ಮುಂಬೈ: ಬೀದಿ ನಾಯಿಗಳು, ಪಿಟ್ಬುಲ್ ದಾಳಿಯಿಂದ ಬಾಲಕನನ್ನು ರಕ್ಷಣೆ ಮಾಡಿದ ವಿಡಿಯೋ ಇತ್ತೀಚೆಗೆ ವೈರಲ್ ಆಗಿ, ಭಾರಿ ಚರ್ಚೆಯನ್ನು ಹುಟ್ಟುಹಾಕಿತ್ತು. ಈ ವಿಡಿಯೋ ಗಮನಿಸಿರುವ ಬಾಲಿವುಡ್ ನಟಿ ಹಾಗೂ ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ, ತಮ್ಮ ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ಶೇರ್ ಮಾಡಿಕೊಳ್ಳುವ ಮೂಲಕ ಎರಡು ಬದಿಗಳನ್ನು ಹೈಲೈಟ್ ಮಾಡಿ ಎಂದು ಬರೆದುಕೊಂಡಿದ್ದಾರೆ.
ಅನುಷ್ಕಾ ಮಾತಿನ ಅರ್ಥ ಏನು ಎಂಬುದು ಸ್ಪಷ್ಟವಾಗಿಲ್ಲ. ಆದರೆ, ಅನುಷ್ಕಾ ಶೇರ್ ಮಾಡಿರುವ ವಿಡಿಯೋ ಮೇಲೆ ಬಾಲಕನ ಮೇಲೆ ಪಿಟ್ಬುಲ್ ದಾಳಿ ಮಾಡಿದ್ದರೂ ದಾರಿ ಹೋಕರು ಸುಮ್ಮನೇ ನಿಂತು ನೋಡುತ್ತಿರುವುದು ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಅವರನ್ನು ಉಲ್ಲೇಖಿಸಿ ಈ ಮಾತನ್ನು ಹೇಳಿಬಹುದು ಅನಿಸುತ್ತದೆ. ಪಿಟ್ಬುಲ್ ದಾಳಿ ಮಾಡುತ್ತಿದ್ದರು ಸುಮ್ಮನೇ ನಿಂತು ನೋಡುತ್ತಿದ್ದಾರೆ. ಆದರೆ, ಬೀದಿ ನಾಯಿಗಳೇ ಬಾಲಕನನ್ನು ರಕ್ಷಣೆ ಮಾಡಿವೆ. ಹೀಗಾಗಿ ಅನುಷ್ಕಾ, ಮನುಷ್ಯರಿಗಿಂತ ಪ್ರಾಣಿಗಳೇ ಮೇಲು ಎನ್ನುವ ಅರ್ಥದಲ್ಲಿ ಬರೆದುಕೊಂಡಿರಬಹುದು.
ಪಿಟ್ಬುಲ್ ದಾಳಿ ಮಾಡಿದ ಘಟನೆ ಉತ್ತರಪ್ರದೇಶ ಗಾಜಿಯಾಬಾದ್ನಲ್ಲಿ ಇತ್ತೀಚೆಗಷ್ಟೇ ನಡೆದಿದೆ. ಘಟನೆಯ ಸಂಪೂರ್ಣ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ವಿಡಿಯೋದಲ್ಲಿ ಏನಿದೆ? ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವ ಬಾಲಕ ಅಲ್ತಾಫ್ ಮೇಲೆ ಪಿಟ್ಬುಲ್ ನಾಯಿ ಏಕಾಏಕಿ ದಾಳಿ ಮಾಡುತ್ತದೆ. ಈ ವೇಳೆ ಅಲ್ಲೇ ಇದ್ದ ಜನರು ಅದನ್ನು ನೋಡಿಕೊಂಡು ಸುಮ್ಮನೇ ನಿಂತಿರುತ್ತಾರೆ. ಈ ವೇಳೆ ಮೇಲಿನಿಂದ ಇಬ್ಬರು ನೀರು ಎರಚಿದ್ದು, ಬಾಲಕ ಹೇಗೋ ತಪ್ಪಿಸಿಕೊಳ್ಳುತ್ತಾನೆ. ಈ ವೇಳೆ ಕೆಲ ಬೀದಿನಾಯಿಗಳು ಆತನ ರಕ್ಷಣೆಗೆ ಧಾವಿಸಿದ್ದು ಬಾಲಕನನ್ನು ಅಪಾಯದಿಂದ ಪಾರು ಮಾಡುತ್ತವೆ.
ಪ್ರೀತಿಗೆ ಒಂದು ಅವಕಾಶ ನೀಡಿ
ಈ ವಿಡಿಯೋವನ್ನು ಮೊದಲು ಧರ್ಮಸಾಲ ಅನಿಮಲ್ ರೆಸ್ಕ್ಯೂ ಹೆಸರಿನ ಇನ್ಸ್ಟಾಗ್ರಾಂ ಪೇಜ್ನಲ್ಲಿ ಮೊದಲು ಶೇರ್ ಮಾಡಲಾಯಿತು. ಕೊನೆಯವರೆಗೂ ನೋಡಿ, ಶಾಪ್ಗಳಲ್ಲಿರುವ ನಾಯಿಗಳನ್ನು ದತ್ತು ಪಡೆಯಬೇಡಿ. ಬೀದಿ ನಾಯಿಗಳನ್ನು ದತ್ತು ಪಡೆಯಿರಿ, ಪ್ರೀತಿಗೆ ಒಂದು ಅವಕಾಶ ನೀಡಿ, ಬೀದಿ ನಾಯಿ ವೀರರು, ಶೌರ್ಯ, ಯೋಗ್ಯರು ಹಾಗೂ ಪ್ರೀತಿಗೆ ಅರ್ಹರು ಎಂದು ಅಡಿಬರಹ ನೀಡಲಾಗಿದೆ.
ಇತ್ತ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತ ಗಾಜಿಯಾಬಾದ್ ಪಾಲಿಕೆ, ಕೂಡಲೇ ಪ್ರಕರಣ ದಾಖಲಿಸಿಕೊಂಡು ನಾಯಿಯನ್ನು ವಶಕ್ಕೆ ಪಡೆದಿದೆ. ಬಾಲಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದು ತಿಳಿದು ಬಂದಿದೆ. (ಏಜೆನ್ಸೀಸ್)