ನ್ಯೂಸ್

ಮಾಸ್ಕ್​ ಧರಿಸೋದು ಜೀವ ವಿರೋಧಿ ಕೃತ್ಯ; ಹುಟ್ಟಿಕೊಂಡಿದ್ದಾರೆ 'ಆ್ಯಂಟಿ ಮಾಸ್ಕ್​ರ್ಸ್​'

ವಾಷಿಂಗ್ಟನ್​: ಕೋವಿಡ್​ ಕಾಲಮಾನದಲ್ಲಿ ಹೊಸ ವಿರೋಧಿಗಳ ಪಂಗಡವೊಂದು ಹುಟ್ಟಿಕೊಂಡಿದೆ. ಮಾರ್ಕ್ಸ್ ವಿರೋಧಿಗಳಂತೆ ಇವರು ಮಾಸ್ಕ್​ ವಿರೋಧಿಗಳು. ಇವರನ್ನು ಆ್ಯಂಟಿ ಮಾಸ್ಕ್​ರ್ಸ್​ ಎಂದೇ ಕರೆಯಲಾಗುತ್ತಿದೆ. ಇವರ ವಾದ ಕೇಳಿದ್ರೆ ಖಂಡಿತ ದಂಗಾಗ್ತೀರಾ...!

ಅಮೆರಿಕದಲ್ಲಿ ಮೊದಲಿನಿಂದಲೂ ಲಾಕ್​ಡೌನ್​ ನಿಯಮಗಳಿಗೆ ಭಾರಿ ವಿರೋಧವಿದೆ. ಲಾಕ್​ಡೌನ್​ ಬೇಡ ಎಂದು ಜನರು ಬೀದಿಗಿಳಿದು ಪ್ರತಿಭಟಿಸಿದ್ದರು. ಈ ಸ್ವಚ್ಛಂದತೆಯ ಕಾರಣದಿಂದಾಗಿಯೇ ಸದ್ಯ ಅಮೆರಿಕದಲ್ಲಿ ಕರೊನಾ ಸೋಂಕಿತರ ಸಂಖ್ಯೆ 25 ಲಕ್ಷ ದಾಟಿದೆ. ಇದೇ ಪ್ರಮಾಣದಲ್ಲಿ ಮುಂದುವರಿದರೆ 3 ಕೋಟಿ ದಾಟುವ ಅಂದಾಜಿದೆ.

ಕರೊನಾ ಸೋಂಕನ್ನು ದೂರವಿಡಲು ವ್ಯಕ್ತಿಗತ ಅಂತರ ಕಾಯ್ದುಕೊಳ್ಳುವುದು ಹಾಗೂ ಮಾಸ್ಕ್​ ಧರಿಸುವುದು ಅನಿವಾರ್ಯವಾಗಿದೆ. ಆದರೆ, ಅಮೆರಿಕದಲ್ಲಿ ಇದಕ್ಕೂ ಭಾರಿ ವಿರೋಧ ವ್ಯಕ್ತವಾಗುತ್ತಿದೆ. ಫ್ಲೋರಿಡಾದಲ್ಲಿ ಆ್ಯಂಟಿ ಮಾಸ್ಕ್​ರ್ಸ್​ ಎಂಬ ಗುಂಪೇ ಹುಟ್ಟಿಕೊಂಡಿದೆ. ನಾವು ಮಾಸ್ಕ್​ ಧರಿಸುವುದಿಲ್ಲ ಎಂದು ಘೋಷಿಸುತ್ತಿದ್ದಾರೆ. ಅದಕ್ಕೆ ಇವರು ನೀಡುತ್ತಿರುವ ಕಾರಣಗಳನ್ನು ಕೇಳಿದ್ರೆ ಅಚ್ಚರಿಯಾಗದೇ ಇರದು.

ಉಸಿರಾಡಿ ಎಂಬುದು ಭಗವಂತನ ಆಶಯವಾಗಿದ್ದರೆ, ಮಾಸ್ಕ್​ ಧರಿಸಿ ಎಂದು ಆದೇಶಿಸುವ ಮೂಲಕ ಅದಕ್ಕೆ ಧಕ್ಕೆ ಉಂಟು ಮಾಡುತ್ತಿದ್ದೀರಾ ಎಂಬುದು ಮಹಿಳೆಯೊಬ್ಬಳು ಹೇಳಿದ್ದಾಳೆ. ಉಸಿರಾಡುವ ಪ್ರಕ್ರಿಯೆ ಮೇಲೆ ನೀಡುವ ಹಿಡಿತ ಸಾಧಿಸುತ್ತಿದ್ದೀರಾ ಎಂದು ಮತ್ತೊಬ್ಬರು ಪ್ರಶ್ನಿಸಿದ್ದಾರೆ. ಮಾನವೀಯತೆ ವಿರುದ್ಧ ಅಪರಾಧವಾಗಿದೆ ಎಂದು ಮಹಿಳೆಯೊಬ್ಬಳು ವೈದ್ಯರನ್ನೇ ಎಚ್ಚರಿಸಿದ್ದಾಳೆ.

ಎಲ್ಲಕ್ಕಿಂತ ವಿಚಿತ್ರ ವಾದ ಮಂಡಿಸಿದ ಮಹಿಳೆಯೊಬ್ಬಳು ನಾನು ಅಂಡರ್​ವೇರ್​ ಧರಿಸುವುದಿಲ್ಲ, ಅದೇ ಕಾರಣಕ್ಕೆ ಮಾಸ್ಕ್​ ಕುಡ ಧರಿಸುವುದಿಲ್ಲ ಎಂದಿದ್ದಾಳೆ. ಈ ಅಭಿಪ್ರಾಯಗಳೆಲ್ಲ ವ್ಯಕ್ತವಾಗಿದ್ದು, ಫ್ಲೋರಿಡಾದ ಪಾಮ್​ ಬೀಚ್​ ಕೌಂಟಿಯ (ಸ್ಥಳೀಯಾಡಳಿತ ಸಂಸ್ಥೆ) ಜನಸ್ಪಂದನ ಸಭೆಯಲ್ಲಿ. ಇದಕ್ಕೆ ನೆಟ್ಟಿಗರಿಂದ ಅಷ್ಟೇ ವ್ಯಂಗ್ಯದ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.

ಅದರದ್ದೊಂದು ಝಲಕ್​ ಇಲ್ಲಿದೆ ಕೇಳಿ.....