ನ್ಯೂಸ್

ಸೈನಿಕರ ಸೇವೆಗೆ ಸಲಾಂ: ಇಂದು ಭೂಸೇನಾ ದಿನ; ಮೊದಲ ಬಾರಿಗೆ ಬೆಂಗಳೂರಿನಲ್ಲಿ ಸಮಾರಂಭ ಆಯೋಜನೆ

Webdesk - Ravikanth

ಭಾರತೀಯ ಸೈನಿಕರ ಸೇವೆಯನ್ನು ಸ್ಮರಿಸಲು, ಅವರ ದೇಶಪ್ರೇಮವನ್ನು ಗೌರವಿಸಲು ಪ್ರತಿ ವರ್ಷ ಜನವರಿ 15ರಂದು ಭಾರತೀಯ ಸೇನಾ ದಿನ ಆಚರಿಸಲಾಗುತ್ತದೆ. ಇದು 75ನೇ ಸೇನಾ ದಿನಾಚರಣೆಯಾಗಿದ್ದು, ಮೊಟ್ಟಮೊದಲ ಬಾರಿಗೆ ಬೆಂಗಳೂರಿನಲ್ಲಿ ನಡೆಯುತ್ತಿದೆ.

| ಗಿರೀಶ್ ಲಿಂಗಣ್ಣ

ಭಾರತೀಯ ಸೇನಾ ದಿನದ ಅಂಗವಾಗಿ ನಡೆಸುವ ಪರೇಡನ್ನು ಪ್ರತಿ ವರ್ಷ ದೆಹಲಿಯಲ್ಲಿ ಆಯೋಜಿಸಲಾಗುತ್ತದೆ. ಇದೇ ಮೊದಲ ಬಾರಿಗೆ ದೆಹಲಿಯ ಹೊರಗಡೆ ಈ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಮಹತ್ವದ ಆಚರಣೆಗಳನ್ನು ರಾಜಧಾನಿ ದೆಹಲಿಯಿಂದ ಹೊರಗೆ, ದೇಶದ ವಿವಿಧ ಭಾಗಗಳಲ್ಲಿ ಆಚರಿಸಬೇಕು ಎಂಬ ಕೇಂದ್ರ ಸರ್ಕಾರದ ಆಲೋಚನೆಯ ಅನುಸಾರವಾಗಿ ಬೆಂಗಳೂರಿನಲ್ಲಿ ಈ ಆಚರಣೆಯನ್ನು ಕೈಗೊಳ್ಳಲಾಗುತ್ತಿದೆ. ಸರ್ಕಾರ ಈ ಮೂಲಕ ಸೇನಾ ದಿನಾಚರಣೆಯ ಕುರಿತು ಹೆಚ್ಚಿನ ಜನರಿಗೆ ತಿಳಿಯುವಂತೆ ಮಾಡುವ ಮತ್ತು ಯುವಜನರನ್ನು ಆಕರ್ಷಿಸುವ ಉದ್ದೇಶ ಹೊಂದಿದೆ.

ಸೇನಾ ದಿನ ಹಿನ್ನೆಲೆ: 1895ರ ಏಪ್ರಿಲ್ 1ರಂದು ಭಾರತೀಯ ಸೇನೆಯನ್ನು ಅಧಿಕೃತವಾಗಿ ಸ್ಥಾಪಿಸಲಾಯಿತು. ಭಾರತ 1947ರಲ್ಲಿ ಸ್ವತಂತ್ರವಾದರೂ, ತನ್ನ ಮೊದಲ ಸೇನಾ ಮಹಾದಂಡನಾಯಕರನ್ನು 1949ರಲ್ಲಿ ಪಡೆಯಿತು. ಆ ಜನವರಿ 15ರ ಐತಿಹಾಸಿಕ ದಿನದಂದು ಜನರಲ್ ಸರ್ ಫ್ರಾನ್ಸಿಸ್ ಬುಚರ್ ಅವರು ಸೇನಾಧಿಕಾರವನ್ನು ಲೆಫ್ಟಿನೆಂಟ್ ಜನರಲ್ ಕೆ.ಎಂ. ಕಾರ್ಯಪ್ಪ ಅವರಿಗೆ ಹಸ್ತಾಂತರಿಸಿದರು.

1947ರಲ್ಲಿ ಪಶ್ಚಿಮದ ಗಡಿಯಲ್ಲಿ ಪಾಕಿಸ್ತಾನದ ವಿರುದ್ಧ ನಡೆದ ಯುದ್ಧದಲ್ಲಿ ಕಾರ್ಯಪ್ಪ ಅವರು ಭಾರತೀಯ ಸೇನೆಯನ್ನು ಮುನ್ನಡೆಸಿದ್ದರು. 1986ರ ಜನವರಿ 14ರಂದು ಜನರಲ್ ಕಾರ್ಯಪ್ಪನವರು ಫೀಲ್ಡ್ ಮಾರ್ಷಲ್ ಪದವಿಗೆ ಬಡ್ತಿ ಪಡೆದಾಗ ಈ ಅತ್ಯುನ್ನತ ಪದವಿ ಪಡೆದ ಎರಡನೇ ಯೋಧರಾದರು. ಸ್ಯಾಮ್ ಮಾಣಿಕ್ ಶಾ 1973ರಲ್ಲಿ ಈ ಪದವಿ ಪಡೆದಿದ್ದರು.

ಪರೇಡಿನ ಮಹತ್ವ: 2022ರಲ್ಲಿ ಭಾರತೀಯ ವಾಯು ದಿನ ಪರೇಡನ್ನು ಚಂಡೀಗಢದಲ್ಲಿ ಆಯೋಜಿಸಲಾಗಿತ್ತು. ಅದನ್ನು ಹಿಂಡನ್ ವಾಯುನೆಲೆಯಿಂದ ಸ್ಥಳಾಂತರಿಸಲಾಗಿತ್ತು. ಈ ಬಾರಿಯ ಸೇನಾ ದಿನಾಚರಣೆಯ ಪರೇಡನ್ನು ಮದ್ರಾಸ್ ಇಂಜಿನಿಯರ್ ಸೆಂಟರ್ ಯುದ್ಧ ಸ್ಮಾರಕದಲ್ಲಿ ಸೇನಾ ಮುಖ್ಯಸ್ಥ ಜನರಲ್ ಮನೋಜ್ ಪಾಂಡೆಯವರು ಹುತಾತ್ಮ ವೀರಯೋಧರನ್ನು ಸ್ಮರಿಸಿ, ಗೌರವಿಸುವ ಮೂಲಕ ಆರಂಭವಾಗುತ್ತದೆ. ದಕ್ಷಿಣ ಕಮಾಂಡಿನ ಪ್ರದೇಶದಲ್ಲಿ ಆಯೋಜಿಸಲಾಗುವ ಪರೇಡಿನಲ್ಲಿ ಸೈನಿಕರು ನೂತನ ಸಮವಸ್ತ್ರ ಧರಿಸಿ ಪಾಲ್ಗೊಳ್ಳಲಿದ್ದಾರೆ. ದಕ್ಷಿಣ ಕಮಾಂಡ್ 1895ರ ಏಪ್ರಿಲ್ 1ರಂದು ಚಾಲ್ತಿಗೆ ಬಂತು. ಇದರ ಮುಖ್ಯ ಕಚೇರಿ ಪುಣೆಯಲ್ಲಿದೆ. ಭಾರತದ 11 ರಾಜ್ಯಗಳು ಮತ್ತು ನಾಲ್ಕು ಕೇಂದ್ರಾಡಳಿತ ಪ್ರದೇಶಗಳು ಈ ಕಮಾಂಡಿನಡಿ ಬರುತ್ತವೆ.

ಅತ್ಯಾಧುನಿಕ ಅಸ್ತ್ರಗಳು

  • ಪ್ರಮುಖ ಯುದ್ಧ ಟ್ಯಾಂಕ್​ಗಳಾದ ಅರ್ಜುನ್ ಎಂಕೆ 1ಎ, ಭೀಷ್ಮಾ ಟಿ 90ಎಸ್, ಅಜೇಯ ಎಂಕೆ2
  • ನೆಲದಿಂದ ನೆಲಕ್ಕೆ ಚಿಮ್ಮುವ ಖಂಡಾಂತರ ಕ್ಷಿಪಣಿ, 8 ಸಾವಿರ ಕಿ.ಮೀ. ದೂರದವರೆಗೆ ಕ್ರಮಿಸುವ ಅಗ್ನಿ 5
  • ಹೈಪರ್​ಸಾನಿಕ್, ನಿರ್ಭಯ, ಬ್ರಹ್ಮೋಸ್ ಎಂ ಮುಂತಾದ ಸಿಡಿತಲೆ ಸಾಗಿಸಬಹುದಾದ ಕ್ರೂಸ್ ಕ್ಷಿಪಣಿಗಳು
  • ಅಲ್ಪ ಅಂತರ ಕ್ರಮಿಸುವ ಕ್ಷಿಪಣಿಗಳಾದ ಪ್ರಹಾರ, ಅಗ್ನಿ, ಶೌರ್ಯ
  • ಟ್ಯಾಂಕ್ ನಾಶಕ ಕ್ಷಿಪಣಿ ನಾಗಾ
  • ಧನುಶ್ ಆರ್ಟಿಲರಿ ಗನ್
  • ಬಹು ಬ್ಯಾರೆಲ್ ರಾಕೆಟ್ ಲಾಂಚರ್​ಗಳಾದ ಪಿನಾಕಾ, ಸ್ಮೆರ್ಕ್, ಬಿಎಂ21
  • ಸ್ವಯಂ ಚಾಲಿತ ಫಿರಂಗಿ ಕೆ9 ವಜ್ರಾ ಟಿ
  • ಫೀಲ್ಡ್ ಗನ್​ಗಳಾದ ಶರಂಗ್, ಎಂಕೆ
  • ನೆಲದಿಂದ ಚಿಮ್ಮುವ ಆಕಾಶ ಕ್ಷಿಪಣಿ
  • ವಿಮಾನ ನಾಶಕ ಸ್ವಯಂಚಾಲಿತ ಫಿರಂಗಿ ಶಿಲ್ಕಾ, ತುಂಗುಸ್ಕಾ, ಬೊಫೋರ್ಸ್
  • ಟ್ಯಾಂಕ್ ನಾಶಕ ಕ್ಷಿಪಣಿಗಳಾದ ಸ್ಪೈಕ್, ಕೊಂಕ್ರೂಸ್, ಮಿಲನ್, ಸ್ವಿರ್, ಕೊರ್ನೆಟ್, ಅಟಕಾ, ಧ್ರುವ ಅಸ್ತ್ರ, ಸಂಹೊ.

(ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕರು)