ನ್ಯೂಸ್

VIDEO| ಸಿಸಿಬಿ ವಿಚಾರಣೆ ನೆನೆದು ಕಣ್ಣೀರಿಟ್ಟ ಅನುಶ್ರೀ: ನಿಮ್ಮ ನಂಬಿಕೆಯೇ ನನಗೆ ಶಕ್ತಿ ಎಂದ ಸ್ಟಾರ್​ ಆ್ಯಂಕರ್​!

ಬೆಂಗಳೂರು: ಡ್ರಗ್ಸ್​ ದಂಧೆ ಪ್ರಕರಣದ ಆರೋಪದಲ್ಲಿ ಸಿಲುಕಿರುವ ನಟಿ ಹಾಗೂ ಖ್ಯಾತ ನಿರೂಪಕಿ ಅನುಶ್ರೀ ಸಿಸಿಬಿ ವಿಚಾರಣೆಯನ್ನು ನೆನೆದು ಕಣ್ಣೀರಿಟ್ಟರು. ಇಂದು ಬೆಳಗ್ಗೆ ಅನುಶ್ರೀಯವರು ತಮ್ಮ ಫೇಸ್​ಬುಕ್​ ಪೇಜ್​ನಲ್ಲಿ ವಿಡಿಯೋ ಪೋಸ್ಟ್​ ಮಾಡಿದ್ದು, ಸಿಸಿಬಿ ವಿಚಾರಣೆಯನ್ನು ನೆನೆದು ಭಾವುಕರಾದರು.

2020 ಸೆ. 24 ನನ್ನ ಜೀವನದಲ್ಲೇ ನಾನು ಎಂದಿಗೂ ನೆನಪು ಮಾಡಿಕೊಳ್ಳದ ಒಂದು ಕರಾಳ ದಿನ. 12 ವರ್ಷಗಳ ಹಿಂದೆ ಒಂದು ಡ್ಯಾನ್ಸ್​ ರಿಯಾಲಿಟಿ ಶೋನಲ್ಲಿ ಜಯ ಸಾಧಿಸಿದಾಗ, ಮುದೊಂದು ದಿನ ಇದೇ ನನಗೆ ಮುಳ್ಳಾಗುತ್ತೆ ಎಂದು ನಾನು ಭಾವಿಸಿರಲಿಲ್ಲ ಎಂದು ಹಿಂದಿನ ಘಟನೆಯನ್ನು ಮೆಲಕು ಹಾಕಿದರು.

ಮುಂದುವರಿದು ಮಾತನಾಡಿದ ಅವರು ನನ್ನನ್ನು ನಾನು ಸಮರ್ಥಿಸಿಕೊಳ್ಳಲು ಅಥವಾ ಅನುಕಂಪಕ್ಕಾಗಿ ಈ ವಿಡಿಯೋವನ್ನು ಮಾಡುತ್ತಿಲ್ಲ. ಸುತ್ತಮುತ್ತಲಿನ ಮಂದಿ ನನ್ನ ಬಗ್ಗೆ ಮಾತನಾಡುತ್ತಿರುವುದರಿಂದ ಸ್ಪಷ್ಟನೆ ನೀಡಲು ಈ ವಿಡಿಯೋ ಮಾಡುತ್ತಿದ್ದೇನೆ ಎಂದರು.

ನೋಟಿಸ್​ ಬಂದಿದ್ದರಿಂದ ನನಗೆ ಬೇಜಾರಿಲ್ಲ. ಸಿಸಿಬಿ ಕಚೇರಿಗೆ ಹೋದ ಮಾತ್ರಕ್ಕೆ ನಾನು ಅಪರಾಧಿ ಅಥವಾ ಆರೋಪಿ ಆಗುವುದಿಲ್ಲ. ಆದರೆ, ಈ ವಿಚಾರದಲ್ಲಿ ನನ್ನನ್ನು ಬಿಂಬಿಸಿದ ರೀತಿ ನನಗೆ ತುಂಬಾ ನೋವು ಮಾಡಿತು. ಕಳೆದು ಒಂದು ವಾರದಿಂದ ಮನೆಯವರ ನೆಮ್ಮದಿ ಹಾಳು ಮಾಡಿತು ಎಂದು ಕಣ್ಣೀರಾಕಿದರು.

ಈ ಕಷ್ಟ ಕಾಲದಲ್ಲಿ ಏನು ಹೇಳದೆ, ಏನು ಕೇಳದೆ ಅನುಶ್ರೀ ನೀವು ಏನಂತ ನಮಗೆ ಗೊತ್ತೆಂದು ನನ್ನ ಜತೆ ನಿಂತ ಕನ್ನಡ ಜನತೆಗೆ ಧನ್ಯವಾದಗಳು ಎಂದು ಭಾವುಕರಾದ ಅನುಶ್ರೀ, ಇದೆಲ್ಲ ಮೀರಿಯೂ ಕೂಡ ಮತ್ತೆ ನನ್ನ ವಿರುದ್ಧ ಅಂತೆ ಕಂತೆಗಳು ಹರಿದಾಡುತ್ತಿವೆ. ಇಂತಹ ವಿಚಾರಗಳ ಬಗ್ಗೆ ಮಾತನಾಡುವಾಗ ಸೂಕ್ಷ್ಮತೆ ಅರಿಯಿರಿ ಎನ್ನುವ ಮೂಲಕ ಮತ್ತೊಮ್ಮೆ ತಮಗೆ ಬೆಂಬಲವಾಗಿ ನಿಂತವರಿಗೆ ಧನ್ಯವಾದ ತಿಳಿಸಿದರು. (ದಿಗ್ವಿಜಯ ನ್ಯೂಸ್​)