ನ್ಯೂಸ್

ಈಜುಕೊಳದಲ್ಲಿ ಮೋಜು ಮಾಡುತ್ತಿದ್ದ ಬ್ಯೂಟಿ ಕ್ವೀನ್-​ ಸ್ನೇಹಿತ ಸಮೇತ ಸೀದಾ ಕ್ವಾರಂಟೈನ್​ಗೆ ಒಯ್ದ ಪೊಲೀಸರು!

suchetana

ಸೆಬುವಾನಾ (ಫಿಲಿಪ್ಪೀನ್ಸ್​): ನಿಯಮ ಅಂದರೆ ನಿಯಮ ಅಷ್ಟೇ. ಅದನ್ನು ಯಾರೇ ಉಲ್ಲಂಘಿಸಲಿ, ಅವರಿಗೆ ಶಿಕ್ಷೆ ಕಟ್ಟಿಟ್ಟದ್ದೇ. ಕಾನೂನು ಎಲ್ಲರಿಗೂ ಒಂದೇ ಎನ್ನುವುದು ಅದಕ್ಕೇ ತಾನೆ? ಲಾಕ್​ಡೌನ್​ ನಿಯಮಕ್ಕೂ ಇದು ಅನ್ವಯ.

ಅದೇ ನಿಯಮ ಇದೀಗ ಫಿಲಿಪ್ಪೀನ್ಸ್​ ದೇಶದ ಸೆಬುವಾನಾ ಪ್ರಾಂತ್ಯದ ಬ್ಯೂಟಿ ಕ್ವೀನ್​ಗೂ ಮುಳುವಾಗಿದೆ. ತಾನು ಸುರಸುಂದರಿ ಎಂಬ ಬಿರುದು ಇರುವವಳು. ಏನು ಮಾಡಿದರೂ ನಡೆಯತ್ತೆ ಎಂದುಕೊಂಡಿದ್ದ ಈ ಬೆಡಗಿ ಇದೀಗ ತಾನು ಮಾಡಿದ ತಪ್ಪಿನಿಂದ ಕ್ವಾರಂಟೈನ್​ ಗೃಹದಲ್ಲಿ ಇರಬೇಕಾದ ಪರಿಸ್ಥಿತಿ ತಲೆದೋರಿದೆ.

ಈ ಸುಂದರಿಯ ಹೆಸರು 26 ವರ್ಷದ ಮರಿಯಾ ಗಿಗಾಂಟೆ. ಈಗೆ ತನ್ನ ಸ್ನೇಹಿತ 35 ವರ್ಷದ ಜೇವಿಯರ್ ಫಿಲೋಸಾ ಕ್ಯಾಸ್ಟ್ರೊ ಜತೆ ಈಜುಕೊಳಕ್ಕೆ ಹೋಗಿ ಸ್ಚಚ್ಛಂದವಾಗಿ ವಿಹರಿಸುತ್ತಿದ್ದಳು.

ಈ ಪ್ರಾಂತ್ಯದಲ್ಲಿಯೂ ಲಾಕ್​ಡೌನ್​ ಹೇರಲಾಗಿದ್ದು, ಕಟ್ಟುನಿಟ್ಟಿನ ಕಠಿಣ ನಿಯಮಾವಳಿಗಳನ್ನು ರೂಪಿಸಲಾಗಿದೆ. ಆದರೆ ಇದಕ್ಕೆ ಕ್ಯಾರೇ ಎನ್ನದ ಚೆಲುವೆ ತನ್ನ ಬಾಯ್​ಫ್ರೆಂಡ್​ ಜತೆ ಅಲ್ಲಿಗೆ ಹೋಗಿದ್ದಳು. ಅಷ್ಟಕ್ಕೂ ಈಜುಕೊಳಕ್ಕೆ ಹೋಗುವ ಮಾರ್ಗಮಧ್ಯೆಯೂ ಹಲವಾರು ಸುಳ್ಳುಗಳನ್ನು ಹೇಳಿಕೊಂಡು ಹೋಗಿದ್ದಳೀಕೆ.

ತನ್ನ ಸ್ನೇಹಿತನ ಜತೆ ಒಂಟಿಯಾಗಿ ಈಜುಕೊಳದಲ್ಲಿ ವಿಹರಿಸುವ ಇಚ್ಛೆಯಿಂದಾಗಿ ತನಗೆ ತುರ್ತು ಕಾರ್ಯ ಇರುವಂತೆ ದಾಖಲೆಗಳನ್ನು ಸೃಷ್ಟಿಸಿ ಮಾರ್ಗಮಧ್ಯೆ ಪೊಲೀಸರಿಗೆ ನೀಡಿದ್ದಳು. ಗಡಿ ನಿಯಂತ್ರಣ ಚೆಕ್​ಪೋಸ್ಟ್​ ಬಳಿಯೂ ಈ ದಾಖಲೆಗಳನ್ನೇ ತೋರಿಸಿ ಈಜುಕೊಳದವರೆಗೆ ಹೋಗುವಲ್ಲಿ ಯಶಸ್ವಿಯೂ ಆಗಿದ್ದಳು.

ಆದರೆ ಪೊಲೀಸರು ಬಿಟ್ಟಾರೆಯೇ? ಇವಳ ಮತ್ತು ಸ್ನೇಹಿತನ ನಡವಳಿಕೆ ಅವರಿಗೆ ಸಂಶಯ ಬರಿಸಿದೆ. ಆದ್ದರಿಂದ ಅವರ ಹಿಂದೆಯೇ ಬೆನ್ನುಹತ್ತಿದ ಪೊಲೀಸರಿಗೆ ವಾಸ್ತವದ ಅರಿವಾಗಿದೆ. ಇಬ್ಬರೂ ಈಜುಕೊಳದಲ್ಲಿ ಮೋಜು ಮಾಡುತ್ತಿದ್ದಾಗ ಇಬ್ಬರನ್ನೂ ಬಂಧಿಸಿದ್ದಾರೆ.

ಅವರ ಮೇಲೆ ಅಲ್ಲಿಯ ವಿವಿಧ ಕಾನೂನಿನ ಅನ್ವಯ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ. ಹಲವಾರು ಊರುಗಳನ್ನು ದಾಟಿ ಅವರು ಬಂದಿರುವ ಕಾರಣ, ಸದ್ಯ ಇಬ್ಬರನ್ನೂ ಕ್ವಾರಂಟೈನ್​ನಲ್ಲಿ ಇಡಲಾಗಿದೆ. ಕ್ವಾರಂಟೈನ್​ ಮುಗಿದ ಮೇಲೆ ಕಾನೂನು ಕ್ರಮ ಜರುಗಿಸುವುದಾಗಿ ಪೊಲೀಸರು ತಿಳಿಸಿದ್ದಾರೆ.

ಈ ನಡುವೆಯೇ ಕೋರ್ಟ್​ ಮೊರೆ ಹೋಗಿದೆ ಈ ಜೋಡಿ. ಸದ್ಯ ಅದರ ವಿಚಾರಣೆ ನಡೆಯುವ ಸಾಧ್ಯತೆ ಇಲ್ಲ ಎನ್ನಲಾಗಿದೆ! (ಏಜೆನ್ಸೀಸ್​)