ನ್ಯೂಸ್

ಕಾಟಿಪಳ್ಳದಲ್ಲಿ ಜಲೀಲ್ ಹತ್ಯೆ ಪ್ರಕರಣ; ಮೂವರು ಆರೋಪಿಗಳ ಬಂಧನ

ಮಂಗಳೂರು: ಕಾಟಿಪಳ್ಳದಲ್ಲಿ ನಡೆದ ಜಲೀಲ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಶೈಲೇಶ್, ಪವನ್, ನವೀನ್ ಬಂಧಿತ ಆರೋಪಿಗಳು. ಸದ್ಯ ಬಂಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ ಎಂದು ಮಂಗಳೂರು ಪೊಲೀಸ್ ಕಮೀಷನರ್ ಎನ್​.ಶಶಿಕುಮಾರ್ ತಿಳಿಸಿದ್ದಾರೆ.

ಬಂಧಿತ ಆರೋಪಿಗಳನ್ನು 14 ದಿನ ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ. ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಲ್ಲಿ ಇಬ್ಬರು ನೇರವಾಗಿ ಭಾಗಿಯಾಗಿದ್ದು, ಇನ್ನೋರ್ವ ಅವರನ್ನು ಬೈಕ್​ನಲ್ಲಿ ಪರಾರಿಯಾಗಲು ನೆರವಾಗಿದ್ದ ಎಂದು ಎನ್​.ಶಶಿಕುಮಾರ್ ಮಾಹಿತಿ ನೀಡಿದ್ದಾರೆ.

ನಿನ್ನೆ ರಾತ್ರಿ (ಡಿ.25) ಆರೋಪಿಗಳನ್ನು ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ. ಹೀಗಾಗಿ ಆರೋಪಿಗಳ ಗುರುತು ಹಾಗೂ ಹೆಚ್ಚಿನ ಮಾಹಿತಿಯನ್ನು ಬಹಿರಂಗ ಪಡಿಸಲು ಸಾಧ್ಯವಿಲ್ಲ. ಕೊಲೆಗೆ ಕಾರಣ ಏನು ಅನ್ನೋದನ್ನು ಪೂರ್ಣ ತನಿಖೆ ಬಳಿಕ ಬಹಿರಂಗ ಪಡಿಸುತ್ತೇವೆ ಎಂದು ಕಮೀಷನರ್ ಎನ್.ಶಶಿಕುಮಾರ್ ಸ್ಪಷ್ಟನೆ ನೀಡಿದರು.

ಬಂಧಿತ ಮೂವರಲ್ಲಿ ಇಬ್ಬರು ಈ ಹಿಂದೆ ಹಲವು ಪ್ರಕರಣಗಳಲ್ಲಿ ತೊಡಗಿಸಿಕೊಂಡಿದ್ದಾರೆ. 2021ರಲ್ಲಿ ದಾಖಲಾದ ಕೊಲೆ ಯತ್ನ ಕೇಸ್​ನಲ್ಲೂ ಅವರ ಹೆಸರು ಉಲ್ಲೇಖವಾಗಿತ್ತು. ಜಲೀಲ್ ಕೊಲೆ ಕೇಸ್​ನಲ್ಲಿ ಮಹಿಳೆಯರೂ ಸೇರಿ 10-12 ಜನರನ್ನ ವಶಕ್ಕೆ ಪಡೆದಿದ್ದೆವು. ಜಲೀಲ್ ಕುಟುಂಬಸ್ಥರನ್ನೂ ವಿಚಾರಣೆ ನಡೆಸಿದ್ದೇವೆ. ಪ್ರಸ್ತುತ 3 ಜನರನ್ನ ಮಾತ್ರ ಬಂಧನ ಮಾಡಲಾಗಿದೆ ಎಂದು ಹೇಳಿದರು.

ಕಾಟಿಪಳ್ಳದಲ್ಲಿ ಕೊಲೆಯಾಗುತ್ತಿದ್ದಂತೆ ಜಲೀಲ್ ಮನೆ ಬಳಿ ಸಾರ್ವಜನಿಕರು ಮೃತದೇಹ ಇಟ್ಟು ಪ್ರತಿಭಟನೆ ನಡೆಸಿದ್ದರು. ಪೊಲೀಸರಿಗೆ ಆರೋಪಿಗಳನ್ನು 24 ಗಂಟೆಯೊಳಗೆ ಬಂಧಿಸುವ ಗಡುವು ನೀಡಿದ್ದರು. ಆರೋಪಿಗಳ ಪತ್ತೆಗೆ ಎಂಟು ಅಧಿಕಾರಿಗಳ ತಂಡ ರಚಿಸಿ ಆರೋಪಿಗಳ ಪತ್ತೆ ಕಾರ್ಯ ನಡೆದಿತ್ತು. ಹತ್ಯೆಗೆ ಸಂಬಂಧಿಸಿದಂತೆ ಎಲ್ಲಾ ಆಯಾಮಗಳಿಂದಲೂ ತನಿಖೆ ನಡೆಸಲಾಗುವುದು ಎಂದು ಮಂಗಳೂರು ಪೋಲೀಸ್ ಕಮಿಷನರ್ ಎನ್.ಶಶಿಕುಮಾರ್ ಮಾಹಿತಿ ನೀಡಿದ್ದಾರೆ.