ನ್ಯೂಸ್

ಸಂಗೀತ ಲೋಕದಲ್ಲಿ ತನ್ಮಯರಾದ ಕಲಾಪ್ರೇಮಿಗಳು; ವಿಜಯವಾಣಿ ಆಯೋಜನೆಯ ಸಂಗೀತ ಸಂಜೆ, ಸಿತಾರ್ ಜುಗಲ್​ಬಂದಿ, ಅಭಂಗವಾಣಿ ಆಕರ್ಷಣೆ

ಹುಬ್ಬಳ್ಳಿ: ಕನ್ನಡದ ನಂ.1 ದಿನಪತ್ರಿಕೆ ‘ವಿಜಯವಾಣಿ’ ನಗರದಲ್ಲಿ ಶನಿವಾರ ಆಯೋಜಿಸಿದ್ದ ‘ಸಂಗೀತ ಸಂಜೆ’ ಅಪಾರ ಸಂಖ್ಯೆಯಲ್ಲಿ ಸಂಗೀತ ಪ್ರೇಮಿಗಳನ್ನು ಆಕರ್ಷಿಸಿ, ಒಂದು ಅವಿಸ್ಮರಣೀಯ ಕಾರ್ಯಕ್ರಮವಾಗಿ ದಾಖಲಾಯಿತು.

ಖ್ಯಾತ ಕಲಾವಿದರ ಸಂಗೀತ ಕಛೇರಿಗೆ ಸವಾಯಿ ಗಂಧರ್ವ ಸಭಾಭವನ ಕಿಕ್ಕಿರಿದು ತುಂಬಿತ್ತು. ಕಲಾವಿದರು ತಮ್ಮ ಖ್ಯಾತಿಗೆ ತಕ್ಕಂತೆ ಅದ್ಭುತ ಪ್ರದರ್ಶನ ನೀಡಿ ಸುಂದರ ಸಂಜೆಯನ್ನು ಆಹ್ಲಾದಕರವಾಗಿಸಿದರು. ಕಲಾ ಪ್ರೇಮಿಗಳು ಸಂಗೀತ ಲೋಕದಲ್ಲಿ ಮೂರು ತಾಸು ತನ್ಮಯರಾದರು.

ಹಿಂದುಸ್ತಾನಿ ಶಾಸ್ತ್ರೀಯ ಸಂಗೀತದ ಮೇರು ಗಾಯಕ ಪಂ. ಜಯತೀರ್ಥ ಮೇವುಂಡಿ ಹಾಗೂ ಸಿತಾರ್ ವಾದಕರಾದ ಉಸ್ತಾದ್ ರಫೀಕ್ ಖಾನ್ ಹಾಗೂ ಇವರ ಶಿಷ್ಯ ಯುವ ಪ್ರತಿಭೆ ಅಂಕುಶ್ ನಾಯಕ ಅವರ ಸಿತಾರ ಜುಗಲ್ ಬಂದಿಗೆ ಜನರು ಪರವಶರಾದರು. ಸಿತಾರ್ ವಾದನಕ್ಕೆ ಯುವ ಕಲಾವಿದ ಧಾರವಾಡದ ಹೇಮಂತ ಜೋಶಿ ಸೊಗಸಾಗಿ ತಬಲಾ ಸಾಥ್ ನೀಡಿ ಪ್ರೇಕ್ಷಕರ ಮೆಚ್ಚುಗೆ ಗಳಿಸಿದರು.

ಪಂ. ಜಯತೀರ್ಥ ಮೇವುಂಡಿ ಜೈ ಜೈ ರಾಮ ಕೃಷ್ಣ ಹರೆ.... ಹಾಡಿನ ಮೂಲಕ ಸಂಗೀತ ಕಛೇರಿ ಆರಂಭಿಸಿದರು. ಹರಿ ಭಜನೆ ಮಾಡೋ ನಿರಂತರಾ..., ಅಕ್ಕಿ ಅಡಕಿ ತೆಂಗಿನಕಾಯಿ ಕಂಡೆನವ್ವ- ಅಕ್ಕ ಕೇಳವ್ವ ನಾನೊಂದ ಕನಸ ಕಂಡೆ... ವಿಠ್ಠಲಯ್ಯ.... ವಿಠ್ಠಲ, ವಿಠ್ಠಲ, ಭಜಿಸುವೆ ನಿನ್ನನು, ಮಾಹೆ ರ ಫಂಡರಿ...ಶಂಭೋ... ಶಿವಶಿವ ಶಿವ ಶಂಭೋ... ಕಾನಡಾ ್ಙಾಜಾ ಪಂಢರಿಚಾ..., ಬಾಜೆರೆ ಮುರಲಿಯಾ ಬಾಜೆ.... ಮುಂತಾದ ಹಾಡುಗಳ ಮೂಲಕ ಗಾನಲಹರಿ ಹರಿಸಿದರು. ಪ್ರೇಕ್ಷಕರು ತನ್ಮಯರಾಗಿ ಆಲಿಸುತ್ತಿದ್ದರು. ಪಂ. ಮೇವುಂಡಿ ಅವರು ಪ್ರೇಕ್ಷಕರ ಅಪೇಕ್ಷಿತ ಕೆಲವು ಹಾಡುಗಳನ್ನೂ ಹಾಡಿದರು. ಹಿರಿಯರಾದ ನರೇಂದ್ರ ನಾಯಕ ಅವರ ಹಾಮೋನಿಯಂ ಸಾಥ್ ಕೇಳುಗರ ಗಮನ ಸೆಳೆಯಿತು. ತಬಲಾದಲ್ಲಿ ರಾಜೇಶ ಭಾಗವತ, ರಿದಂ ಇನ್​ಸ್ಟು›ಮೆಂಟ್ಸ್ ಸೂರ್ಯಕಾಂತ್ ಗೋಪಾಲ ಸುರ್ವೆ, ಪಖ್ವಾಜ್​ನಲ್ಲಿ ಶ್ರೀದತ್ತ ಪ್ರಭು, ಪಂ. ಜಯತೀರ್ಥ ಅವರ ಪುತ್ರ ಲಲಿತ ಮೇವುಂಡಿ, ಶ್ರೀವತ್ಸ ಅವರು ಅತ್ಯುತ್ತಮ ಸಾಥ್ ನೀಡಿ ಸಂಗೀತ ಕಛೇರಿ ಮೆರಗು ಹೆಚ್ಚಿಸಿದರು.

ಸಂಗೀತಕ್ಕೆ ಕರ್ನಾಟಕದ ಕೊಡುಗೆ ಅಪಾರ: ಹಿಂದುಸ್ತಾನಿ ಸಂಗೀತಕ್ಕೆ ಕರ್ನಾಟಕದ, ಅದರಲ್ಲೂ ಉತ್ತರ ಕರ್ನಾಟಕದ ಕೊಡುಗೆ ಅಪಾರ. ಸವಾಯಿ ಗಂಧರ್ವರು, ಗಂಗೂಬಾಯಿ ಹಾನಗಲ್, ಭೀಮಸೇನ ಜೋಶಿ ಇನ್ನೂ ಅನೇಕರು ಸಂಗೀತ ಕ್ಷೇತ್ರಕ್ಕೆ ನೀಡಿರುವ ಕೊಡುಗೆಯನ್ನು ಯಾರೂ ಮರೆಯಲು ಸಾಧ್ಯವಿಲ್ಲ. ಸಂಗೀತವು ಮನಸಿಗೆ ಮುದ ನೀಡುತ್ತದೆ. ಇಂದಿನ ಒತ್ತಡದ ಜೀವನಶೈಲಿಗೆ ಸಂಗೀತದಿಂದ ಪರಿಹಾರ ಸಿಗುತ್ತದೆ ಎಂದು ವಿಆರ್​ಎಲ್ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕರಾದ ಡಾ. ಆನಂದ ಸಂಕೇಶ್ವರ ಹೇಳಿದರು. ಹುಬ್ಬಳ್ಳಿಯಲ್ಲಿ ಇದೇ ಮೊದಲ ಬಾರಿಗೆ ‘ವಿಜಯವಾಣಿ’ಯಿಂದ ಇಂಥ ಸಂಗೀತ ಸಂಜೆ ಕಾರ್ಯಕ್ರಮ ಆಯೋಜಿಸಿದ್ದೇವೆ. ಕೆಲ ದಿನಗಳ ಹಿಂದೆ ಬೆಂಗಳೂರು, ಮೈಸೂರು ಹಾಗೂ ಬೆಳಗಾವಿಯಲ್ಲಿ ಯಶಸ್ವಿಯಾಗಿ ನಡೆಸಿದ್ದೇವೆ. ವಿಜಯವಾಣಿಯಿಂದ ವರ್ಷವಿಡೀ ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದ್ದೇವೆ. ಪ್ರಾಪರ್ಟಿ ಎಕ್ಸ್​ಪೋ, ಎಜುಕೇಶನಲ್ ಎಕ್ಸ್​ಪೋ, ಆಟೋಮೊಬೈಲ್ ಎಕ್ಸ್​ಪೋ, ಫರ್ನಿಚರ್ ಎಕ್ಸ್​ಫೋ, ವಿಜಯೋತ್ಸವ ಇತ್ಯಾದಿ ಕಾರ್ಯಕ್ರಮ ಸಂಘಟಿಸುತ್ತ ಬಂದಿದ್ದೇವೆ. ಇಂಥ ಹಲವಾರು ಕಾರ್ಯಕ್ರಮಗಳು ನಿರಂತರವಾಗಿ ನಡೆಯಲಿವೆ ಎಂದರು.

ಸಂಗೀತ ಸಂಜೆ ಕಾರ್ಯಕ್ರಮ ಉದ್ಘಾಟಿಸಿದ ಹು-ಧಾ ಪೊಲೀಸ್ ಆಯುಕ್ತ ಎನ್. ಶಶಿಕುಮಾರ ಮಾತನಾಡಿ, ವಿಜಯವಾಣಿ ಪತ್ರಿಕೆಯ ವಿಶೇಷ, ವಿನೂತನ ಪ್ರಯತ್ನಗಳನ್ನು ಇಲ್ಲಿಯವರೆಗೆ ನಾನು ಓದುಗನಾಗಿ ನೋಡಿದ್ದೇನೆ. ಇಂದು ಅವರು ಆಯೋಜಿಸಿರುವ ಸಂಗೀತ ಸಂಜೆಯಂಥ ಸದಭಿರುಚಿ ಹಾಗೂ ಅರ್ಥಪೂರ್ಣ ಕಾರ್ಯಕ್ರಮದಲ್ಲಿ ನೇರವಾಗಿ ಭಾಗವಹಿಸಿರುವುದಕ್ಕೆ ಖುಷಿಯಾಗಿದೆ ಎಂದರು. ಮುಖ್ಯ ಅತಿಥಿಗಳಾಗಿದ್ದ ಶಿಕ್ಷಣ ತಜ್ಞ ನರೇಂದ್ರ ನಾಯಕ ಮಾತನಾಡಿದರು. ಶ್ರೀ ದುರ್ಗಾ ಡೆವಲಪರ್ಸ್ ಆಂಡ್ ಪ್ರಮೋಟರ್ಸ್ ಎಂಡಿ ವೀರೇಶ ಉಂಡಿ ಇದ್ದರು. ಕಲಾವಿದರಿಗೆ ಹಾಗೂ ಪ್ರಾಯೋಜಕರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಶ್ರೀ ದುರ್ಗಾ ಡೆವಲಪರ್ಸ್ ಆಂಡ್ ಪ್ರಮೋಟರ್ಸ್ ಮುಖ್ಯ ಪ್ರಾಯೋಜಕತ್ವದಲ್ಲಿ ಸಂಗೀತ ಸಂಜೆ ಆಯೋಜಿಸಲಾಗಿತ್ತು. ಕೊರವಿ ಗ್ರೀನ್ ಸಿಟಿ, ಪಾಟೀಲ ಹೀಯರಿಂಗ್ ವರ್ಟಿಗೊ ಆಂಡ್ ಸ್ಪೀಚ್ ಸೆಂಟರ್, ಎಚ್​ಸಿಜಿ ಸುಚಿರಾಯು ಆಸ್ಪತ್ರೆ, ಶ್ರೀ ಸನ್ನಿಧಿ (ದತ್ತ ತಾಯಿ) ಆಶ್ರಮ, ಹಾಗೂ ಸಾಯಿರಾಮ ಡೆವಲಪರ್ಸ್ ಆಂಡ್ ಬಿಲ್ಡರ್ಸ್ ಸಹ ಪ್ರಯೋಜಕತ್ವ ವಹಿಸಿದ್ದವು. ವಿಜಯವಾಣಿ ಹುಬ್ಬಳ್ಳಿ ಸ್ಥಾನಿಕ ಸಂಪಾದಕ ಪ್ರಕಾಶ ಶೇಟ್ ಸ್ವಾಗತಿಸಿದರು. ಸತೀಶ ಭಟ್ ಮೂರೂರ ನಿರೂಪಿಸಿದರು.