ಬೆಂಗಳೂರು: ಮದ್ಯಸೇವನೆಗೆ ಹಣ ಇಲ್ಲದೆ ಇದ್ದಾಗ ಮೈಸೂರಿನಿಂದ ರೈಲಿನಲ್ಲಿ ಬೆಂಗಳೂರಿಗೆ ಬಂದು ಬಾಡಿಗೆ ಬೈಕ್ನಲ್ಲಿ ಸುತ್ತಾಡಿ ಕಳ್ಳತನ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಚೆನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸರು ಬಂಧಿಸಿದ್ದಾರೆ.
ಮೈಸೂರು ಮೂಲದ ದಿಲೀಪ್ (34) ಮತ್ತು ಮಸ್ತಾನ್ (38) ಬಂಧಿತರು. ಮಾ.2ರ ಮಧ್ಯಾಹ್ನ 11 ಗಂಟೆಯಲ್ಲಿ ಶ್ರೀನಗರದ ಕಾವೇರಣ್ಣ ರಸ್ತೆ ಎಸ್ಎಲ್ಎನ್ ಎಂಟರ್ಪ್ರೖೆಸಸ್ ಅಂಗಡಿ ಮಾಲೀಕ ಲೋಕೇಶ್ ಬಳಿಗೆ ಬುಕ್ ಖರೀದಿ ನೆಪದಲ್ಲಿ ಕಳ್ಳನೊಬ್ಬ ಬಂದಿದ್ದ. 6 ನೋಟ್ಬುಕ್ ಖರೀದಿಸಿ 2 ಸಾವಿರ ರೂ. ಕೊಟ್ಟು, ಚಿಲ್ಲರೆ ಪಡೆದು ಹೋಗಿದ್ದ. 10 ನಿಮಿಷ ಬಿಟ್ಟು ವಾಪಸ್ ಬಂದು ಇದು ಬೇಡ.. ಬೇರೆ ನೋಟ್ಬುಕ್ ಕೊಡಿ ಎಂದಿದ್ದ.
ಆಗ ಲೋಕೇಶ್, ಪಕ್ಕದಲ್ಲೇ ಇದ್ದ ಗೋದಾಮಿನಿಂದ ನೋಟ್ಬುಕ್ ತಂದು ಕೊಟ್ಟಿದ್ದರು. ಅಷ್ಟೊತ್ತಿಗೆ ಮತ್ತೊಬ್ಬ ಬಂದು ಥರ್ವಕೋಲ್ ಶೀಟ್ ಬೇಕೆಂದು ಕೇಳಿದ್ದ. ಕೊಟ್ಟಾಗ, ಇನ್ನೂ ದೊಡ್ಡದಾದ ಥರ್ವಕೋಲ್ ಕೊಡುವಂತೆ ಕೇಳಿದ್ದ. ಆಗ ಅದನ್ನು ತರಲು ಲೋಕೇಶ್ ಗೋದಾಮಿಗೆ ತೆರಳಿದಾಗ ಅಂಗಡಿಯಲ್ಲಿದ್ದ 50 ಸಾವಿರ ರೂ. ದೋಚಿ ಆರೋಪಿಗಳು ಬೈಕ್ನಲ್ಲಿ ಪರಾರಿಯಾಗಿದ್ದರು. ಈ ಬಗ್ಗೆ ಲೋಕೇಶ್ ದೂರು ನೀಡಿದ್ದರು. ಪೊಲೀಸರು ಸ್ಥಳೀಯ ಸಿಸಿ ಕ್ಯಾಮರಾ ದೃಶ್ಯಾವಳಿ ಆಧರಿಸಿ ತನಿಖೆ ನಡೆಸಿದಾಗ ಆರೋಪಿಗಳು ಸೆರೆಸಿಕ್ಕಿದ್ದಾರೆ.
ಅಪರಾಧ ಕೃತ್ಯವನ್ನೇ ವೃತ್ತಿ ಮಾಡಿಕೊಂಡಿದ್ದ ಆರೋಪಿಗಳು, ಮದ್ಯಸೇವನೆಗೆ ಹಣ ಇಲ್ಲದೆ ಇದ್ದಾಗ ಬೆಳಗ್ಗೆ ರೈಲಿನಲ್ಲಿ ಬೆಂಗಳೂರಿಗೆ ಬರುತ್ತಿದ್ದರು. ಬಳಿಕ ಬಾಡಿಗೆ ಬೈಕ್ ಪಡೆದು ನಗರದ ಎಲ್ಲೆಡೆ ಸುತ್ತಾಡುತ್ತಿದ್ದರು. ಮಾಲೀಕರು ಒಂಟಿಯಾಗಿ ಇರುವ ಅಂಗಡಿಗಳನ್ನೇ ಗುರುತಿಸಿ ವ್ಯಾಪಾರದ ಸೋಗಿನಲ್ಲಿ ಹೋಗುತ್ತಿದ್ದರು. ಅಂಗಡಿಯಲ್ಲಿ ಇಲ್ಲದ ವಸ್ತುಗಳನ್ನು ಕೇಳುತ್ತಿದ್ದರು. ಮಾಲೀಕ, ಗೋದಾಮು ಅಥವಾ ಬೇರೆ ಕಡೆಯಲ್ಲಿ ತಂದು ಕೊಡಲು ಹೋದಾಗ ಕ್ಯಾಷ್ ಬಾಕ್ಸ್ನಲ್ಲಿದ್ದ ಹಣ ಮತ್ತು ಬೆಲೆ ಬಾಳುವ ವಸ್ತುಗಳನ್ನು ದೋಚಿ ಪರಾರಿಯಾಗುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಮೈಸೂರಿನಲ್ಲಿ ಮದ್ಯದ ಪಾರ್ಟಿ
ಬೆಂಗಳೂರಿನಲ್ಲಿ ಹಣ ದೋಚಿದ ಮೇಲೆ ಆರೋಪಿಗಳು ವಾಪಸ್ ರೈಲಿನಲ್ಲಿ ಮೈಸೂರು ತಲುಪುತ್ತಿದ್ದರು. ಅಲ್ಲಿ ಒಂದೆಡೆ ಮದ್ಯದ ಪಾರ್ಟಿ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಗಳನ್ನು ತೀವ್ರ ವಿಚಾರಣೆ ನಡೆಸುತ್ತಿದ್ದು, ಈ ಹಿಂದೆ ಎಲ್ಲೆಲ್ಲಿ ಕೃತ್ಯ ಎಸಗಿದ್ದಾರೆ ಎಂಬ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ ಎಂದಿದ್ದಾರೆ.