ಬೆಂಗಳೂರು: ಮನೆಯಿಂದ ಹಣ ತಂದು ಕೊಡು... ಇಲ್ಲವಾದ್ರೆ ನಿನ್ನ ತಂದೆ-ತಾಯಿಯ ಕೈಕಾಲು ಮುರಿಯುತ್ತೇವೆ ಎಂದು ಸ್ನೇಹಿತರಿಬ್ಬರು ಶಾಲಾ ಬಾಲಕನಿಗೆ ಬೆದರಿಕೆ ಹಾಕಿದ್ದಾರೆ. ಹೆದರಿದ ಬಾಲಕ ಮನೆಯಲ್ಲಿದ್ದ ಒಡವೆ ಹಾಗೂ ಹಣ ಕದಿಯುವ ಕೆಲಸ ಮಾಡಿದ್ದಾನೆ. ಇದೀಗ ಹಣಕ್ಕೆ ಪೀಡಿಸುತ್ತಿದ್ದ ಬಾಲಕನ ಸಹಪಾಠಿಗಳನ್ನು ಪೊಲೀಸರು ಬಂಧಿಸಿದ್ದಾರೆ.
16 ವರ್ಷದ ಸಂತ್ರಸ್ತ ಬಾಲಕನಿಗೆ ಶಾಲೆಯಲ್ಲಿ ಯಾಹ್ಯಾ ಹಾಗೂ ರಾಹಿಲ್ ಎಂಬ ಸ್ನೇಹಿತರಿದ್ದರು. ಇವರ ಬಳಿ ನನ್ನ ತಂದೆ ತುಂಬಾ ಶ್ರೀಮಂತರು. ನಮ್ಮ ಮನೆಯಲ್ಲಿ ಚಿನ್ನ, ಕಾರು, ದೊಡ್ಡ ಮನೆ ಇದೆಯೆಂದು ತನ್ನ ಶ್ರೀಮಂತಿಕೆಯನ್ನು ಹೇಳಿಕೊಂಡಿದ್ದಾನೆ. ಇದನ್ನೇ ಬಂಡವಾಳವಾಗಿಸಿಕೊಂಡ ಆತನ ಸ್ನೇಹಿತರು ಹಣ ಸುಲಿಗೆ ಮಾಡಲು ಯೋಜನೆ ಹಾಕಿಕೊಂಡಿದ್ದಾರೆ. ಇದಕ್ಕಾಗಿ ಯಾಹ್ಯಾ ಹಾಗೂ ರಾಹಿಲ್ ಎಂಬ ಇಬ್ಬರನ್ನು ಕರೆತಂದು ಬಾಲಕನಿಗೆ ಬೆದರಿಕೆ ಹಾಕಿದ್ದಾರೆ.
ಯಾಹ್ಯಾ ಹಾಗೂ ರಾಹಿಲ್ ಬಾಲಕನಲ್ಲಿ ನಾವು ರೌಡಿಗಳು. ಹಣ ತಂದು ಕೊಡದೇ ಹೋದರೆ ನಿನ್ನ ಪೋಷಕರ ಕೈಕಾಲು ಮುರಿಯುವುದಾಗಿ ಹೇಳಿದ್ದಾರೆ. ಬೆದರಿಕೆ ಹೆದರಿದ ಬಾಲಕ ತಂದೆಗೆ ಗೊತ್ತಾಗದಂತೆ ಮನೆಯಲ್ಲಿದ್ದ 2000 ರೂ. ತಂದು ಕೊಟ್ಟಿದ್ದಾನೆ. ಇದಾಗಿಯೂ ಕೆಲವು ತಿಂಗಳು ಹಣಕ್ಕಾಗಿ ಸಹಪಾಠಿಗಳು ಪೀಡಿಸುತ್ತಿದ್ದರು. ಈ ವೇಳೆ ನನ್ನ ಬಳಿ ಹಣ ಇಲ್ಲ ಎಂದು ಹೇಳಿದಾಗ, ಬಾಲಕನ ಕೆನ್ನೆಗೆ ಹೊಡೆದು ಜೀವ ತೆಗೆಯೋದಾಗಿ ಸಹಪಾಠಿಗಳು ಮಜ್ಜು ಹಾಗೂ ಸೈಫ್ ಬಳಿ ಬೆದರಿಕೆ ಹಾಕಿಸಿದ್ದಾರೆ.
ತನ್ನ ಬಳಿ ಹಣ ಇಲ್ಲ ಎಂದಾಗ ಅವಾಚ್ಯ ಶಭ್ದಗಳಿಂದ ಬೈದು ಚಿನ್ನಾಭರಣ ತರಲು ಹೇಳಿದ್ದ ಆರೋಪಿಗಳು ಹೇಳಿದ್ದಾರೆ. ಇದರಿಂದ ಹೆದರಿದ ಬಾಲಕ 2 ಉಂಗುರವನ್ನು ಮಜ್ಜು ಎಂಬಾತನಿಗೆ ನೀಡಿದ್ದಾನೆ. ಮನೆಯಲ್ಲಿ ಚಿನ್ನ ಹಾಗೂ ಹಣ ಕಳವಾಗುತ್ತಿರುವುದು ನೋಡಿ ಅನುಮಾನಗೊಂಡ ತಂದೆ ಅಬ್ದುಲ್ ಸುಬಾನ್, ಮನೆಯವರನ್ನು ಹಾಗೂ ಮಗನನ್ನು ವಿಚಾರಿಸಿದ್ದಾರೆ. ಈ ವೇಳೆ ಅಸಲಿ ಸಂಗತಿ ಬೆಳಕಿಗೆ ಬಂದಿದೆ.
ಈ ಹಿಂದೆ ಮಗನ ಆನ್ಲೈನ್ ಕ್ಲಾಸ್ಗೆಂದು ತಂದೆ ಅಬ್ದುಲ್ ಸುಬಾನ್, ಮೊಬೈಲ್ ಫೋನ್ ಕೊಡಿಸಿದ್ದರು. ಇದನ್ನು ತೆಗೆದು ಪರಿಶೀಲಿಸಿದಾಗ ಇನ್ಸ್ಸ್ಟಾಗ್ರಾಂನಲ್ಲಿಯೂ ಬೆದರಿಕೆ ಒಡ್ಡಿರುವುದು ಗೊತ್ತಾಗಿದೆ. ನಂತರ ಹೆಬ್ಬಾಳ ಪೊಲೀಸ್ ಠಾಣೆಯಲ್ಲಿ ಆರೋಪಿಗಳ ವಿರುದ್ಧ ಬಾಲಕನ ತಂದೆ ದೂರು ದಾಖಲಿಸಿದ್ದಾರೆ. ಇದೀಗ ಪೊಲೀಸರು ಮಜ್ಜು ಎಂಬ ಆರೋಪಿಯನ್ನು ಬಂಧಿಸಿದ್ದಾರೆ.