ನ್ಯೂಸ್

ಖದೀಮರ ಬಳಿ ಲೈಟರ್​ ಕೇಳಿದ ಕರ್ನಲ್‌; ಮುಂದೇನಾಯ್ತು?

ನವದೆಹಲಿ: ವ್ಯಕ್ತಿಯೊಬ್ಬನ ಬಳಿ ಲೈಟರ್​ ಕೇಳಿದ ಸೇನಾ ಕರ್ನಲ್​ಗೆ ಮೂವರು ಹಿಗ್ಗಾಮುಗ್ಗಾ ಥಳಿಸಿ, ಮೊಬೈಲ್ ಮತ್ತು 10,000 ರೂ. ನಗದು ದೋಚಿದ ಘಟನೆ ದೆಹಲಿಯ ಮಾಳವೀಯ ನಗರದಲ್ಲಿ ವರದಿಯಾಗಿದೆ.

ದಕ್ಷಿಣ ದೆಹಲಿಯ ಮಾಳವೀಯ ನಗರ ಪ್ರದೇಶದಲ್ಲಿ 48 ವರ್ಷದ ಸೇನಾ ಕರ್ನಲ್‌ಗೆ ಮೂವರು ವ್ಯಕ್ತಿಗಳು ಥಳಿಸಿ, ಅವರ ಕಾರಿನಲ್ಲಿದ್ದ ಬೆಲೆ ಬಾಳುವ ವಸ್ತುಗಳನ್ನು ದೋಚಿದ್ದಾರೆ ಎಂದು ದೂರು ದಾಖಲಿಸಿಕೊಂಡ ಪೊಲೀಸರು ಮಾಹಿತಿ ನೀಡಿದ್ದಾರೆ.

ಘಟನೆಯ ವಿವರ: ಚಾಣಕ್ಯಪುರಿ ನಿವಾಸಿಯಾಗಿರುವ ದೂರುದಾರ ವಿನಿತ್ ಮಹತೋ, ರಾತ್ರಿ 11.30ರ ಸುಮಾರಿಗೆ ತ್ರಿವೇಣಿ ಕಾಂಪ್ಲೆಕ್ಸ್‌ಗೆ ಆಗಮಿಸಿದ್ದರು. ಈ ವೇಳೆ ಸ್ಥಳದಲ್ಲೇ ನಿಂತಿದ್ದ ವ್ಯಕ್ತಿಯ ಹತ್ತಿರ ಲೈಟರ್​ ಕೊಡಿ ಎಂದು ಕೇಳಿದ್ದಾರೆ. ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದ್ದು, ಆರೋಪಿ ತನ್ನ ಮತ್ತಿಬ್ಬರ ಸ್ನೇಹಿತರನ್ನು ಕರೆಸಿ, ವ್ಯಕ್ತಿಗೆ ಥಳಿಸಿದ್ದಾರೆ. ತದನಂತರ ಅವರ ಕಾರಿನಲ್ಲಿದ್ದ ಬೆಲೆ ಬಾಳುವ ವಸ್ತುಗಳು ಮತ್ತು 10 ಸಾವಿರ ರೂ. ನಗದನ್ನು ಕಳ್ಳತನ ಮಾಡಿದ್ದಾರೆ.

ಚಾಣಕ್ಯಪುರಿ ನಿವಾಸಿಯಾಗಿರುವ ದೂರುದಾರ ವಿನಿತ್ ಮಹತೋ ಬುಧವಾರ (ಸೆ.13) ಮಾಳವೀಯ ನಗರ ಠಾಣೆಗೆ ಬಂದು, ಮಂಗಳವಾರ (ಸೆ.12) ಸೆಮಿನಾರ್‌ ಮುಗಿಸಿ, ತನ್ನ ಸ್ನೇಹಿತನೊಂದಿಗೆ ಕಾರಿನಲ್ಲಿ ಮಾಳವೀಯ ನಗರದ ತ್ರಿವೇಣಿ ಕಾಂಪ್ಲೆಕ್ಸ್‌ಗೆ ತೆರಳಿದ್ದ ವೇಳೆ ಈ ಘಟನೆ ಸಂಭವಿಸಿತು ಎಂದು ದೂರಿನಲ್ಲಿ ತಿಳಿಸಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಮಾಳವೀಯ ನಗರ ಪೊಲೀಸ್ ಠಾಣೆಯಲ್ಲಿ ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 394 (ಸ್ವಯಂಪ್ರೇರಿತವಾಗಿ ದರೋಡೆ ಮಾಡುವಲ್ಲಿ ಗಾಯಗೊಳಿಸುವುದು), 411 (ಕದ್ದ ಆಸ್ತಿಯನ್ನು ಅಪ್ರಾಮಾಣಿಕವಾಗಿ ಸ್ವೀಕರಿಸುವುದು) ಮತ್ತು 34 (ಸಾಮಾನ್ಯ ಉದ್ದೇಶ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಡಿಸಿಪಿ ಹೇಳಿದ್ದಾರೆ.

ಪ್ರಕರಣದ ಆರೋಪಿಗಳಾದ ಮಿಥುನ್ ಅಲಿಯಾಸ್ ದೀಪಕ್ (22) ಮತ್ತು ಮುಕುಲ್ (28) ಎಂದು ಗುರುತಿಸಲಾದ ಇಬ್ಬರನ್ನು ತನಿಖೆಯ ಸಮಯದಲ್ಲಿ ಬಂಧಿಸಲಾಗಿದ್ದು, ಎರಡು ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಸದ್ಯ ಮೂರನೇ ಆರೋಪಿ ತಲೆಮರೆಸಿಕೊಂಡಿದ್ದು, ಆತನನ್ನು ಬಂಧಿಸಲು ಶೋಧ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ,(ಏಜೆನ್ಸೀಸ್).