆಗಳನ್ನು ಕಂಬ ಮತ್ತು ಗೋಡೆಗಳ ಮೇಲೆ ಕೆತ್ತಲಾಗಿದೆ.
  • ಪೂರ್ವದಿಂದ ಸಿಂಹದ್ವಾರದ ಮೂಲಕ ಮಂದಿರಕ್ಕೆ ಪ್ರವೇಶ. 32 ಮೆಟ್ಟಿಲುಗಳು ಇರಲಿವೆ.
  • ಅಂಗವಿಕಲರು ಮತ್ತು ವೃದ್ಧರ ಅನುಕೂಲಕ್ಕಾಗಿ ಇಳಿಜಾರು ಮತ್ತು ಲಿಫ್ಟ್ ಇವೆ.
  • ಆವರಣದ ನಾಲ್ಕು ಮೂಲೆಗಳಲ್ಲಿ ಸೂರ್ಯ ದೇವ, ದೇವಿ ಭಗವತಿ, ಗಣೇಶ ಮತ್ತು ಶಿವನ ಮಂದಿರ ಇದೆ.
  • ಉತ್ತರದಲ್ಲಿ ಅನ್ನಪೂರ್ಣ ಮಂದಿರ, ದಕ್ಷಿಣದಲ್ಲಿ ಹನುಮಂತನ ಮಂದಿರವಿದೆ.
  • ಮಂದಿರ ನಿರ್ಮಾಣ ವೇಳೆ ಎಲ್ಲಿಯೂ ಕಬ್ಬಿಣ ಬಳಸುವುದಿಲ್ಲ
  • ಅಗ್ನಿ ಸುರಕ್ಷತೆಗಾಗಿ ನೀರು ಸರಬರಾಜು ಮತ್ತು ಸ್ವತಂತ್ರ ವಿದ್ಯುತ್ ಕೇಂದ್ರವನ್ನು ಹೊಂದಿದೆ.
  • ಯಾತ್ರಾರ್ಥಿಗಳಿಗೆ ವೈದ್ಯಕೀಯ ಸೌಲಭ್ಯಗಳು, ಲಾಕರ್ ಸೌಲಭ್ಯ ಇದೆ
  • ಸ್ನಾನದ ಪ್ರದೇಶ, ವಾಶ್​ರೂಮ್ಳು, ವಾಶ್​ಬಾಸಿನ್, ತೆರೆದ ಟ್ಯಾಪ್​ಗಳು ಇತ್ಯಾದಿಗಳೊಂದಿಗೆ ಪ್ರತ್ಯೇಕ ಬ್ಲಾಕ್ ನಿರ್ಮಾಣ