Marriage: ಇನ್ನೇನು ಮದುವೆಗೆ ಕೆಲವೇ ಗಂಟೆಗಳು ಬಾಕಿ ಉಳಿದಿದೆ ಎನ್ನುವುದರೊಳಗೆ ವರನೂ ಇಲ್ಲ, ವರನ ಹೆತ್ತವರೂ ಪತ್ತೆಯಿಲ್ಲ ಎಂಬ ಸುದ್ದಿ ತಿಳಿದು ವಧು ಕುಟುಂಬಸ್ಥರು ಅಕ್ಷರಶಃ ಕುಸಿದು ಬಿದ್ದ ಘಟನೆ ತೆಲಂಗಾಣದಲ್ಲಿ ವರದಿಯಾಗಿದೆ.
ಇದನ್ನೂ ಓದಿ: ಟ್ರಂಪ್ ಭೇಟಿ ವೇಳೆ ಹೆಣ್ಣುಮಕ್ಕಳ ವಿಭಿನ್ನ ನೃತ್ಯ!? ವೈರಲ್ ವಿಡಿಯೋ ಕಂಡ ನೆಟ್ಟಿಗರು ಅಚ್ಚರಿ | Trump Visit
ಮದುವೆ ಸಂಬಂಧ ಗುರು-ಹಿರಿಯರ ಮಧ್ಯೆ ನಿಶ್ಚಯಗೊಂಡಿದ್ದು, ವರದಕ್ಷಿಣೆ ಕುರಿತು ವರನ ಮನೆಯೊಂದಿಗೆ ಸ್ಪಷ್ಟವಾಗಿ ಎಲ್ಲ ಚರ್ಚಿಸಲಾಗಿತ್ತು. ಯುವಕನ ಪೋಷಕರು ಕೇಳಿದಂತೆಯೇ 40 ಲಕ್ಷ ರೂ. ಜಮೀನು, 100 ಗ್ರಾಂ ಚಿನ್ನ ಮತ್ತು 6 ಲಕ್ಷ ರೂ. ನಗದು ಕೈಗೆ ಕೊಡುವುದಕ್ಕೆ ಸಂಪೂರ್ಣ ಒಪ್ಪಿಗೆ ಸೂಚಿಸಿದ್ದರೂ ಮದುವೆ ದಿನವೇ ಕೈಕೊಟ್ಟ ವರನ ನಿರ್ಧಾರದಿಂದ ಯುವತಿಯ ಕುಟುಂಬಸ್ಥರು ಕಂಗಾಲಾಗಿದ್ದಾರೆ.
ಸತ್ಯ ತಿಳಿದು ಭಾರೀ ಆಘಾತಕ್ಕೊಳಗಾದ ವಧು, ಮದುವೆ ಮಂಟಪದಲ್ಲೇ ತನಗೆ ಅವಮಾನವಾಯಿತು ಎಂದು ಕಣ್ಣೀರಿಟ್ಟಿದ್ದಾಳೆ. ಅವರ ಷರತ್ತುಗಳಿಗೆ ಒಪ್ಪಿಗೆ ನೀಡಿ, ಎಲ್ಲ ಮಾತುಕತೆ ಮುಗಿಸಿದ ಬಳಿಕವೇ ಹಸೆಮಣೆ ಏರಲು ಬಂದ ನಮಗೆ ಇದೆಂಥಾ ಮೋಸ? ಎಂದು ವಧು ಕುಟುಂಬಸ್ಥರು ನೇರವಾಗಿ ವರನ ಮನೆಗೆ ನುಗ್ಗಿ, ಆತನು ಸಿಗದ ಹಿನ್ನೆಲೆ ಅವರ ಪೋಷಕರನ್ನೇ ಪ್ರಶ್ನಿಸಿದ್ದಾರೆ. ಈ ವೇಳೆ ಕಾಟಾಚಾರದ ಮಾತನ್ನಾಡಿದ ವರನ ಹೆತ್ತವರೊಂದಿಗೆ ಜಟಾಪಟಿ ನಡೆಸಿದ ವಧು ಮನೆಯವರು, ಪ್ರಕರಣವನ್ನು ಪೊಲೀಸ್ ಠಾಣೆಗೆ ಕೊಂಡೊಯ್ದಿದ್ದಾರೆ.
ತೆಲಂಗಾಣದ ಕರೀಂನಗರ ಜಿಲ್ಲೆಯ ಹುಜುರಾಬಾದ್ ಮಂಡಲದ ಕುಂಟಾ ಮಧುಕರ್ ರೆಡ್ಡಿ ಸಾಫ್ಟ್‌ವೇರ್ ಇಂಜಿನಿಯರ್ ಉದ್ಯೋಗಿ. ಅಸಲಿಗೆ ನಿಶ್ಚಯವಾಗಿದ್ದ ಯುವತಿಯನ್ನು ಬಿಟ್ಟು ಮದುವೆಗೂ ಒಂದು ದಿನ ಇರುವಂತೆ ಇನ್ಯಾರೋ ಯುವತಿ ಜೊತೆ ಮನೆಬಿಟ್ಟು ಓಡಿ ಹೋಗಿ ಮದುವೆ ಆಗಿರುವುದು ವಿಚಾರಣೆಯಲ್ಲಿ ಗೊತ್ತಾಗಿದೆ. ಸದ್ಯ ಪ್ರಕರಣ ಪೊಲೀಸ್ ಠಾಣೆಯಲ್ಲಿದ್ದು, ತನಿಖೆ ಮುಂದುವರಿದಿದೆ ಎಂದು ವರದಿಯಾಗಿದೆ,(ಏಜೆನ್ಸೀಸ್).