ನ್ಯೂಸ್

ಯಾವುದೇ ಕಾರಣಕ್ಕೂ ಗಣಪತಿಗೆ ತುಳಸಿ ಅರ್ಪಿಸಬೇಡಿ: ಅಚ್ಚರಿಯ ಕಾರಣ ಇಲ್ಲಿದೆ...! Ganapati Puja

Ganapati Puja : ಇಂದು ನಾಡಿನೆಲ್ಲಡೆ ಗಣೇಶ ಚತುರ್ಥಿ ಸಂಭ್ರಮ ಆರಂಭವಾಗಿದೆ. ವಯಸ್ಸು ಅಥವಾ ಲಿಂಗವನ್ನು ಲೆಕ್ಕಿಸದೆ ಎಲ್ಲರೂ ಆನಂದಿಸುವ ಹಬ್ಬವಿದು. ಪ್ರತಿಯೊಂದು ಬೀದಿಗಳಲ್ಲೂ ಗಣಪತಿ ಮೂರ್ತಿಯನ್ನು ಆರಾಧಿಸುವ ಮೂಲಕ ಎಲ್ಲರೂ ಒಗ್ಗೂಡುತ್ತಾರೆ ಮತ್ತು ಭಕ್ತಿ-ಭಾವದಿಂದ ಮಿಂದೇಳುತ್ತಾರೆ.

ಗಣೇಶನ ಮೂರ್ತಿಯನ್ನು ಇಟ್ಟು, ಹೂವು-ಹಣ್ಣುಗಳಿಂದ ಸಿಂಗರಿಸಿ, ಭಕ್ತಿಯಿಂದ ಪೂಜೆ ಮಾಡುತ್ತಾರೆ. ಆದರೆ, ಪೂಜೆ ಅಥವಾ ಪ್ರಾರ್ಥನೆಯನ್ನು ಸಲ್ಲಿಸುವಾಗ ಕೆಲ ಜನರು, ತಿಳಿದೋ ಅಥವಾ ತಿಳಿಯದೆಯೋ ಕೆಲವು ತಪ್ಪುಗಳನ್ನು ಮಾಡುತ್ತಾರೆ. ಈ ಬಗ್ಗೆ ತಿಳಿದುಕೊಳ್ಳುವುದು ತುಂಬಾ ಮುಖ್ಯ. ಅಂದಹಾಗೆ, ವಿನಾಯಕ ಚತುರ್ಥಿ ಎಂಬ ಪದವನ್ನು ಕೇಳಿದಾಗ ನಮಗೆ ಮೊದಲು ನೆನಪಿಗೆ ಬರುವುದು ಪತ್ರಿಗಳು ಅಥವಾ ಹೂವುಗಳು. ಕೆಲವರು ತಿಳಿಯದೆಯೇ ಪೂಜೆಯ ಸಮಯದಲ್ಲಿ ಗಣೇಶನಿಗೆ ಅರ್ಪಿಸಬಾರದ ವಸ್ತುಗಳನ್ನು ಅರ್ಪಿಸುತ್ತಾರೆ. ಇದರಿಂದ, ಪ್ರಾರ್ಥನೆ ಫಲಿಸುವುದಿಲ್ಲ. ಹೀಗಾಗಿ ಪೂಜಾ ಸಮಯದಲ್ಲಿ ಯಾವ ಮಿಸ್ಟೇಕ್​ ಮಾಡಬಾರದು ಅನ್ನೋದನ್ನು ನಾವಿಂದು ತಿಳಿದುಕೊಳ್ಳೋಣ.

ವಿಘ್ನ ನಿವಾರಕನಿಗೆ ವಿಶೇಷ ನೈವೇದ್ಯವಾಗಿ ಮೋದಕಗಳನ್ನು ಅರ್ಪಿಸಲಾಗುತ್ತದೆ. ಇದರ ಜೊತೆಗೆ, ಕೆಂಪು ಹೂವು ಅಥವಾ ದಾಸವಾಳವನ್ನು ಅರ್ಪಿಸಲಾಗುತ್ತದೆ. ಗಣೇಶನಿಗೆ ಗರಿಕೆಯನ್ನೂ ಅರ್ಪಿಸಲಾಗುತ್ತದೆ. ಇವುಗಳನ್ನು ಆದಿ ಗಣೇಶನಿಗೆ 11, 21 ಅಥವಾ 51 ಗರಿಕೆಗಳ ರೂಪದಲ್ಲಿ ಅರ್ಪಿಸಲಾಗುತ್ತದೆ. ಈ ಮೂಲಕ ನಮ್ಮ ಪ್ರಾರ್ಥನೆಗಳನ್ನು ಸಲ್ಲಿಸುತ್ತಾರೆ.

ಆದರೆ, ಯಾವುದೇ ಸಂದರ್ಭದಲ್ಲಿಯೂ ಗಣೇಶನಿಗೆ ತುಳಸಿಯನ್ನು ಅರ್ಪಿಸಬಾರದು. ವಿಷ್ಣುವಿಗೆ ತುಳಸಿಯನ್ನು ಅರ್ಪಿಸಬೇಕು. ಬಿಲ್ವಪತ್ರೆಯನ್ನು ಶಿವನಿಗೆ ಅರ್ಪಿಸಬೇಕು. ದುರ್ಗಾ ದೇವಿಗೆ ಕೆಂಪು ಹೂವುಗಳನ್ನು ಅರ್ಪಿಸಬೇಕು. ವಿನಾಯಕನಿಗೆ ಗರಿಕೆಯನ್ನು ಅರ್ಪಿಸಬೇಕು. ಯಾವುದೇ ಸಂದರ್ಭದಲ್ಲಿಯೂ ನೀವು ಗಣೇಶನಿಗೆ ತುಳಸಿಯನ್ನು ಅರ್ಪಿಸಬಾರದು. ಇದು ಮಹಾ ಪಾಪ.

ಪುರಾಣ ಕತೆ ಹೇಳುವುದೇನು?

ಗಣೇಶನನ್ನು ಪೂಜಿಸುವಾಗ ತುಳಸಿ ಎಲೆಗಳನ್ನು ಅರ್ಪಿಸುವುದು ನಿಷಿದ್ಧ. ಇದರ ಹಿಂದೆ ಅನೇಕ ಪುರಾಣಗಳಿವೆ. ಪದ್ಮ ಪುರಾಣದಂತಹ ಕೆಲವು ಗ್ರಂಥಗಳ ಪ್ರಕಾರ, ಒಮ್ಮೆ ತುಳಸೀ ದೇವಿ ಗಂಗಾ ನದಿಯ ದಡದಲ್ಲಿ ತಪಸ್ಸಿನಲ್ಲಿ ತೊಡಗಿದ್ದಾಗ ಗಣೇಶನು ಅವರನ್ನು ಕಂಡನು. ತುಳಸಿಯ ಸೌಂದರ್ಯದಿಂದ ಆಕರ್ಷಿತನಾದ ಗಣೇಶನು ಅವಳಿಗೆ ಮದುವೆಯ ಪ್ರಸ್ತಾಪವನ್ನು ಇಟ್ಟನು. ಆದರೆ ತುಳಸಿಯು ತನ್ನ ತಪಸ್ಸಿಗೆ ಭಂಗವಾಗುವುದೆಂದು ಗಣೇಶನ ಪ್ರಸ್ತಾಪವನ್ನು ತಿರಸ್ಕರಿಸಿದಳು. ಇದರಿಂದ ಕೋಪಗೊಂಡ ಗಣೇಶನು ತುಳಸಿಯನ್ನು ಶಪಿಸಿದನು, ಅವಳು ಗಿಡವಾಗಿ ಪರಿವರ್ತನೆಯಾಗುವಂತೆ. ಇದಕ್ಕೆ ಪ್ರತಿಯಾಗಿ, ತುಳಸಿಯೂ ಗಣೇಶನಿಗೆ ಶಾಪವಿಟ್ಟಳು, ಅವನು ಎಂದಿಗೂ ಮದುವೆಯಾಗದಿರುವಂತೆ. ಈ ಘಟನೆಯಿಂದಾಗಿ, ಗಣೇಶನಿಗೆ ತುಳಸಿಯನ್ನು ಅರ್ಪಿಸುವುದು ನಿಷಿದ್ಧವಾಯಿತು ಎಂದು ನಂಬಲಾಗಿದೆ.

ಅಂದಹಾಗೆ, ಗಣೇಶನ ಪೂಜೆಗೆ ಎಲ್ಲಾ ರೀತಿಯ ಹೂವುಗಳು ಸೂಕ್ತವಲ್ಲ. ಬಿಳಿ ಹೂವುಗಳು, ಬಿಳಿ ಬಟ್ಟೆಗಳು, ಬಿಳಿ ಪವಿತ್ರ ದಾರ, ಬಿಳಿ ಶ್ರೀಗಂಧ ಇತ್ಯಾದಿಗಳನ್ನು ಅರ್ಪಿಸಬಾರದು. ಕೆಂಪು ಹೂವುಗಳನ್ನು ಮಾತ್ರ ಅರ್ಪಿಸಬೇಕು. ಅಲ್ಲದೆ, ಗಣೇಶನಿಗೆ ಎಲೆಗಳಾದ ದೂರ್ವಾ (ಗರಿಕೆ) ಅಥವಾ ಶಮಿ ಎಲೆಗಳನ್ನು ಅರ್ಪಿಸುವುದು ಶುಭವೆಂದು ಪರಿಗಣಿಸಲಾಗುತ್ತದೆ.

ಆದ್ದರಿಂದ ತಿಳಿದೋ ತಿಳಿಯದೆಯೋ ತಪ್ಪುಗಳನ್ನು ಮಾಡಬೇಡಿ. ನಿಮ್ಮ ಒಳ್ಳೆಯ ಕಾರ್ಯಗಳ ಫಲವನ್ನು ಪಡೆಯಿರಿ. ವಿಜಯವಾಣಿ ಡಾಟ್​ ನೆಟ್​ ಪರವಾಗಿ ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ಗಣೇಶ ಚತುರ್ಥಿಯ ಹಾರ್ಧಿಕ ಶುಭಾಶಯಗಳು.