ನ್ಯೂಸ್

ಪಾಲಕರು ಬಲಿ, ಮಕ್ಕಳು ಅನಾಥ: ದತ್ತು ಸ್ವೀಕಾರ ನಿಯಮ ಸಡಿಲಕ್ಕಾಗಿ ಸರ್ಕಾರಕ್ಕೆ ಮನವಿ

Webdesk - Ravikanth

| ದೇವರಾಜ್ ಕನಕಪುರ ಬೆಂಗಳೂರು

ಕರೊನಾ ಅಟ್ಟಹಾಸದಿಂದಾಗಿ ಅಪ್ಪ-ಅಮ್ಮನನ್ನು ಕಳೆದುಕೊಂಡು ಮಕ್ಕಳು ಅನಾಥವಾಗುತ್ತಿರುವ ಅನೇಕ ಪ್ರಕರಣಗಳು ರಾಜ್ಯದಲ್ಲಿ ಬೆಳಕಿಗೆ ಬರುತ್ತಿವೆ. ಇಂತಹ ಮಕ್ಕಳನ್ನು ದತ್ತು ಸ್ವೀಕರಿಸಲು ಕಾನೂನಿನಲ್ಲಿ ತೊಡಕುಗಳಿರುವ ಪರಿಣಾಮ ತಕ್ಷಣಕ್ಕೆ ರಕ್ಷಣೆ ಮತ್ತು ಪೋಷಣೆ ಕಷ್ಟವಾಗಿ ಪರಿಣಮಿಸಿದೆ.

ಕೆಲವು ಪ್ರಕರಣಗಳಲ್ಲಿ ಪಾಲಕರಿಬ್ಬರೂ ಮೃತರಾದರೆ, ಇನ್ನು ಕೆಲವು ಪ್ರಕರಣಗಳಲ್ಲಿ ತಂದೆ ಅಥವಾ ತಾಯಿಯನ್ನು ಮಕ್ಕಳು ಕಳೆದುಕೊಳ್ಳುತ್ತಿದ್ದಾರೆ. ಈ ರೀತಿಯ ಪ್ರಕರಣಗಳ ಬಗ್ಗೆ ಚೈಲ್ಡ್ ಲೈನ್​ಗೆ ಕರೆಗಳು ಬರುತ್ತಿದೆ. ಅನಾಥವಾದ ಮಕ್ಕಳ ರಕ್ಷಣೆಗೆ ನಿಲ್ಲುವಂತೆ ಮಕ್ಕಳ ದೂರದ ಸಂಬಂಧಿಗಳು, ಅಕ್ಕಪಕ್ಕದ ಮನೆಯವರು ಮನವಿ ಮಾಡುತ್ತಿದ್ದಾರೆ. ಕರೊನಾ ಕರ್ಫ್ಯೂ ಜಾರಿಯಲ್ಲಿರುವುದರಿಂದ ಮಕ್ಕಳ ರಕ್ಷಣೆ ಕಷ್ಟವಾಗಿದೆ. ತಕ್ಷಣ ಮಕ್ಕಳ ರಕ್ಷಣೆಗೆ ವ್ಯವಸ್ಥೆ ಕಲ್ಪಿಸುವಂತೆ ಮಹಿಳಾ ಮತ್ತು ಮಕ್ಕಳ ಅಭಿವೖದ್ಧಿ ಇಲಾಖೆ ಸಚಿವರಿಗೆ ಚೈಲ್ಡ್ ರೈಟ್ಸ್ ಪತ್ರ ಬರೆದಿದೆ.

ನಿಯಮ ಸಡಿಲಿಸಿ: ಇತ್ತೀಚಿಗೆ ಬೆಂಗಳೂರಿನಲ್ಲಿ ಇಬ್ಬರೂ ಪಾಲಕರನ್ನು ಕಳೆದುಕೊಂಡ ಮಗುವನ್ನು ದತ್ತು ಸ್ವೀಕರಿಸಲು ಸಂಬಂಧಿಕರು ಮುಂದೆ ಬಂದಿದ್ದರು. ಆದರೆ ಕಾನೂನಿನ ಪ್ರಕಾರ ವ್ಯವಸ್ಥೆ ಕಲ್ಪಿಸಲು ತಡವಾಗಿದೆ. ದತ್ತು ಸ್ವೀಕಾರಕ್ಕೂ ಮುನ್ನ ಆ ಮಗುವನ್ನು ಮಕ್ಕಳ ಕಲ್ಯಾಣ ಸಮಿತಿ ಮುಂದೆ ಹಾಜರುಪಡಿಸಬೇಕು. ನಂತರ ಸಮಿತಿ ಇದಕ್ಕೆ ಒಪ್ಪಿಗೆ ಸೂಚಿಸಬೇಕು. ಇಲ್ಲವಾದರೆ, ಇದು ಕಾನೂನು ಬಾಹಿರವಾಗಿ ಮಕ್ಕಳ ಕಳ್ಳಸಾಗಾಣಿಕೆ ಎಂದು ಪರಿಗಣನೆಗೆ ಬರುತ್ತದೆ. ಇಂಥ ಸಮಸ್ಯೆ ಇರುವುದರಿಂದ, ಪಾಲಕರನ್ನು ಕಳೆದುಕೊಂಡ ಮಕ್ಕಳ ರಕ್ಷಣೆಗಾಗಿ ಸರ್ಕಾರ ಮಾರ್ಗಸೂಚಿ ರಚಿಸಬೇಕೆಂದು ಚೈಲ್ಡ್ ರೈಟ್ಸ್ ಒತ್ತಾಯಿಸಿದೆ.

ಮಾಹಿತಿ ವಿನಿಮಯ ಆಗಲಿ: ಪ್ರತಿ ಜಿಲ್ಲೆಯಲ್ಲಿರುವ ಮಕ್ಕಳ ರಕ್ಷಣಾ ಘಟಕಗಳು, ಮಕ್ಕಳ ಕಲ್ಯಾಣ ಸಮಿತಿಗಳು, ಚೈಲ್ಡ್ ರೈಟ್ಸ್ 1098 ಗಳ ಜತೆಗೆ ಆರೋಗ್ಯ ಇಲಾಖೆ ಸಹಕರಿಸಿ ತಮ್ಮ ಜಿಲ್ಲೆಯ ಅಥವಾ ತಮ್ಮ ಅಧಿಕಾರ ವ್ಯಾಪ್ತಿಯ ಆಸ್ಪತ್ರೆಗಳಿಗೆ ಇಬ್ಬರೂ ಪಾಲಕರು ದಾಖಲಾದ ಮಾಹಿತಿ ಹಂಚಿಕೊಳ್ಳಬೇಕು. ಇದರಿಂದ ಆ ಪಾಲಕರ ಮಕ್ಕಳ ರಕ್ಷಣೆ, ಪೋಷಣೆ ಕುರಿತು ಮೊದಲೇ ಯೋಜನೆ ಸಿದ್ಧಪಡಿಸಿಕೊಳ್ಳಲು ಸಹಕಾರಿಯಾಗಲಿದೆ.

ನೋಡಲ್ ಅಧಿಕಾರಿ ನೇಮಕ: ಕೋವಿಡ್ ಸೋಂಕಿನಿಂದ ಹೆತ್ತವರನ್ನು ಕಳೆದುಕೊಂಡು ಅನಾಥರಾದ ಮಕ್ಕಳಿಗೆ ಸರ್ಕಾರದಿಂದ ಅವಶ್ಯಕ ಸೌಕರ್ಯಗಳನ್ನು ಆದ್ಯತೆಯ ಮೇಲೆ ಒದಗಿಸಲು ಸರ್ಕಾರ ಕ್ರಮ ಕೈಗೊಂಡಿದೆ. ಈ ಸಂಬಂಧ ನೋಂದಣಿ ಮಹಾ ಪರಿವೀಕ್ಷಕ ಮತ್ತು ಮುದ್ರಾಂಕ ಆಯುಕ್ತ ಕೆ.ಪಿ.ಮೋಹನ್​ರಾಜ್ ಅವರನ್ನು ರಾಜ್ಯ ನೋಡಲ್ ಅಧಿಕಾರಿಯನ್ನಾಗಿ ನೇಮಿಸಿದೆ.

ಕರೊನಾದಿಂದ ಮೖತರಾದವರ ಮಕ್ಕಳ ದತ್ತು ಸ್ವೀಕಾರ ಕಾರ್ಯ ವಿಳಂಬವಾಗುತ್ತಿದೆ. ಕಾನೂನಿನ ತೊಡಕು ಇದಕ್ಕೆ ಕಾರಣ. ಈ ಸಮಯದಲ್ಲಿ ನಿಯಮ ಸಡಿಲಿಸಿ ಸೂಕ್ತ ಮಾರ್ಗಸೂಚಿ ಪ್ರಕಟಿಸಬೇಕು.

| ನಾಗಸಿಂಹ ಜಿ.ರಾವ್ ನಿರ್ದೇಶಕ, ಚೈಲ್ಡ್ ರೈಟ್ಸ್ ಟ್ರಸ್ಟ್

ಇಲಾಖೆ ಮಾಡಬೇಕಾದ್ದೇನು?

  • ಕರೊನಾದಿಂದ ಮೃತರಾದ ಪಾಲಕರ ಮಕ್ಕಳ ದತ್ತು ಸ್ವೀಕಾರಕ್ಕೆ ಪ್ರತ್ಯೇಕ ಮಾರ್ಗಸೂಚಿ ಹೊರಡಿಸಬೇಕು
  • ಮಕ್ಕಳ ಕಲ್ಯಾಣ ಸಮಿತಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕಗಳ ದೂರವಾಣಿಯನ್ನು ಮಾಧ್ಯಮಗಳಲ್ಲಿ ಪ್ರಕಟಿಸಬೇಕು
  • ಅನಾಥ ಮಕ್ಕಳ ರಕ್ಷಣೆ ಹೇಗೆ, ಸರ್ಕಾರ ಹೇಗೆ ಕಾರ್ಯನಿರ್ವಹಿಸಲಿದೆ ಎಂಬುದನ್ನು ಮಾಧ್ಯಮಗಳಲ್ಲಿ ಪ್ರಕಟಿಸಬೇಕು
  • ಪಾಲಕರು ಕರೊನಾ ಬಂದ ಕೂಡಲೇ ತಮ್ಮ ಮಕ್ಕಳ ರಕ್ಷಣೆಗೆ ಗಮನ ನೀಡಬೇಕು