ನ್ಯೂಸ್

ಭರ್ಜರಿ ಆಫರ್​! ಇಲ್ಲಿಗೆ ಭೇಟಿ ಕೊಟ್ರೆ ಫ್ರೀ ಆಗಿ ಎಷ್ಟು ಕುರಿಗಳು ಬೇಕಾದ್ರೂ ಕೊಂಡೊಯ್ಯಬಹುದು

ಎಷ್ಟು ಕುರಿಗಳನ್ನು ಬೇಕಾದರೂ ಉಚಿತವಾಗಿ ತೆಗೆದುಕೊಂಡು ಹೋಗಬಹುದು ಎಂದು ಯಾರಾದರೂ ಹೇಳಿದರೆ ನೀವು ನಂಬುತ್ತೀರಾ? ಖಂಡಿತ ಯಾರೂ ನಂಬುವುದಿಲ್ಲ. ಆದರೆ, ಈ ಸುದ್ದಿಯನ್ನು ಓದಿದ ಬಳಿಕ ನೀವು ನಂಬಲೇಬೇಕು. ಏಕೆಂದರೆ, ಇಟಲಿ ಅಲಿಕುಡಿ ದ್ವೀಪದಲ್ಲಿ ಇಂಥದ್ದೊಂದು ಭರ್ಜರಿ ಆಫರ್​ ನೀಡಲಾಗಿದೆ. ಇಲ್ಲಿಗೆ ಭೇಟಿ ನೀಡಿ ಎಷ್ಟು ಕುರಿಗಳನ್ನು ಬೇಕಾದರು ಉಚಿತವಾಗಿ ತೆಗೆದುಕೊಂಡು ಹೋಗಬಹುದು ಅಂತಾ ಸ್ಥಳೀಯ ಸರ್ಕಾರ ಆದೇಶ ಹೊರಡಿಸಿದೆ.

ಅಲಿಕುಡಿ ಎಂಬ ಪುಟ್ಟ ದ್ವೀಪವು ಸಿಸಿಲಿಯ ಉತ್ತರದಲ್ಲಿರುವ ಅಯೋಲಿಯನ್ ದ್ವೀಪಗಳ ಭಾಗವಾಗಿದೆ. ಇಲ್ಲಿ ಕೇವಲ ನೂರು ಜನರು ಮಾತ್ರ ವಾಸಿಸುತ್ತಿದ್ದಾರೆ. ಆದರೆ ಕುರಿಗಳ ಸಂಖ್ಯೆ ಮಾತ್ರ ಆರು ಪಟ್ಟು ಹೆಚ್ಚಿದೆ. ಇಲ್ಲಿ ಬೆಳೆ ನಾಶ ಮಾಡುವ ಮೇಕೆಗಳು ಸ್ಥಳೀಯರಿಗೆ ಒಂದು ದೊಡ್ಡ ತಲೆನೋವಾಗಿವೆ. ಅಲ್ಲದೆ, ಮನೆ ಮನೆಗೆ ನುಗ್ಗಿ ತುಂಬಾ ಹಿಂಸೆ ಕೂಡ ನೀಡುತ್ತವೆ.

ಈ ಸಮಸ್ಯೆಗೆ ಒಂದು ಪರಿಹಾರ ಕಂಡುಕೊಳ್ಳಬೇಕು ಎಂಬ ಉದ್ದೇಶದಿಂದ ಅಲಿಕುಡಿ ದ್ವೀಪದ ಮೇಯರ್​ ರಿಕಾರ್ಡೊ ಗುಲ್ಲೊ ಒಂದು ದಾರಿಯನ್ನು ಕಂಡುಕೊಂಡರು. ಇಲ್ಲಿನ ಕುರಿಗಳನ್ನು ಯಾರು ಬೇಕಾದರೂ ದತ್ತು ತೆಗೆದುಕೊಂಡು ತಮ್ಮೊಂದಿಗೆ ಕರೆದುಕೊಂಡು ಹೋಗಬಹುದು. ಅದು ಕೂಡ ಉಚಿತವಾಗಿದೆ. ಆದರೆ, ಒಂದು ಕಂಡೀಷನ್​ ಇದೆ. ಅದೇನೆಂದರೆ, ಕುರಿಗಳಿಗಾಗಿ ಏಪ್ರಿಲ್ 10 ರೊಳಗೆ ಅರ್ಜಿ ಸಲ್ಲಿಸಬೇಕು. ಒಬ್ಬ ವ್ಯಕ್ತಿಗೆ ದ್ವೀಪವನ್ನು ತಲುಪಲು ಮತ್ತು ಕುರಿಗಳನ್ನು ತೆಗೆದುಕೊಳ್ಳಲು 15 ದಿನಗಳು ಹಿಡಿಯುತ್ತವೆ.

ದ್ವೀಪದಲ್ಲಿರುವ ಜನರು ಕುರಿಗಳನ್ನು ಕೊಂದು ಅವುಗಳ ಸಂಖ್ಯೆಯನ್ನು ಕಡಿಮೆ ಮಾಡಲು ಆಸಕ್ತಿ ಹೊಂದಿಲ್ಲದ ಕಾರಣ ಇಂತಹ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಕುರಿಗಳು ಕಳೆದ 20 ವರ್ಷಗಳಿಂದ ದ್ವೀಪದಲ್ಲಿದ್ದು, ಅಲ್ಲಿನ ಬೆಟ್ಟ, ಕಣಿವೆಗಳಲ್ಲಿ ವಾಸವಾಗಿವೆ. ಕುರಿಗಳ ಸಂಖ್ಯೆ ಹೆಚ್ಚಾದಂತೆ ಜನವಸತಿ ಪ್ರದೇಶಕ್ಕೆ ಲಗ್ಗೆ ಇಟ್ಟಿವೆ. ಕುರಿಗಳನ್ನು ಮೊದಲು ಸಾಕುವ ಉದ್ದೇಶದಿಂದ ದ್ವೀಪಕ್ಕೆ ತರಲಾಯಿತು. ಶೀಘ್ರದಲ್ಲೇ ಅವುಗಳನ್ನು ದ್ವೀಪದಲ್ಲಿ ಮುಕ್ತವಾಗಿ ವಾಸಿಸಲು ಅನುಮತಿಸಲಾಯಿತು.

150,000 ವರ್ಷಗಳ ಹಿಂದೆ ಸುಪ್ತ ಜ್ವಾಲಾಮುಖಿಯಿಂದ ರೂಪುಗೊಂಡ ಅಲಿಕುಡಿ ದ್ವೀಪಕ್ಕೆ ದೋಣಿಯ ಮೂಲಕ ಮಾತ್ರ ಪ್ರವೇಶಿಸಬಹುದು. ರಸ್ತೆಗಳು ಅಥವಾ ಹೋಟೆಲ್‌ಗಳಿಲ್ಲ. ಕತ್ತೆಗಳನ್ನು ಸರಕುಗಳನ್ನು ಸಾಗಿಸಲು ಬಳಸಲಾಗುತ್ತದೆ. (ಏಜೆನ್ಸೀಸ್​)