ನ್ಯೂಸ್

ಸೈನಿಕರ ಶೌರ್ಯ ಮುಂದಿನ ಜನಾಂಗಕ್ಕೆ ಪ್ರೇರಣೆಯಾಗಲಿದೆ; ಸೇನಾ ಮುಖ್ಯಸ್ಥ ಜನರಲ್ ಮನೋಜ್ ಪಾಂಡೆ

ಬೆಂಗಳೂರು: ಭಾರತೀಯ ಸೇನೆಯ 75ನೇ ಸೇನಾ ದಿನ ಇದೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ನಡೆಯುತ್ತಿದೆ. ಮದ್ರಾಸ್ ಎಂಜಿನಿಯರಿಂಗ್ ಗ್ರೂಪ್​ನ ಯುದ್ಧ ಸ್ಮಾರಕಕ್ಕೆ ಸೇನೆಯ ಮುಖ್ಯಸ್ಥರಾದ ಜನರಲ್ ಮನೋಜ್ ಪಾಂಡೆ ಗೌರವ ನಮನ ಸಲ್ಲಿಸಿ ಮಾತನಾಡಿದ್ದು, ವೀರ ಸೈನಿಕರ ಬಲಿದಾನ, ಶೌರ್ಯ, ಸಾಹಸ ಮುಂದಿನ ಜನಾಂಗಕ್ಕೆ ಸದಾ ಪ್ರೇರಣೆಯಾಗಿರುತ್ತದೆ ಎಂದು ಹೇಳಿದರು.

ಪ್ರಸ್ತುತ ಸೈನ್ಯದಲ್ಲಿರುವ ಸೈನಿಕರಿಗೆ ಅತ್ಯಾಧುನಿಕ ಉಪಕರಣ, ವಿಶೇಷ ಸೌಲಭ್ಯಗಳನ್ನು ನೀಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಅಭಿವೃದ್ಧಿ ಮಾಡುವ ಕಡೆಗೆ ಗಮನ ಕೊಡಲಾಗುತ್ತಿದೆ. ಗುಣಮಟ್ಟದ ಭಧ್ರತೆಯಿಂದಾಗಿ ಸಾವು-ನೋವುಗಳ ಸಂಖ್ಯೆ ಕಡಿಮೆ ಆಗಿದೆ. ಗ್ಲೋಬಲ್ ಸೆಕ್ಯುರಿಟಿಯಲ್ಲಿ ಮಹತ್ವದ ಬದಲಾವಣೆ ತರಲಾಗಿದೆ ಎಂದು ಹೇಳಿದರು.

ಜಮ್ಮು ಮತ್ತು ಪಂಜಾಬ್‌ನ ಅಂತರಾಷ್ಟ್ರೀಯ ಗಡಿ ವಲಯದಲ್ಲಿ ಶಸ್ತ್ರಾಸ್ತ್ರಗಳು ಮತ್ತು ಮಾದಕವಸ್ತುಗಳನ್ನು ಕಳ್ಳಸಾಗಣೆ ಮಾಡುವ ಪ್ರಯತ್ನಗಳು ಮುಂದುವರೆದಿದೆ. ಇದನ್ನ ಹತ್ತಿಕ್ಕುವ ಕೆಲಸ ಸೇನೆ ಮಾಡುತ್ತಿದೆ. ಇದಕ್ಕಾಗಿ ಡ್ರೋನ್ ಕ್ಯಾಮರಾಗಳನ್ನು ಬಳಸಿಕೊಂಡು ಹದ್ದಿನ ಕಣ್ಣು ಇಡಲಾಗಿದೆ ಎಂದರು.

ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ಭಾರತೀಯ ಸೇನಾ ಸದಾ ಸಿದ್ಧವಿರುತ್ತದೆ. ಈಗಾಗಲೇ ಪುರಷರ ಅಗ್ನಿವೀರ್ ಮೊದಲ ತರಬೇತಿ ನಡೆಯುತ್ತಿದೆ. ಮಾರ್ಚ್​​ನಿಂದ ಮಹಿಳಾ ಅಗ್ನಿವೀರ್ ತರಬೇತಿ ಆರಂಭಗೊಳ್ಳಲಿದೆ. ನಾರಿ ಶಕ್ತಿ ಎಂಬಂತೆ ಮಹಿಳೆಯರನ್ನು ಶಸಕ್ತರನ್ನಾಗಿ ಮಾಡಲು ಹಲವು ಕಾರ್ಯಕ್ರಮ ರೂಪಿಸಲಾಗಿದೆ. ಮಹಿಳಾ ಅಧಿಕಾರಿಗಳು, ಸೈನಿಕರು ಇಂದು ಪ್ರಮುಖ ಆಪರೇಷನ್​​ಗಳಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ ಜನರಲ್ ಮನೋಜ್ ಪಾಂಡೆ ಹೇಳಿದರು.