ನ್ಯೂಸ್

ಸೂಕ್ತ ಕ್ರಮ ಅಗತ್ಯ; ಸೀಟ್​ ಬ್ಲಾಕಿಂಗ್​ ಪಿಡುಗು ಕೊನೆಗೊಳ್ಳಲಿ

ಇಂಜಿನಿಯರಿಂಗ್ ಶಿಕ್ಷಣ ಪಡೆದಿರುವವರ ಪೈಕಿ ಶೇಕಡ 15ರಷ್ಟು ಪದವೀಧರರಿಗೆ ಮಾತ್ರ ಉದ್ಯೋಗ ದೊರೆಯುತ್ತಿದೆ ಎಂಬ ಕಹಿಸತ್ಯವನ್ನು ಕೊನೆಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಬೆಂಗಳೂರಿನಲ್ಲಿ ನಡೆದ ಸಮಾರಂಭವೊಂದರಲ್ಲಿ ಒಪ್ಪಿಕೊಂಡಿದ್ದಾರೆ. ಶಿಕ್ಷಣ ಸಂಸ್ಥೆಗಳಲ್ಲಿ ಥಿಯರಿ ಕಲಿಸುವುದರ ಜತೆಗೆ ಪ್ರಾಯೋಗಿಕ ತರಬೇತಿ ನೀಡುವುದು ಎಷ್ಟು ಮುಖ್ಯ ಎಂಬುದು ಇತ್ತೀಚೆಗೆ ಎಲ್ಲರ ಅರಿವಿಗೆ ಬರುತ್ತಿದೆ. ಎಷ್ಟೇ ಪದವಿ ಪಡೆದರೂ ಅಂತಿಮವಾಗಿ ಉದ್ಯಮಗಳಲ್ಲಿ ಕೌಶಲಕ್ಕೇ ಮಣೆ ಎಂಬುದು ವಾಸ್ತವ. ಹಾಗಾಗಿ, ಪ್ರತಿಯೊಂದು ಹಂತದಲ್ಲಿಯೂ ವೃತ್ತಿಕೌಶಲ ಕಲಿಸುವುದಕ್ಕೆ ಹೆಚ್ಚಿನ ಪ್ರಾಮುಖ್ಯ ಸಿಗುವಂತೆ ಶಿಕ್ಷಣ ಪದ್ಧತಿಯನ್ನು ಆಮೂಲಾಗ್ರ ಬದಲಾವಣೆಗೆ ಒಳಪಡಿಸುವ ಅಗತ್ಯ ಇದೆ. ಈ ದಿಸೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಕ್ರೋಡೀಕೃತ ಪ್ರಯತ್ನ ನಡೆಯಬೇಕಿದೆ. ಇಂಜಿನಿಯರಿಂಗ್ ಪದವಿ ಪೂರೈಸಿದವರಿಗೆ ಉದ್ಯೋಗ ಸಿಗುವಂಥ ಪೂರಕ ವಾತಾವರಣ ಸೃಷ್ಟಿಯಾಗಬೇಕು. ಉದ್ಯೋಗ ಮಾರುಕಟ್ಟೆ ಬಯಸುವ ಕೌಶಲಗಳಿಗೆ ಇಂಜಿನಿಯರಿಂಗ್ ಪದವೀಧರರನ್ನು ಅಣಿಗೊಳಿಸಬೇಕು. ಇಲ್ಲವಾದಲ್ಲಿ ಲಕ್ಷಾಂತರ ರೂಪಾಯಿ ವೆಚ್ಚ ಮಾಡಿ ಪಡೆಯುವ ಶಿಕ್ಷಣಕ್ಕೆ ಏನು ಅರ್ಥ? ಈ ಕುರಿತಂತೆ ಎಲ್ಲ ಶೈಕಣಿಕ ಸಂಸ್ಥೆಗಳು ಅವಲೋಕನ ಮಾಡಿಕೊಂಡು, ಸಕಾರಾತ್ಮಕ ಬದಲಾವಣೆಯನ್ನು ಅಳವಡಿಸಿಕೊಳ್ಳುವುದು ಮುಖ್ಯ.

ಇದಲ್ಲದೆ, ಇಂಜಿನಿಯರಿಂಗ್ ಶಿಕ್ಷಣದಲ್ಲಿ ಅಕ್ರಮಗಳು ನಡೆಯುತ್ತಿರುವುದು ಚಿಂತೆಯ ವಿಚಾರ. ಈ ಪಿಡುಗು ಹಳೆಯದ್ದಾಗಿದ್ದರೂ, ಇತ್ತೀಚಿನ ವರ್ಷಗಳಲ್ಲಿ ತೀವ್ರಗೊಂಡಿದೆ ಎಂಬುದು ಕಳವಳಕಾರಿ. ಹಾಗಾಗಿ, ಇಂಜಿನಿಯರಿಂಗ್ ಶಿಕ್ಷಣದಲ್ಲಿನ ಅಕ್ರಮಗಳ ಕಡಿವಾಣಕ್ಕೆ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕಿದೆ. ಇಂಜಿನಿಯರಿಂಗ್​ನಲ್ಲಿ ಅತಿ ಹೆಚ್ಚು ಬೇಡಿಕೆ ಇರುವ ಆರ್ಕಿಟೆಕ್ಚರ್, ಕಂಪ್ಯೂಟರ್ ಸೈನ್ಸ್ ಮುಂತಾದ ಕೋರ್ಸ್​ಗಳ ಸೀಟುಗಳನ್ನು ಬ್ಲಾಕ್ ಮಾಡಿ 50ರಿಂದ 80 ಲಕ್ಷ ರೂಪಾಯಿವರೆಗಿನ ಬೆಲೆಯಲ್ಲಿ ಮಾರಾಟ ಮಾಡುವ ದಂಧೆ ಕರ್ನಾಟಕದಲ್ಲಿ ಈ ಬಾರಿಯೂ ನಡೆದಂತಿದೆ. ಇದರ ಸುಳಿವರಿತ ಪರೀಕ್ಷಾ ಪ್ರಾಧಿಕಾರ, ಸೀಟು ಸಿಕ್ಕರೂ ಅಡ್ಮಿಷನ್ ಮಾಡಿಸದ 2,348 ವಿದ್ಯಾರ್ಥಿಗಳಿಗೆ ಶೋಕಾಸ್ ನೋಟಿಸ್ ಜಾರಿ ಮಾಡಿದೆ. ನೋಟಿಸ್​ಗೆ ವಿದ್ಯಾರ್ಥಿಗಳು ಯಾವುದೇ ಉತ್ತರ ನೀಡಿಲ್ಲ. ಖಾಸಗಿ ಆಡಳಿತ ಮಂಡಳಿಗಳ ಈ ಕಳ್ಳಾಟದ ಬಗ್ಗೆ ರಾಜ್ಯ ಸರ್ಕಾರ ಕೂಲಂಕಷ ತನಿಖೆ ನಡೆಸಬೇಕು. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಂಡು, ಈ ಸೀಟ್ ಬ್ಲಾಕಿಂಗ್ ಪಿಡುಗಿಗೆ ಅಂತ್ಯ ಹಾಡಬೇಕು.