ನ್ಯೂಸ್

ಪ್ರವರ್ಧಮಾನಕ್ಕೆ ಬರುತ್ತಿರುವ ಎಐ: ಉದ್ಯೋಗ ನಷ್ಟದ ಭೀತಿ ಬೇಡ, ಲಕ್ಷಾಂತರ ಅವಕಾಶ ಸೃಷ್ಟಿ ಸಾಧ್ಯತೆ | Artificial intelligence

ರಮೇಶ್​ ಕುಮಾರ್​​ ಬಿ ಎಡಮೋಳೆ

ಕೃತಕ ಬುದ್ಧಿಮತ್ತೆ ( Artificial intelligence ) ಯು ಗ್ರಾಮೀಣ ಪ್ರದೇಶಗಳಿಗೂ ಸಂಪನ್ಮೂಲಗಳನ್ನು ಲಭ್ಯವಾಗಿಸುವ ಮೂಲಕ ಒಂದು ಕಾಲದಲ್ಲಿ ತಾವು ಪಡೆಯಲು ಸಾಧ್ಯವಿರದಿದ್ದ ಶಿಕ್ಷಣವನ್ನು ಪಡೆಯಲು ಅಲ್ಲಿನ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಟ್ಟಿದೆ. ಇದು ಗ್ರಾಮೀಣ ಸಮುದಾಯಗಳ ಅವಕಾಶಗಳನ್ನು ದೊಡ್ಡ ಮಟ್ಟದಲ್ಲಿ ಸೀಮಿತಗೊಳಿಸುತ್ತದೆ. ಆದರೆ, ಇದೀಗ ಪ್ರವರ್ಧಮಾನಕ್ಕೆ ಬರುತ್ತಿರುವ ಕೃತಕ ಬುದ್ಧಿಮತ್ತೆಯು (ಆರ್ಟಿಫಿಷಿಯಲ್ ಇಂಟೆಲಿಜೆನ್ಸ್- ಎಐ) ಈ ಅಂತರಗಳನ್ನು ನೀಗುವ ಪ್ರಬಲ ಸಾಧನವಾಗಿ ಹೊರಹೊಮ್ಮಿದೆ. ಅದರಲ್ಲೂ ಶಿಕ್ಷಣ ಕ್ಷೇತ್ರದಲ್ಲಿ ಇದು ಹೆಚ್ಚಿನ ಪರಿಣಾಮ ಉಂಟುಮಾಡುವ ನಿರೀಕ್ಷೆ ಇದೆ.

ಕನಿಷ್ಠ ಪ್ರಮಾಣದ ಉದ್ಯೋಗ ನಷ್ಟ

ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಒಂದಷ್ಟು ಉದ್ಯೋಗ ನಷ್ಟಕ್ಕೂ ಎಡೆಮಾಡಿಕೊಡಬಹುದು. ವಿಶೇಷವಾಗಿ, ಪುನರಾವರ್ತಿತ ಯಾಂತ್ರಿಕ ಕೆಲಸಗಳು ಹಾಗೂ ಕಡಿಮೆ ಮಟ್ಟದ ಕೌಶಲಗಳಿಂದ ಕೂಡಿದ ಕೆಲಸಗಳನ್ನು ನಿರ್ವಹಿಸಲು ಇದು ಬಳಕೆಯಾಗಬಹುದು. ಎಐ ತಂದುಕೊಡುವ ಲಾಭವನ್ನು ಭಾರತ ದೇಶವು ಸಂಪೂರ್ಣವಾಗಿ ಬಳಸಿಕೊಳ್ಳಬೇಕೆಂದರೆ ತನ್ನ ಉದ್ಯೋಗ ಪಡೆಯ ಕೌಶಲಗಳನ್ನು ಉನ್ನತೀಕರಿಸಲು ಗಮನ ಕೇಂದ್ರೀಕರಿಸಬೇಕಾಗುತ್ತದೆ. ಹೀಗೆ ಮಾಡುವ ಮೂಲಕ ಸ್ವಯಂಚಾಲನೆಯ ಋಣಾತ್ಮಕ ಪರಿಣಾಮಗಳನ್ನು ಕನಿಷ್ಠಗೊಳಿಸುವ ಜೊತೆಗೆ ಉದ್ಯೋಗಿಗಳ ಎಐ ಸೃಷ್ಟಿಸುವ ಹೊಸ ಉದ್ಯೋಗಗಳಿಗೆ ಒಗ್ಗಿಕೊಳ್ಳುವುದನ್ನು ಖಾತರಿಗೊಳಿಸಬಹುದು.

ಭಾರತದಲ್ಲಿ ಸಾಮಾಜಿಕ ಮತ್ತು ಆರ್ಥಿಕ ಅಂತರಗಳು ನಿಚ್ಚಳವಾಗಿ ಎದ್ದುಕಾಣುವಷ್ಟಿವೆ. ಅದರಲ್ಲೂ, ಗ್ರಾಮೀಣ ಹಾಗೂ ನಗರವಾಸಿಗಳಲ್ಲಿ ಇದು ಇನ್ನಷ್ಟು ಹೆಚ್ಚು. ದೇಶದ ಶೇಕಡ 65ರಷ್ಟು ಜನಸಂಖ್ಯೆಯಿರುವ ಗ್ರಾಮೀಣ ಪ್ರದೇಶಗಳು ಪ್ರಮುಖ ಸೇವೆಗಳಾದ ಶಿಕ್ಷಣ, ಆರೋಗ್ಯ ಮತ್ತು ತಂತ್ರಜ್ಞಾನದ ಅನುಕೂಲಗಳನ್ನು ಪಡೆಯುವಲ್ಲಿ ಗಮನಾರ್ಹ ಸವಾಲುಗಳನ್ನು ಎದುರಿಸುತ್ತಿವೆ. 2021ರ ಅಂಕಿಅಂಶದ ಪ್ರಕಾರ, ಗ್ರಾಮೀಣ ಭಾರತದಲ್ಲಿ ಇಂಟರ್​ನೆಟ್ ಪ್ರಸರಣ ವ್ಯಾಪ್ತಿಯು ಶೇಕಡ 37ರಷ್ಟಿದ್ದರೆ ನಗರ ಪ್ರದೇಶಗಳಲ್ಲಿ ಇದು ಶೇಕಡ 69ರಷ್ಟು ಇತ್ತು. ಈ ಸೌಲಭ್ಯದ ಕೊರತೆಯ ಜೊತೆಗೆ ಆದಾಯದಲ್ಲಿ ಕೂಡ ವ್ಯತ್ಯಾಸ ಕಂಡುಬರುತ್ತದೆ. ನಗರ ನಿವಾಸಿಗಳ ವಾರ್ಷಿಕ ತಲಾವಾರು ಆದಾಯವು 2,800 ಡಾಲರ್​ಗಳಿದ್ದರೆ, ಗ್ರಾಮೀಣ ಭಾಗದಲ್ಲಿ ಇದು ಕೇವಲ 890 ಡಾಲರ್ ಗಳಷ್ಟಿದೆ. ಇದು ಗ್ರಾಮೀಣ ಸಮುದಾಯಗಳ ಅವಕಾಶಗಳನ್ನು ದೊಡ್ಡ ಮಟ್ಟದಲ್ಲಿ ಸೀಮಿತಗೊಳಿಸುತ್ತದೆ. ಆದರೆ, ಇದೀಗ ಪ್ರವರ್ಧಮಾನಕ್ಕೆ ಬರುತ್ತಿರುವ ಕೃತಕ ಬುದ್ಧಿಮತ್ತೆಯು (ಆರ್ಟಿಫಿಷಿಯಲ್ ಇಂಟೆಲಿಜೆನ್ಸ್- ಎಐ) ಈ ಅಂತರಗಳನ್ನು ನೀಗುವ ಪ್ರಬಲ ಸಾಧನವಾಗಿ ಹೊರಹೊಮ್ಮಿದೆ. ಅದರಲ್ಲೂ ಶಿಕ್ಷಣ ಕ್ಷೇತ್ರದಲ್ಲಿ ಇದು ಹೆಚ್ಚಿನ ಪರಿಣಾಮ ಉಂಟುಮಾಡುವ ನಿರೀಕ್ಷೆ ಇದೆ. ಬಹಳ ಹಿಂದಿನಿಂದಲೂ ಕಲಿಕೆಯ ಅವಕಾಶಗಳಿಂದ ವಂಚಿತರಾದ ಗ್ರಾಮೀಣ ವಿದ್ಯಾರ್ಥಿಗಳ ಸಮಾನ ಮಟ್ಟದ ಕಲಿಕೆಗೆ ಎಐ ಸಹಕಾರಿಯಾಗುವ ಸಾಧ್ಯತೆಗಳಿವೆ. ನಮ್ಮಲ್ಲಿ ಡಿಜಿಟಲ್ ಕಂದಕ ಎಷ್ಟಿದೆ ಎಂಬುದನ್ನು ಕೋವಿಡ್-19 ಸೋಂಕಿನ ಸಂದರ್ಭವು ನಮಗೆ ಚೆನ್ನಾಗಿ ಮನದಟ್ಟು ಮಾಡಿಕೊಟ್ಟಿತು. ಆ ಸಂದರ್ಭದಲ್ಲಿ ಕೇವಲ ಶೇಕಡ 17.3ರಷ್ಟು ಗ್ರಾಮೀಣ ವಿದ್ಯಾರ್ಥಿಗಳು ಆನ್​ಲೈನ್ ಶಿಕ್ಷಣದ ಸೌಲಭ್ಯ ಪಡೆಯಬಲ್ಲವರಾಗಿದ್ದರು. ಆದರೆ, ನಗರ ವಿದ್ಯಾರ್ಥಿಗಳಲ್ಲಿ ಈ ಪ್ರಮಾಣ ಶೇಕಡ 64.6ರಷ್ಟು ಇತ್ತು. ಅದೇನೇ ಇರಲಿ, ಇದೀಗ ವಿದ್ಯಾಕುಲ್, ಅರಿವಿಹನ್ ಹಾಗೂ ಫಿಸಿಕ್ಸ್ವಾಲಾದಂತಹ ಎಐ ಚಾಲಿತ ವೇದಿಕೆಗಳು ದೊಡ್ಡ ಮಟ್ಟದಲ್ಲಿ ವ್ಯಕ್ತಿಗತ ಕಲಿಕೆಯ ಅನುಭವಗಳನ್ನು ಲಭ್ಯವಾಗಿಸುವ ಮೂಲಕ ಈ ಅಂತರಗಳನ್ನು ನಿವಾರಿಸಲು ನೆರವು ನೀಡುತ್ತಿವೆ.

ಈ ವೇದಿಕೆಗಳು ಬಹು ಭಾಷೆಗಳಲ್ಲಿ ಉತ್ಕೃಷ್ಟ ಗುಣಮಟ್ಟದ ಪಠ್ಯ ವಿಷಯಗಳನ್ನು ಒದಗಿಸುತ್ತಿವೆ. ಇವುಗಳಿಂದಾಗಿ ನಗರ ಪ್ರದೇಶದ ವಿದ್ಯಾರ್ಥಿಗಳಿಗೆ ಯಾವ ಶೈಕ್ಷಣಿಕ ಸಂಪನ್ಮೂಲಗಳು ಲಭ್ಯವಾಗುತ್ತವೆಯೋ ಅವು ಗ್ರಾಮೀಣ ವಿದ್ಯಾರ್ಥಿಗಳಿಗೂ ಲಭ್ಯವಾಗುತ್ತಿವೆ. ಹೀಗಾಗಿ ಗ್ರಾಮೀಣ ವಿದ್ಯಾರ್ಥಿಗಳು ಕೂಡ ಕಠಿಣ ಹಾಗೂ ಸ್ಪರ್ಧಾತ್ಮಕವಾದ ಜೆಇಇ ಮತ್ತು ನೀಟ್ ಪರೀಕ್ಷೆಗಳಿಗೆ ಸೂಕ್ತ ತಯಾರಿ ಮಾಡಿಕೊಳ್ಳಬಹುದಾಗಿರುತ್ತದೆ. ಹೀಗೆ ಕೃತಕ ಬುದ್ಧಿಮತ್ತೆಯು ಗ್ರಾಮೀಣ ಪ್ರದೇಶಗಳಿಗೂ ಸಂಪನ್ಮೂಲಗಳನ್ನು ಲಭ್ಯವಾಗಿಸುವ ಮೂಲಕ ಒಂದು ಕಾಲದಲ್ಲಿ ತಾವು ಪಡೆಯಲು ಸಾಧ್ಯವಿರದಿದ್ದ ಶಿಕ್ಷಣವನ್ನು ಪಡೆಯಲು ಅಲ್ಲಿನ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಟ್ಟಿದೆ.

ಆರೋಗ್ಯಸೇವೆಯಲ್ಲಿ ಎಐ ಮಹತ್ವ

ಶಿಕ್ಷಣವನ್ನು ಹೊರತುಪಡಿಸಿದರೆ, ಆರೋಗ್ಯ ಸೇವೆಯಲ್ಲೂ ಎಐ ಮಹತ್ವದ ದಾಪುಗಾಲು ಇರಿಸುತ್ತಿದೆ. ಇದು ಕೂಡ ಭಾರತದ ಗ್ರಾಮೀಣ ಜನರು ಭಾರಿ ಸವಾಲುಗಳನ್ನು ಎದುರಿಸುತ್ತಿರುವ ಕ್ಷೇತ್ರವಾಗಿದೆ. ಜಾಗತಿಕ ಮಟ್ಟದಲ್ಲಿ ಪ್ರತಿ 1 ಲಕ್ಷ ಜನಸಂಖ್ಯೆಗೆ 150 ವೈದ್ಯರಿದ್ದರೆ, ಭಾರತದಲ್ಲಿ ಈ ಸಂಖ್ಯೆ ಕೇವಲ 64 ಇದೆ. ಈ ಕೊರತೆಯು ಗ್ರಾಮೀಣ ಪ್ರದೇಶಗಳಲ್ಲಿ ಇನ್ನಷ್ಟು ತೀವ್ರವಾಗಿದ್ದು, ಆರೋಗ್ಯಸೇವೆಗಳ ಲಭ್ಯತೆಯ ಮೇಲೆ ಬಹಳ ದುಷ್ಟರಿಣಾಮ ಬೀರಿದೆ. ಎಐ ಚಾಲಿತ ಡಯಾಗ್ನೋಸ್ಟಿಕ್ ಸಾಧನಗಳು ಮತ್ತು ಟೆಲಿಮೆಡಿಸಿನ್ ವೇದಿಕೆಗಳು ಈ ಕೊರತೆಗಳನ್ನು ತುಂಬಲು ಸಹಕಾರಿಯಾಗಿವೆ. ಇತ್ತೀಚಿನ ದಿನಗಳಲ್ಲಿ ಡಯಾಬಿಟಿಕ್ ರೆಟಿನೊಪಥಿ ಮತ್ತು ಹೃದಯದ ರಕ್ತನಾಳಗಳ ಕಾಯಿಲೆಗಳನ್ನು ಆರಂಭಿಕ ಹಂತದಲ್ಲೇ ಪತ್ತೆ ಹಚ್ಚಲು ಎಐ ತಾಂತ್ರಿಕತೆಗಳನ್ನು ಬಳಸಲಾಗುತ್ತಿದೆ. ಇದು, ಸಮಸ್ಯೆಯಿಂದ ಬಾಧಿತರಾದವರ ಚಿಕಿತ್ಸಾ ಫಲಿತಾಂಶದ ಮೇಲೆ ಮಹತ್ವದ ಧನಾತ್ಮಕ ಪರಿಣಾಮಗಳನ್ನು ಉಂಟುಮಾಡಬಲ್ಲದು. ಆರೋಗ್ಯಸೇವಾ ಕಾರ್ಯಕರ್ತರಿಗೆ ದೂರದಿಂದಲೇ ಡಯಾಗ್ನೋಸ್ ಮಾಡಬಲ್ಲ ಹಾಗೂ ನಿರ್ಧಾರ ತಳೆಯಲು ನೆರವಾಗಬಲ್ಲ ಸಾಧನಗಳನ್ನು ಲಭ್ಯವಾಗಿಸುವ ಮೂಲಕ ಸೌಲಭ್ಯವಂಚಿತ ಪ್ರದೇಶಗಳಿಗೆ ಆರೋಗ್ಯಸೇವೆ ವಿಸ್ತರಿಸಲು ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಅನುವು ಮಾಡಿಕೊಟ್ಟಿದೆ. ಐಸ್ತ್ರಾ ಎಐ, ಕಾಗ್ನಿಡಾ ಎಐ ಮತ್ತು ಇನ್​ಫಿಂಕ್ಸ್ನಂತಹ ಎಐ ಕಂಪನಿಗಳು ಆರೋಗ್ಯಸೇವಾ ಕಾರ್ಯಾಚರಣೆಗಳನ್ನು ವ್ಯವಸ್ಥಿತಗೊಳಿಸಲು, ಡಯಾಗ್ನೋಸ್ಟಿಕ್ಸ್ಅನ್ನು ಮೇಲ್ದರ್ಜೆಗೇರಿಸಲು ಹಾಗೂ ಬಾಧಿತರ ಆರೈಕೆಯನ್ನು ಸುಧಾರಿತಗೊಳಿಸಲು ಅತ್ಯಾಧುನಿಕ ಎಐ ತಾಂತ್ರಿಕತೆಗಳನ್ನು ಉಪಯೋಗಿಸುತ್ತಿವೆ. ಜೊತೆಗೆ, ಇವು ಆರೋಗ್ಯಸೇವಾ ವಲಯದಲ್ಲಿ ನಾವೀನ್ಯತೆಗಳನ್ನು ಉಂಟುಮಾಡುತ್ತಿವೆ. ಅಂದಾಜಿನ ಪ್ರಕಾರ, 2025ರ ವೇಳೆಗೆ ಎಐ ಭಾರತದ ಆರೋಗ್ಯಸೇವಾ ಕ್ಷೇತ್ರದಲ್ಲಿ 11.78 ಶತಕೋಟಿ ಡಾಲರ್ ವಹಿವಾಟಿಗೆ ಕಾರಣವಾಗಬಹುದು ಎಂಬುದು ಅದರ ಪರಿವರ್ತನಾ ಸಾಮರ್ಥ್ಯದ ಬಗ್ಗೆ ಗಮನ ಸೆಳೆಯುತ್ತದೆ.

ಸೇವಾ ವಲಯದ ಮೇಲೂ ಪರಿಣಾಮ

ಶಿಕ್ಷಣ ಮತ್ತು ಆರೋಗ್ಯಸೇವೆಯ ಜೊತೆಗೆ ಕೃತಕ ಬುದ್ಧಿಮತ್ತೆಯು ಭಾರತದ ಆರ್ಥಿಕತೆಯ ಚಾಲಕಶಕ್ತಿಯಾದ ಸೇವಾ ವಲಯದ ಮೇಲೂ ಹೆಚ್ಚಿನ ಪರಿಣಾಮಗಳನ್ನು ಉಂಟುಮಾಡಬಹುದು. ಬಿಸಿನೆಸ್ ಪೊ›ಸೆಸ್ ಔಟ್​ಸೋರ್ಸಿಂಗ್ (ಬಿಪಿಒ) ಮತ್ತು ಗ್ಲೋಬಲ್ ಕೇಪಬಿಲಿಟಿ ಸೆಂಟರ್​ಗಳನ್ನು (ಜಿಸಿಸಿ) ಒಳಗೊಂಡ ಈ ಸೇವಾ ಕ್ಷೇತ್ರವು ಪ್ರಸ್ತುತ ದೇಶದ ಆರ್ಥಿಕತೆಗೆ ವಾರ್ಷಿಕ 33.8 ಶತಕೋಟಿ ಡಾಲರ್​ಗಳ ವಹಿವಾಟಿಗೆ ಕೊಡುಗೆ ನೀಡುತ್ತಿದೆ. ಈ ಕ್ಷೇತ್ರದಲ್ಲಿ ಗ್ರಾಹಕ ಸೇವೆ ಹಾಗೂ ಬ್ಯಾಕ್ ಆಫೀಸ್ ಕಾರ್ಯಾಚರಣೆಯಂತಹ ವಾಡಿಕೆಯ ಯಾಂತ್ರಿಕ ಕಾರ್ಯಗಳನ್ನು (ರೊಟೀನ್ ಟಾಸ್ಕ್ ಗಳನ್ನು) ಎಐ ಸ್ವಯಂಚಾಲಿತಗೊಳಿಸುತ್ತಿದೆ.

ಉದ್ಯೋಗ ನಷ್ಟದ ಭೀತಿ ಬೇಡ

ಎಐ ಮತ್ತೊಂದೆಡೆ ಉದ್ಯೋಗ ನಷ್ಟದ ಭೀತಿಯನ್ನೂ ಉಂಟುಮಾಡಿದೆ. ಎಐ ಚಾಲಿತ ಚಾಟ್​ಬಾಟ್, ವರ್ಚ್ಯುಯಲ್ ಅಸಿಸ್ಟೆಂಟ್ ಮತ್ತು ಮಷೀನ್ ಲರ್ನಿಂಗ್ ಮಾದರಿಗಳ ಬಳಕೆ ಪ್ರಚಲಿತಕ್ಕೆ ಬರುತ್ತಿದ್ದು, ನಿರ್ವಹಣಾ ವೆಚ್ಚವನ್ನು ಗಣನೀಯವಾಗಿ ತಗ್ಗಿಸುವ ಜೊತೆಗೆ ಪರಿಣಾಮಕಾರಿಯಾಗಿ ಕ್ಷಮತೆಯನ್ನು ಹೆಚ್ಚಿಸುತ್ತಿವೆ. ಉದ್ಯೋಗನಷ್ಟದ ಆತಂಕದ ನಡುವೆಯೂ ಇಲ್ಲಿ ಗಮನಿಸಬೇಕಾದ ಸಂಗತಿಯೆಂದರೆ, ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಎಂಬುದು ಮಾನವ ಉದ್ಯೋಗಿಗಳಿಗೆ ಸಂಪೂರ್ಣ ಬದಲಿ ಆಗಲಾರದು. ಎಐ ಏನಿದ್ದರೂ ಮಾನವನ ನೈಪುಣ್ಯಕ್ಕೆ ಪೂರಕವಾಗಿ ಕಾರ್ಯನಿರ್ವಹಿಸಬಲ್ಲದು. ಅದರಲ್ಲೂ ಜಟಿಲವಾದ ಸಮಸ್ಯೆಗಳಿಗೆ ಪರಿಹಾರ, ಭಾವನಾತ್ಮಕ ಬುದ್ಧಿಮತ್ತೆ ಮತ್ತು ನಿರ್ಧಾರ ತಳೆಯುವ ಪ್ರಕ್ರಿಯೆಗಳಲ್ಲಿ ಇದು ಹೆಚ್ಚು ನೆರವಾಗಬಲ್ಲದು. ಬಿಪಿಒ ವಲಯದಲ್ಲಿ ಸಾಮಾನ್ಯವಾಗಿ ಕೇಳಲಾಗುವ ಪ್ರಶ್ನೆಗಳಿಗೆ ಉತ್ತರಿಸುವುದು, ರೀಫಂಡ್​ಗಳನ್ನು ಪ್ರಕ್ರಿಯೆಗೆ ಒಳಪಡಿಸುವುದು ಅಥವಾ ಷಿಪ್​ವೆುಂಟ್​ಗಳ ಮೇಲೆ ನಿಗಾ ಇರಿಸುವುದು, ಇಂತಹ ವಾಡಿಕೆಯ ಗ್ರಾಹಕ ಸೇವಾ ಕಾರ್ಯಗಳನ್ನು ಎಐ ಸ್ವಯಂಚಾಲಿತಗೊಳಿಸುತ್ತಿದೆ. ಆದರೆ, ಜಟಿಲ ಸನ್ನಿವೇಶಗಳು ಉದ್ಭವವಾದಾಗ, ಅಂದರೆ, ಬಹು ಹಂತಗಳ ತಾಂತ್ರಿಕ ಸಮಸ್ಯೆಗಳನ್ನು ಪರಿಹರಿಸಬೇಕಾದಾಗ ಹಾಗೂ ಕ್ಲಿಷ್ಟಕರವಾದ ಗ್ರಾಹಕರ ಅಹವಾಲುಗಳನ್ನು ನಿರ್ವಹಿಸಬೇಕಾದಾಗ ಮಾನವ ಮಧ್ಯವರ್ತಿಗಳ ಅಗತ್ಯ ಇದ್ದೇ ಇರುತ್ತದೆ. ಆರಂಭಿಕ ಹಂತಗಳನ್ನು ನಿರ್ವಹಿಸಲು ನೆರವಾಗಲಿರುವ ಎಐ ಆನಂತರದ ಹಂತದಲ್ಲಿ ಪ್ರಕರಣಗಳನ್ನು ವಿವರ ಸಾರಾಂಶದೊಂದಿಗೆ ಮಾನವ ಮಧ್ಯವರ್ತಿಗೆ ವರ್ಗಾಯಿಸುತ್ತದೆ. ಈ ರೀತಿಯಾಗಿ, ತ್ವರಿತ ಹಾಗೂ ಹೆಚ್ಚು ಮಾಹಿತಿಯುಕ್ತ ಪ್ರತಿಸ್ಪಂದನೆಗೆ ಅನುವು ಮಾಡಿಕೊಡುತ್ತದೆ.

ಯಶಸ್ಸಿನ ಉದಾಹರಣೆಗಳು

ಭಾರತದ ದತ್ತಾಂಶ ವಿಶ್ಲೇಷಣಾ ಮುಂಚೂಣಿ ಉದ್ದಿಮೆಯಾದ ಮ್ಯೂಸಿಗ್ಮಾ ಕಂಪನಿಯು ಆರಂಭಿಕ ಹಂತದಲ್ಲೇ ಎಐ ಅಳವಡಿಸಿಕೊಂಡು, ಹೆಚ್ಚು ಪ್ರಸ್ತುತವೆನ್ನಿಸುವ ರೀತಿಯಲ್ಲಿ ಕಾರ್ಯಾಚರಣೆ ನಡೆಸುತ್ತಿದೆ. ತನ್ನ ಸೇವೆಗಳಿಗೆ ಎಐ ಚಾಲಿತ ದತ್ತಾಂಶ ವಿಶ್ಲೇಷಣೆಯನ್ನು ಸಂಯೋಜನೆಗೊಳಿಸುವ ಮೂಲಕ ಮ್ಯೂಸಿಗ್ಮಾ ಕಂಪನಿಯು ವ್ಯಾಪಾರ-ವಹಿವಾಟು ನಡೆಸುವವರಿಗೆ ತ್ವರಿತವಾಗಿ ದತ್ತಾಂಶ ನಿರ್ದೇಶಿತ ನಿರ್ಧಾರಗಳನ್ನು ತಳೆಯಲು ಅನುಕೂಲ ಕಲ್ಪಿಸುತ್ತಿದೆ. ಕಂಪನಿಯು ಆರಂಭಿಕ ಹಂತದಲ್ಲೇ ಎಐ ಮೇಲೆ ಗಮನ ಕೇಂದ್ರೀಕರಿಸಿದ್ದು ಅದನ್ನು ಹೆಚ್ಚು ಸ್ಪರ್ಧಾತ್ಮಕಗೊಳಿಸುವ ಜೊತೆಗೆ, ಅದಕ್ಕೆ ಹಣಕಾಸು ಸೇವೆಗಳು ಹಾಗೂ ಆರೋಗ್ಯಸೇವೆ ಒಳಗೊಂಡಂತೆ ವಿವಿಧ ಉದ್ದಿಮೆಗಳ ಗ್ರಾಹಕರಿಗೆ ನಾವೀನ್ಯತಾ ಪರಿಹಾರಗಳನ್ನು ಒದಗಿಸಲು ಸಾಧ್ಯವಾಗಿಸಿದೆ.

ಸೆಲೆಬಲ್ ಟೆಕ್ ಎಂಬುದು ಇಂತಹ ಮತ್ತೊಂದು ಕಂಪನಿಯಾಗಿದೆ. ಇದು ಎಐ ಮತ್ತು ಮಷೀನ್ ಲರ್ನಿಂಗ್​ನಲ್ಲಿ ವಿಶೇಷ ನೈಪುಣ್ಯವುಳ್ಳ ವೇಗವಾಗಿ ಬೆಳೆಯುತ್ತಿರುವ ದತ್ತಾಂಶ ಪರಿಹಾರ ಸಂಸ್ಥೆಯಾಗಿದೆ. ಇದು ಬೇರೆ ಕಂಪನಿಗಳು ಪ್ರಕ್ರಿಯೆಗಳನ್ನು ಸ್ವಯಂಚಾಲಿತಗೊಳಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಜೊತೆಗೆ, ದತ್ತಾಂಶ ವಿಜ್ಞಾನ ಮತ್ತು ಎಐ ಚಾಲಿತ ಸಾಧನಗಳ ನೆರವಿನಿಂದ ಕಾರ್ಯಾಚರಣೆಗಳನ್ನು ಗರಿಷ್ಠಗೊಳಿಸಲು ಕಾರಣವಾಗುತ್ತಿದೆ. ಬಿಪಿಒದಂತಹ ಕ್ಷೇತ್ರದಲ್ಲಿ ಸೆಲೆಬಲ್ ಟೆಕ್​ನ ಎಐ ಪರಿಹಾರಗಳು ವಾಡಿಕೆಯ ಯಾಂತ್ರಿಕ ಕೆಲಸಗಳನ್ನು ಸ್ವಯಂಚಾಲಿತಗೊಳಿಸಿ ಕಾರ್ಯಾಚರಣಾ ಕ್ಷಮತೆಯನ್ನು ಹೆಚ್ಚಿಸುತ್ತಿವೆ. ಆ ಮೂಲಕ, ಹೆಚ್ಚು ಜಟಿಲವಾದ ಹಾಗೂ ಮೌಲ್ಯಯುತ ಚಟುವಟಿಕೆಗಳ ಬಗ್ಗೆ ಗಮನ ಕೇಂದ್ರೀಕರಿಸಲು ಮಾನವ ಉದ್ಯೋಗಿಗಳಿಗೆ ಅನುಕೂಲ ಮಾಡಿಕೊಡುತ್ತಿವೆ.

ಲಕ್ಷಾಂತರ ಉದ್ಯೋಗ ಸೃಷ್ಟಿ ಸಾಧ್ಯತೆ

ಭಾರತದ ಸೇವಾ ಉದ್ಯಮದಲ್ಲಿ ಭವಿಷ್ಯದಲ್ಲಿ ಹೈಬ್ರಿಡ್ ಮಾದರಿಯ ಅಳವಡಿಕೆ ಕಂಡುಬರುವ ಸಾಧ್ಯತೆ ಇದೆ. ಅಂದರೆ ಕ್ಷಮತೆಯನ್ನು ಗರಿಷ್ಠಗೊಳಿಸುವ ಗುರಿಯೊಂದಿಗೆ ಎಐ ಮತ್ತು ಮಾನವ ಉದ್ಯೋಗಿಗಳ ಸಂಯೋಜನೆ ಕಂಡುಬರಲಿದೆ. ಹಾಗಾದಾಗ, ಪುನರಾವರ್ತಿಕ ಯಾಂತ್ರಿಕ ಕೆಲಸಗಳನ್ನು ಎಐ ನಿರ್ವಹಿಸಿದರೆ, ಮಾನವ ಉದ್ಯೋಗಿಗಳು ಜಟಿಲವಾದ ಭಾವನಾತ್ಮಕತೆಯ ಅಗತ್ಯವಿರುವ ಪ್ರಕ್ರಿಯೆಗಳನ್ನು ನಿರ್ವಹಿಸಲಿದ್ದಾರೆ. ಈ ಸಮತೋಲಿತ ಪರಿಕಲ್ಪನೆಯು ಉತ್ಪಾದಕತೆಯನ್ನು ಹೆಚ್ಚಿಸುವ ಜೊತೆಗೆ ವ್ಯಕ್ತಿಗತ ಗ್ರಾಹಕ ನೆರವನ್ನು ಕೂಡ ಖಾತರಿಗೊಳಿಸುತ್ತದೆ. ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಭಾರತದ ಆರ್ಥಿಕತೆಗೆ ಹೊಸ ರೂಪ ನೀಡುವುದನ್ನು ಮುಂದುವರಿಸುತ್ತಾ ಹೋದಂತೆ ಲಕ್ಷಾಂತರ ಹೊಸ ಉದ್ಯೋಗಳನ್ನು ಕೂಡ ಸೃಷ್ಟಿಸಲಿದೆ. ಮುಖ್ಯವಾಗಿ ಡೇಟಾ ಸೈನ್ಸ್, ಎಐ ಆಪರೇಷನ್ಸ್ ಮತ್ತು ಮಷೀನ್ ಲರ್ನಿಂಗ್ ವಲಯಗಳಲ್ಲಿ ಇಂತಹ ಉದ್ಯೋಗಗಳು ಹೆಚ್ಚಾಗಿ ಸೃಷ್ಟಿಯಾಗಲಿವೆ. ಆದರೆ, ಈ ಪೈಕಿ ಬಹಳಷ್ಟು ಹೊಸ ಉದ್ಯೋಗಗಳಿಗೆ ಕೌಶಲಗಳ ಉನ್ನತೀಕರಣ ಅತ್ಯಗತ್ಯವಾಗುತ್ತದೆ. ಉದ್ಯೋಗಿಗಳು ಹೆಚ್ಚು ತಂತ್ರಜ್ಞಾನ ಚಾಲಿತ ಕಾರ್ಯಪರಿಸರಕ್ಕೆ ಹೊಂದಿಕೊಳ್ಳುವುದು ಅನಿವಾರ್ಯವಾಗುವುದರಿಂದ ಕೌಶಲಗಳ ಉನ್ನತೀಕರಣವು ಬಹಳ ಮುಖ್ಯವಾಗುತ್ತದೆ.