ನ್ಯೂಸ್

'ಯಾವ ಕಾರಣಕ್ಕೂ ಚೀನಾ ಸೈನಿಕರು ಭಾರತದ ಭೂ ಪ್ರದೇಶ ಪ್ರವೇಶಿಸಲು ಬಿಡಬೇಡಿ...'

lakshmihegde

ನವದೆಹಲಿ: ಪೂರ್ವ ಲಡಾಖ್​ನಲ್ಲಿ ಭಾರತ-ಚೀನಾ ಸೈನಿಕರ ನಡುವಿನ ಸಂಘರ್ಷದ ಹೊಗೆ ಏಳುತ್ತಲೇ ಇದೆ. ಮಿಲಿಟರಿ ಮತ್ತು ರಾಜತಾಂತ್ರಿಕ ಮಟ್ಟದ ಮಾತುಕತೆಗಳು ನಡೆದರೂ ಒಂದು ದೃಢ ನಿರ್ಧಾರಕ್ಕೆ ಬರಲಾಗುತ್ತಿಲ್ಲ.

ಹೀಗಿರುವಾಗ ವಾಸ್ತವ ಗಡಿ ನಿಯಂತ್ರಣಾ ರೇಖೆಯುದ್ದಕ್ಕೂ ನಿಂತಿರುವ ಫೀಲ್ಡ್​ ಕಮಾಂಡರ್​​ಗಳಿಗೆ, ಯಾವುದೇ ಕಾರಣಕ್ಕೂ ಚೀನಾ ಸೈನಿಕರು ಭಾರತದ ಭೂಪ್ರದೇಶಕ್ಕೆ ಪ್ರವೇಶಿಸಲು ಅವಕಾಶ ಕೊಡಬಾರದು ಎಂದು ಸೂಚನೆ ನೀಡಿದ್ದಾಗಿ ಸೇನಾ ಮೂಲಗಳು ತಿಳಿಸಿವೆ.

ಅಷ್ಟೇ ಅಲ್ಲ, ಭಾರತದ ಭೂಪ್ರದೇಶದ ರಕ್ಷಣೆ ಮಾಡುವಾಗ ಸೈನಿಕರು ಶಿಸ್ತು ಪಾಲನೆ ಮಾಡಲೇಬೇಕು ಎಂದೂ ಹೇಳಲಾಗಿದೆ.

ಸದ್ಯ ಚೀನಾ ಪೀಪಲ್ಸ್​ ಲಿಬರೇಶನ್​ ಆರ್ಮಿ ಎಲ್​ಎಸಿ ಬಳಿ 50,000 ಸೈನಿಕರನ್ನು, ಭಾರೀ ಯುದ್ಧ ಟ್ಯಾಂಕ್​ಗಳನ್ನು, ಫಿರಂಗಿಗಳನ್ನು ನಿಯೋಜಿಸಿದೆ ಎಂದು ಮೂಲಗಳಿಂದ ತಿಳಿದುಬಂದಿದೆ. ಅದಕ್ಕೆ ತಕ್ಕಂತೆ ಭಾರತದ ಸೈನಿಕರ ಬಲವನ್ನೂ ಹೆಚ್ಚಿಸಲಾಗಿದೆ. (ಏಜೆನ್ಸೀಸ್​)