ನವದೆಹಲಿ: ಮ್ಯಾಕ್, ಐಫೋನ್, ಐಪ್ಯಾಡ್, ಆ್ಯಪಲ್ ವಾಚ್, ಏರ್ಪಾಡ್.... ಹೀಗೆ ಆ್ಯಪಲ್ ಕಂಪನಿಯ ಉತ್ಪನ್ನಗಳನ್ನು ಹೆಸರಿಸಬಹುದು. ಇದಕ್ಕೆ ಹೊಸದೊಂದು ಸೇರ್ಪಡೆಯಾಗಿದೆ. ಏನು ಗೊತ್ತೆ?
ಆ್ಯಪಲ್ ಫೇಸ್ ಮಾಸ್ಕ್...! ಹೌದು. ಐಫೋನ್, ಐಪ್ಯಾಡ್ ವಿನ್ಯಾಸ ಮಾಡಿ ಉತ್ಪಾದಿಸಿದ ಇಂಜಿನಿಯರ್ಗಳೇ ಇದನ್ನು ವಿನ್ಯಾಸಗೊಳಿಸಿ ತಯಾರಿಸಿದ್ದಾರೆ ಎನ್ನುವುದು ಇನ್ನೂ ವಿಶೇಷ ಸಂಗತಿಯಾಗಿದೆ. ಈ ಫೇಸ್ ಮಾಸ್ಕ್ಗಳನ್ನು ಸದ್ಯವೇ ತನ್ನ ಕಾರ್ಪೋರೇಟ್ ಕಚೇರಿ ಹಾಗೂ ರಿಟೇಲ್ ಮಳಿಗೆಗಳ ಸಿಬ್ಬಂದಿಗೆ ಕಳುಹಿಸಿ ಕೊಡಲಿದೆ.
ಸದ್ಯ ಎರಡು ಬಗೆಯ ಫೇಸ್ ಮಾಸ್ಕ್ಗಳನ್ನು ತಯಾರಿಸಲಾಗಿದೆ. ಆ್ಯಪಲ್ ಫೇಸ್ ಮಾಸ್ಕ್ ಹಾಗೂ ಆ್ಯಪಲ್ ಕ್ಲಿಯರ್ ಮಾಸ್ಕ್. ಫೇಸ್ಮಾಸ್ಕ್ ಮೂರು ಪದರಗಳನ್ನು ಹೊಂದಿದ್ದು, ಸರಾಗವಾಗಿ ಉಸಿರಾಡಬಹುದು. ಇದನ್ನು ತೊಳೆದು ಐದು ಬಾರಿ ಮರುಬಳಕೆ ಮಾಡಬಹುದು ಕಂಪನಿ ಹೇಳಿದೆ.
ಆ್ಯಪಲ್ ಕಂಪನಿಯ ಇಂಜಿನಿಯರಿಂಗ್ ಹಾಗೂ ಇಂಡಸ್ಟ್ರೀಯಲ್ ಇಂಜಿಯರಿಂಗ್ ತಂಡವೇ ಇದನ್ನು ಸಂಪೂರ್ಣವಾಗಿ ಅಭಿವೃದ್ಧಿಪಡಿಸಿದೆ. ಇದಕ್ಕಾಗಿ ಮೂಗ ಮತ್ತು ಕಿವುಡ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವ ವಾಷಿಂಗ್ಟನ್ನ ಗಲ್ಲಾಡೆಟ್ ಯುನಿವರ್ಸಿಟಿ ಜತೆಗೆ ಕೈಜೋಡಿಸಿದೆ.
ಆ್ಯಪಲ್ ಕ್ಲಿಯರ್ ಮಾಸ್ಕ್ ಪಾರದರ್ಶಕವಾಗಿದ್ದು, ವೈದ್ಯಕೀಯ ಬಳಕೆಯ ಗುಣಮಟ್ಟದ್ದಾಗಿದೆ. ಅಮೆರಿಕದ ಆಹಾರ ಮತ್ತು ಔಷಧ ಇಲಾಖೆಯ ಮಾನ್ಯತೆಯನ್ನು ಪಡೆದಿರುವುದು ಇದರ ಹೆಗ್ಗಳಿಕೆ. ಸದ್ಯ ಇದು ಆ್ಯಪಲ್ ಉದ್ಯೋಗಿಗಳಿಗೆ ಮಾತ್ರ ಎನ್ನಲಾಗಿದ್ದು, ಸಾರ್ವಜನಿಕರಿಗೆ ದೊರೆಯಲಿದೆಯೇ ಎಂಬುದು ಇನ್ನೂ ಖಚಿತಪಟ್ಟಿಲ್ಲ ಎಂದು ಮಾಧ್ಯಮಗಳು ವರದಿ ಮಾಡಿವೆ. ಇದರ ಚಿತ್ರಗಳು ಇನ್ನಷ್ಟೇ ಬಿಡುಗಡೆಯಾಗಬೇಕಿದೆ ಎಂದು ಹೇಳಲಾಗಿದೆ.