| ಆರ್.ತುಳಸಿಕುಮಾರ್ ಬೆಂಗಳೂರು
ರಾಜ್ಯದ ಪ್ರಮುಖ ಬೆಳೆಗಳಲ್ಲಿ ಒಂದೆನಿಸಿರುವ ತೆಂಗು ರೈತರ ಪಾಲಿನ ಆದಾಯ ತಂದುಕೊಡುವ ಬೆಳೆ. ಕಲ್ಪವೃಕ್ಷ ಎಂದೇ ಖ್ಯಾತಿ ಪಡೆದಿರುವ ತೆಂಗಿನಿಂದ ಕಾಯಿ, ಗರಿ ಸೇರಿ ಎಲ್ಲವೂ ಆತ್ಯುಪಯುಕ್ತ. ಹೊಲ, ತೋಟವಲ್ಲದೆ ಮನೆ ಮುಂದೆ ತೆಂಗಿನ ಮರ ಇದ್ದರೆ ಅದೃಷ್ಟ ಎಂಬ ಪ್ರತೀತಿಯೂ ಇದೆ.
ಇತ್ತೀಚೆಗೆ ವಿವಿಧ ಉತ್ಪನ್ನಗಳ ಮೂಲಕ ತೆಂಗು ದೇಶ-ವಿದೇಶಗಳಲ್ಲೂ ಸದ್ದು ಮಾಡಿದೆ. ಉಪ ಉತ್ಪನ್ನಗಳನ್ನು ಹೊಸ ವಿಧಾನದ ಮೂಲಕ ಗ್ರಾಹಕರಿಗೆ ತಲುಸುವಲ್ಲಿ ಉದ್ಯಮಿಗಳು ಸಫಲತೆ ಕಂಡುಕೊಂಡಿದ್ದಾರೆ. ಯುವಜನತೆ ಕೂಡ ತೆಂಗಿನ ಉಪ ಉತ್ನನಗಳನ್ನು ಆಲೋಚನೆಗೆ ತಕ್ಕಂತೆ ಮಾರ್ಪಡಿಸಿ ಸ್ವಯಂ ಉದ್ಯೋಗ ಕಂಡುಕೊಂಡಿದ್ದಾರೆ.
ದೇಶದಲ್ಲೇ ಅತಿ ಹೆಚ್ಚು ತೆಂಗು ಬೆಳೆಯುವ ರಾಜ್ಯವೆಂಬ ಖ್ಯಾತಿಯನ್ನು ಕರ್ನಾಟಕ ಪಡೆದಿದೆ. ತುಮಕೂರು, ಹಾಸನ, ಮಂಡ್ಯ, ಮೈಸೂರು, ಚಾಮರಾಜನಗರ, ಚಿಕ್ಕಮಗಳೂರು, ಚಿತ್ರದುರ್ಗ, ದಕ್ಷಿಣಕನ್ನಡ, ಉಡುಪಿ, ದಾವಣಗೆರೆ ಜಿಲ್ಲೆಗಳಲ್ಲಿ ಹೆಚ್ಚು ತೆಂಗು ಬೆಳೆಯಲಾಗುತ್ತಿದೆ. ಇದನ್ನು ಮನಗಂಡು ರಾಜ್ಯ ಸರ್ಕಾರ ತೋಟಗಾರಿಕೆ ಇಲಾಖೆ ಮೂಲಕ ತೆಂಗು ಬೆಳೆವಣಿಗೆ ಪ್ರೋತ್ಸಾಹ ನೀಡುತ್ತಿದೆ. ಇನ್ನೊಂದೆಡೆ ತೆಂಗು ಅಭಿವೃದ್ಧಿ ಮಂಡಳಿಯೂ ದೊಡ್ಡ ಮಟ್ಟದಲ್ಲಿ ತೆಂಗು ಬೆಳೆಗಾರರಿಗೆ ಸಹಾಯಹಸ್ತ ಚಾಚಿದೆ.
ಭಾರಿ ಮಳೆಯಾದಲ್ಲಿ ಇಳುವರಿಗೆ ಹೊಡೆತ: ಇತ್ತೀಚಿಗೆ ಭಾರಿ ಮಳೆಯಾಗುತ್ತಿದ್ದು, ಹಲವು ಜಿಲ್ಲೆಗಳಲ್ಲಿ ತೆಂಗು ತೋಟಗಳಲ್ಲಿ ನೀರು ನಿಂತು ಸಮಸ್ಯೆಯಾಗಿದೆ. ನಿರಂತರವಾಗಿ ವಾರದ ಮಟ್ಟಿಗೆ ನೀರು ನಿಂತಲ್ಲಿ ಗರಿ ಹಳದಿ ಬಣ್ಣಕ್ಕೆ ತಿರುಗುತ್ತವೆ. ಇಳುವರಿಗೂ ಹೊಡೆತ ಬೀಳುತ್ತದೆ. ಇದನ್ನು ತಪ್ಪಿಸಲು ತೋಟಗಳಲ್ಲಿ ನಿಂತಿರುವ ನೀರನ್ನು ಬಸಿಯಬೇಕು. ಮೆಗ್ನಿಶಿಯಂ ಸಲ್ಪೇಟ್ ಸಿಂಪಡಿಸಿ ಗಿಡಗಳನ್ನು ರಕ್ಷಿಸಿಕೊಳ್ಳಬಹುದು.
ಎಳನೀರು ಗಂಜಿ: ರಾಜ್ಯದಲ್ಲೇ ಮೊದಲ ಬಾರಿಗೆ ಎಳೆನೀರಿನಿಂದ ಗಂಜಿಯನ್ನು ಬೇರ್ಪಡಿಸಿ ಉಪ ಉತ್ಪನ್ನವಾಗಿ ತಯಾರಿಸಿ ಮಾರಾಟ ಮಾಡಲಾಗುತ್ತಿದೆ. ಈ ಉದ್ಯಮವನ್ನು ಮಂಡ್ಯ ಜಿಲ್ಲೆ ಮದ್ದೂರು ತಾಲೂಕು ಛತ್ರದ ಹೊಸಹಳ್ಳಿಯಲ್ಲಿ ರೈತ ಮಹಿಳೆ ಸುಧಾ ಮೋಹನ್ ಕಾರ್ಖಾನೆ ಪ್ರಾರಂಭಿಸಿದ್ದಾರೆ. ಎಳನೀರನ್ನು ಖರೀದಿಸಿ ಅದರಿಂದ ಗಂಜಿಯನ್ನು ಬೇರ್ಪಡಿಸಿ ಪ್ಯಾಕೇಟ್ನಲ್ಲಿ ಬೆಂಗಳೂರಿಗೆ ರಫ್ತು ಮಾಡಲಾಗುತ್ತಿದೆ. ಈ ಗಂಜಿಯನ್ನು ಐಸ್ ಕ್ರೀಂ ಹಾಗೂ ಜ್ಯೂಸ್ಗೆ ಬಳಕೆ ಮಾಡಲಾಗುತ್ತಿದೆ.
ವರ್ಜಿನ್ ಕೋಕೊನಟ್ ಆಯಿಲ್: ಹಾಸನ ಜಿಲ್ಲೆಯ 62,000 ಹೆಕ್ಟೇರ್ ಪ್ರದೇಶದಲ್ಲಿ ತೆಂಗು ಬೆಳೆ ಇದ್ದು, ಕೊಬ್ಬರಿ, ಕೊಬ್ಬರಿ ಎಣ್ಣೆ, ಕೋಕೋ ಪೀಟ್, ನಾರು ಅಲ್ಲದೆ ಇತ್ತೀಚೆಗೆ ವರ್ಜಿನ್ ಕೋಕೊನಟ್ ಆಯಿಲ್ ಮತ್ತು ಡೆಸಿಕೇಟೆಡ್ ಕೋಕೊನಟ್ ಪೌಡರ್ ಉತ್ಪಾದಕ ಘಟಕಗಳು ಇಲ್ಲಿ ಸದ್ದು ಮಾಡುತ್ತಿವೆ.
ವರ್ಜಿನ್ ತೆಂಗಿನಕಾಯಿ ಎಣ್ಣೆ: ಬಲಿತ ತೆಂಗಿನ ಕಾಯಿಗಳನ್ನು ಸಂಸ್ಕರಿಸಿ ತೆಗೆಯುವ ಎಣ್ಣೆಗೆ ವರ್ಜಿನ್ ಕೊಕೊನಟ್ ಆಯಿಲ್ ಎನ್ನಲಾಗುತ್ತದೆ. ಈ ಎಣ್ಣೆಯ ವಿವಿಧ ಬ್ರ್ಯಾಂಡ್ಗಳ ಉತ್ಪನ್ನಗಳು ತಯಾರಾಗುತ್ತಿದ್ದು, ಜಿಲ್ಲೆಯಲ್ಲಿ ಇಂತಹ 7 ಘಟಕಗಳಿವೆ. ವರ್ಜಿನ್ ತೆಂಗಿನಕಾಯಿ ಎಣ್ಣೆಯನ್ನು ಪ್ರಮುಖವಾಗಿ ಅಡುಗೆಗೆ ಬಳಸಲಾಗುತ್ತದೆ. ಹೃದಯದ ಆರೋಗ್ಯಕ್ಕೆ ಬಹಳ ಒಳ್ಳೆಯದು ಎಂಬ ಕಾರಣಕ್ಕೆ ದುಬಾರಿ ಆದರೂ ಇದರ ವ್ಯಾಪಾರ ಚೆನ್ನಾಗಿ ನಡೆಯುತ್ತಿದೆ.
ಒಣಗಿಸಿದ ತೆಂಗಿನಕಾಯಿ ಪುಡಿ: ತೆಂಗಿನಕಾಯಿಯನ್ನು ತುರಿದು ಚೆನ್ನಾಗಿ ಒಣಗಿಸಿ, ಪುಡಿ ಮಾಡಿ, ಪ್ಯಾಕ್ ಮಾಡಿ ಮಾರಾಟ ಮಾಡುವ ಘಟಕಗಳೂ ಹಾಸನ ಜಿಲ್ಲೆಯಲ್ಲಿವೆ. ಇದಕ್ಕೆ ಡೆಸಿಕೇಟೆಡ್ ಕೋಕೊನಟ್ ಪೌಡರ್ ಎನ್ನಲಾಗುತ್ತದೆ. ಜಿಲ್ಲೆಯ 5 ಘಟಕಗಳಿಂದ ಪ್ಯಾಕ್ ಮಾಡಿದ ತೆಂಗಿನಕಾಯಿ ಪುಡಿಯನ್ನು ಉತ್ತರ ಭಾರತದ ರಾಜ್ಯಗಳಿಗೆ ಕಳುಹಿಸಲಾಗುತ್ತಿದೆ. ತೆಂಗು ಬೆಳೆ ಇಲ್ಲದ ರಾಜ್ಯಗಳಲ್ಲಿ ಈ ಒಣಗಿಸಿದ ತೆಂಗಿನಕಾಯಿ ಪುಡಿಯನ್ನು ಅಡುಗೆಗೆ ಬಳಸುತ್ತಾರೆ.