ಆನಂದ ಭಮ್ಮನ್ನವರ ಬೆಳಗಾವಿ
ಸರ್ವರ್ ಡೌನ್ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಆಹಾರ ಇಲಾಖೆ ಹೊಸದಾಗಿ ಅಳವಡಿಸಿರುವ ತಂತ್ರಾಂಶ ಪಡಿತರದಾರರನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡಿದೆ. ಹೊಸ ವ್ಯವಸ್ಥೆಯಲ್ಲೂ ತಂತ್ರಾಂಶ ಸಮಸ್ಯೆ ಕಾಣಿಸಿಕೊಂಡಿರುವುದರಿಂದ ನ್ಯಾಯಬೆಲೆ ಅಂಗಡಿಗಳ ಎದುರು ಜನರು ಇಡೀ ದಿನ ಕಾದು ನಿಲ್ಲುವಂತಾಗಿದೆ. ರಾಜ್ಯದಲ್ಲಿ ಈವರೆಗೆ 12-13 ಲಕ್ಷ ಕಾರ್ಡ್ದಾರರಷ್ಟೇ ಪಡಿತರ ಪಡೆದುಕೊಂಡಿದ್ದಾರೆ.
ರಾಜ್ಯದಲ್ಲಿ 1,14,63,940 ಬಿಪಿಎಲ್, 24,64,706 ಎಪಿಎಲ್ ಹಾಗೂ 10,68,467 ಅಂತ್ಯೋದಯ ಸೇರಿ ಒಟ್ಟು 1,49,97,113 ಕಾರ್ಡ್ಗಳಿವೆ. ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಯಡಿ ಈ ಮೇಲಿನ ಕಾರ್ಡ್ಗಳಿಗೆ ಪ್ರತಿ ತಿಂಗಳು 20,168 ನ್ಯಾಯಬೆಲೆ ಅಂಗಡಿಗಳ ಮೂಲಕ ಉಚಿತವಾಗಿ ಪಡಿತರ ವಿತರಿಸಲಾಗುತ್ತಿದೆ.
ಬೆರಳಚ್ಚು ಸ್ವೀಕರಿಸುತ್ತಿಲ್ಲ: ಈವರೆಗೆ ರಾಷ್ಟ್ರೀಯ ಮಾಹಿತಿ ಕೇಂದ್ರದ (ಎನ್ಐಸಿ) ತಂತ್ರಾಂಶದ ಮೂಲಕ ಪಡಿತರ ವಿತರಿಸಲಾಗುತ್ತಿತ್ತು. ಬೆಂಗಳೂರು, ಮೈಸೂರು, ಕಲಬುರಗಿಯಲ್ಲಿ ಹಳೆಯ ಸರ್ವರ್ ಅಳವಡಿಕೆಯಿಂದಾಗಿ ಕಳೆದ ಐದು ವರ್ಷದಿಂದ ಸರ್ವರ್ ಸಮಸ್ಯೆ ಕಾಡುತ್ತಿತ್ತು. ಇದರಿಂದಾಗಿ ಪ್ರತಿ 3 ತಿಂಗಳಿಗೊಮ್ಮೆ ನ್ಯಾಯಬೆಲೆ ಅಂಗಡಿಗಳ ಮುಂದೆ ದೈನಂದಿನ ಕೆಲಸ ಬಿಟ್ಟು ಬಯೋಮೆಟ್ರಿಕ್ ಪಡೆದು ಆಹಾರ ಪದಾರ್ಥ ಪಡೆಯಲು ಹರಸಾಹಸ ಪಡುವಂತಾಗಿತ್ತು. ಪಡಿತರ ಎತ್ತುವಳಿಗೂ ಕಷ್ಟವಾಗುತ್ತಿತ್ತು. ಗ್ರಾಮೀಣ ಪ್ರದೇಶಗಳಲ್ಲಿ ಸರ್ವರ್ ಸಮಸ್ಯೆ ಇನ್ನಷ್ಟು ಬಿಗಾಡಯಿಸಿತ್ತು. ಪರಿಹಾರಕ್ಕಾಗಿ ಇಲಾಖೆ, ಕೆಎಸ್ಡಿಸಿ ಸಹಯೋಗದಲ್ಲಿ ಹೊಸ ತಂತ್ರಾಂಶ ಕಾರ್ಯರೂಪಕ್ಕೆ ತಂದಿದೆ. ಆದರೆ, ತಂತ್ರಾಂಶದಲ್ಲಿನ ತಾಂತ್ರಿಕ ತೊಂದರೆಯಿಂದ ಕಾರ್ಡ್ದಾರರ ಬೆರಳಚ್ಚು (ಬಯೋಮೆಟ್ರಿಕ್) ಸ್ವೀಕರಿಸುತ್ತಿಲ್ಲ. ಇದರಿಂದಾಗಿ 15 ದಿನಗಳಿಂದ ಪಡಿತರ ಪಡೆಯಲು ಸಾಧ್ಯವಾಗದೆ ಕಾರ್ಡ್ದಾರರು ಹೈರಾಣಾಗಿದ್ದಾರೆ. ಪಡಿತರ ಚೀಟಿ ತಿದ್ದುಪಡಿಗೂ ಸಮಸ್ಯೆ ಎದುರಾಗಿದೆ.
ಇಡೀ ದಿನ ನಿಲ್ಲಬೇಕು: ಪ್ರತಿನಿತ್ಯ ನೂರಾರು ಜನರು ಬಯೋಮೆಟ್ರಿಕ್ ನೀಡಲು ನ್ಯಾಯಬೆಲೆ ಅಂಗಡಿಗಳ ಮುಂದೆ ತಮ್ಮ ದೈನಂದಿನ ಕೆಲಸ ಬಿಟ್ಟು ಸರದಿ ಸಾಲಿಲ್ಲಿ ನಿಲ್ಲಬೇಕಿದೆ. ಇಷ್ಟಾದರೂ ದಿನಕ್ಕೆ ಕೇವಲ 7-8 ಕಾರ್ಡ್ದಾರರಷ್ಟೇ ಬೆರಳಚ್ಚು ನೀಡಲು ಸಾಧ್ಯವಾಗುತ್ತಿದೆ. ಉಳಿದವರು ಬಂದ ದಾರಿಗೆ ಸುಂಕ ಇಲ್ಲದಂತೆ ಮನೆಗೆ ವಾಪಸ್ ತೆರಳುತ್ತಿದ್ದಾರೆ.
ಇಕೆವೈಸಿಗೂ ಕಂಟಕವಾಗಿತ್ತು: ಪಡಿತರ ಸೋರಿಕೆ ಹಾಗೂ ಬೋಗಸ್ ಕಾರ್ಡ್ ತಡೆಯುವುದಕ್ಕಾಗಿ ಇಲಾಖೆ ಜಾರಿಗೆ ತಂದಿದ್ದ ರೇಷನ್ ಕಾರ್ಡ್ಗೆ ಆಧಾರ್ ದೃಢೀಕರಣ (ಇಕೆವೈಸಿ) ಪ್ರಕ್ರಿಯೆಗೂ ಸರ್ವರ್ ಸಮಸ್ಯೆ ಕಾಡಿತ್ತು. ಪದೇಪದೆ ಸರ್ವರ್ ಡೌನ್ನಿಂದ 3ವರ್ಷ ಇಕೆವೈಸಿ ಕುಂಟುತ್ತಾ ಸಾಗಿತ್ತು. ರೇಷನ್ ಕಾರ್ಡ್ನಲ್ಲಿರುವ ಪ್ರತಿ ಸದಸ್ಯರು ನ್ಯಾಯಬೆಲೆ ಅಂಗಡಿಗಳಿಗೆ ತೆರಳಿ ಆಧಾರ್ ದೃಢೀಕರಣ ಮಾಡಿಸಲು ಎದುಸಿರು ಬಿಡುವಂತಾಗಿತ್ತು. ಅಂತೂ ಕೊನೆಗೂ ಇಕೆವೈಸಿ ಪ್ರಕ್ರಿಯೆ ಮುಗಿಸಲು ನ್ಯಾಯಬೆಲೆ ಅಂಗಡಿಯವರು ದೊಡ್ಡ ಸಾಧನೆ ಮಾಡುವಂತಾಗಿತ್ತು. ಕಾರ್ಡ್ ಬಯಸುವ ಅರ್ಜಿದಾರರು ಇಲಾಖೆ ವೆಬ್ಸೈಟ್ನಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಇದ್ದರೂ ಸರ್ವರ್ ಸಮಸ್ಯೆಯಿಂದ ಆಗುತ್ತಿರಲಿಲ್ಲ. ಹೊಸ ತಂತ್ರಾಂಶದಿಂದ ಎಲ್ಲ ಸಮಸ್ಯೆಗಳಿಗೂ ಪರಿಹಾರ ಸಿಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಸರ್ವರ್ ಸಮಸ್ಯೆಗೆ ಮುಕ್ತಿ ನೀಡುವ ಉದ್ದೇಶದಿಂದ ಎನ್ಐಸಿ ತಂತ್ರಾಂಶ ಬದಲು ಹೊಸದಾಗಿ ಅಳವಡಿಸಿರುವ ಕೆಎಸ್ಡಿಸಿ ತಂತ್ರಾಂಶದಲ್ಲಿ ತಾಂತ್ರಿಕ ದೋಷದಿಂದ ಪಡಿತರ ವಿತರಣೆಗೆ ತೊಂದರೆಯಾಗಿದೆ. ಶೀಘ್ರದಲ್ಲೇ ಈ ಸಮಸ್ಯೆ ಬಗೆಹರಿಯಲಿದೆ. ಮಾಸಾಂತ್ಯ ವೇಳೆಗೆ ಪಡಿತರ ವಿತರಣೆಗೆ ತೊಂದರೆಯಾಗುವುದಿಲ್ಲ.
| ಮಲ್ಲಿಕಾರ್ಜುನ ನಾಯಿಕ, ಆಹಾರ ಇಲಾಖೆ ಉಪ ನಿರ್ದೇಶಕ, ಬೆಳಗಾವಿ.
ಆಹಾರ ಇಲಾಖೆಯ ಸರ್ವರ್ ಅನ್ನು ಸರ್ಕಾರದ 21 ಇಲಾಖೆಗಳು ಅವಲಂಬಿಸಿತ್ತು. ಹೀಗಾಗಿ, ನ್ಯಾಯಬೆಲೆ ಅಂಗಡಿಗಳಲ್ಲಿ ಕಾರ್ಡ್ದಾರರಿಗೆ ಪಡಿತರ ವಿತರಣೆಗೆ ಪದೇಪದೆ ಸರ್ವರ್ ಸಮಸ್ಯೆ ಎದುರಾಗುತ್ತಿತ್ತು. ಹಿಂದಿನಿಂದಲೂ ಪಡಿತರ ವಿತರಣೆಗೆ ಪ್ರತ್ಯೇಕ ಸರ್ವರ್ ಕೇಂದ್ರ ಸ್ಥಾಪಿಸಬೇಕೆಂದು ಇಲಾಖೆಗೆ ಒತ್ತಾಯಿಸಿದ್ದೆವು. ಕೆಎಸ್ಡಿಸಿದಿಂದ ಹೊಸ ತಂತ್ರಾಂಶ ಅಳವಡಿಸಲಾಗಿದೆ. ತಂತ್ರಾಂಶದಲ್ಲಿ ತಾಂತ್ರಿಕ ಸಮಸ್ಯೆಯಿಂದ ಸರ್ವರ್ ಡೌನ್ ಆಗಿದೆ. 2-3 ದಿನಗಳಲ್ಲಿ ಬಗೆಹರಿಯಲಿದೆ ಎಂದು ಇಲಾಖೆ ಅಧಿಕಾರಿಗಳು ನಮಗೆ ಮಾಹಿತಿ ನೀಡಿದ್ದಾರೆ.
| ಟಿ.ಕೃಷ್ಣಪ್ಪ.ರಾಜ್ಯ ಸರ್ಕಾರಿ ಪಡಿತರ ವಿತರಕರ ಸಂಘದ ಅಧ್ಯಕ್ಷ.