ಕರೊನಾ ಸಾಂಕ್ರಾಮಿಕ ಕಾಣಿಸಿಕೊಂಡ ಚೀನಾದಲ್ಲಿ ಐದು ವರ್ಷಗಳ ಬಳಿಕ ಮತ್ತೊಂದು ವೈರಸ್ ಹಾವಳಿ ಆರಂಭವಾಗಿದೆ. ಹ್ಯೂಮನ್ ಮೆಟಾನ್ಯುಮೊವೈರಸ್ (ಎಚ್ಎಂಪಿವಿ) ಬಾಧಿತರು ಚೀನಾದ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಭಾರತದಲ್ಲೂ ಎಚ್ಎಂಪಿವಿಯ ಆರು ಪ್ರಕರಣಗಳು ಪತ್ತೆಯಾಗಿ, ಒಂದಷ್ಟು ಆತಂಕ ಮೂಡಿದೆ. ಆದರೆ, ಇದು ಮಾರಣಾಂತಿಕ ವೈರಸ್ ಅಲ್ಲ, ಜನರು ಜಾಗ್ರತೆ ವಹಿಸಿದರೆ ಸಾಕು ಎಂಬ ಸ್ಪಷ್ಟ ಅನಿಸಿಕೆ ಆರೋಗ್ಯ ತಜ್ಞರದ್ದು. ಈ ಎಲ್ಲ ಬೆಳವಣಿಗೆಳ ಮಾಹಿತಿ ಇಲ್ಲಿದೆ.
ಭಾರತದಲ್ಲಿ ಎಚ್ಎಂಪಿಯ ಆರು ಪ್ರಕರಣಗಳು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕೇಂದ್ರ ಆರೋಗ್ಯ ಇಲಾಖೆ ವೈದ್ಯಕೀಯ ನಿಗಾವನ್ನು ತೀವ್ರಗೊಳಿಸಿದೆ ಮತ್ತು ವೈರಾಣುವಿನ ಪರಿಣಾಮದ ಬಗ್ಗೆ ಪರಿಶೀಲನೆ ನಡೆಸುತ್ತಿದೆ. ವಿಶ್ವ ಆರೋಗ್ಯ ಸಂಸ್ಥೆಯಿಂದಲೂ ಮಾಹಿತಿ ಪಡೆದುಕೊಳ್ಳಲು ಮುಂದಾಗಿದೆ. ಆದರೆ, ಇದು ಹೊಸ ವೈರಾಣುವಲ್ಲ ಮತ್ತು ಅಪಾಯಕಾರಿಯೂ ಅಲ್ಲ. ಹೀಗಾಗಿ, ಜನರು ಆತಂಕ ಪಡುವ ಅಗತ್ಯವಿಲ್ಲ ಎಂದು ಆರೋಗ್ಯ ತಜ್ಞರು ಸ್ಪಷ್ಟಪಡಿಸಿದ್ದಾರೆ. ನ್ಯಾಶನಲ್ ಲೈಬ್ರರಿ ಆಫ್ ಮೆಡಿಸಿನ್ ಪ್ರಕಾರ, 2001ರಲ್ಲಿ ನೆದರ್ಲ್ಯಾಂಡ್ನಲ್ಲಿ ಸಂಶೋಧಕರು ಮೊದಲ ಬಾರಿಗೆ ಈ ವೈರಾಣುವನ್ನು (ಎಚ್ಎಂಪಿವಿ) ಕಂಡುಹಿಡಿದರು. ಆದರೆ, ಇದು ಕನಿಷ್ಠ 50 ವರ್ಷಗಳ ಹಳೆಯ ವೈರಸ್ ಎನ್ನುತ್ತಾರೆ ಕೆಲ ವೈದ್ಯಕೀಯ ತಜ್ಞರು. ಅಲ್ಲದೆ, ಈವರೆಗೆ ಈ ವೈರಾಣುವಿನ ಹೊಸ ತಳಿ ಕಾಣಿಸಿಕೊಂಡಿಲ್ಲ ಎಂಬುದು ಸಮಾಧಾನಕರ ವಿಷಯ.
ವಿಶ್ವ ಆರೋಗ್ಯ ಸಂಸ್ಥೆ ಈವರೆಗೆ ಈ ವೈರಾಣುವಿನ ಕುರಿತಂತೆ ಯಾವುದೇ ಸೂಚನೆ ಹೊರಡಿಸಿಲ್ಲ. ಮಕ್ಕಳಲ್ಲಿ ತೀವ್ರವಾದ ಉಸಿರಾಟದ ಸೋಂಕಿಗೆ ಎಚ್ಎಂಪಿ ಕಾರಣವಾಗುತ್ತದೆ ಎಂದಿವೆ ಅಧ್ಯಯನ ವರದಿಗಳು. ಕಳೆದ ವರ್ಷವೂ ಚೀನಾದಲ್ಲಿ ಈ ವೈರಾಣು ವ್ಯಾಪಿಸಿರುವ ಸುದ್ದಿಗಳು ಹರಿದಾಡಿದ್ದವು. 2023ರಲ್ಲಿ ಅಮೆರಿಕ, ನೆದರ್ಲ್ಯಾಂಡ್, ಬ್ರಿಟನ್, ಆಸ್ಟ್ರೇಲಿಯಾ, ಕೆನಡಾ ಸೇರಿದಂತೆ ಹಲವು ದೇಶಗಳಲ್ಲಿ ಎಚ್ಎಂಪಿ ಕಾಣಿಸಿಕೊಂಡಿತ್ತು. ವೈರಸ್ನ ಪರಿಣಾಮ ಸಾಮಾನ್ಯವಾಗಿದ್ದರೆ ಶೀತ, ಜ್ವರ ಕಾಣಿಸಿಕೊಳ್ಳುತ್ತದೆ. ಆದರೆ, ವೈರಸ್ ತೀವ್ರವಾಗಿ ಬಾಧಿಸಿ, ಸೋಂಕು (ಇನ್ಫೆಕ್ಷನ್) ಸೃಷ್ಟಿಸಿದ್ದರೆ ನ್ಯುಮೋನಿಯಾದಂಥ ಉಸಿರಾಟ ಸಂಬಂಧಿ ಸಮಸ್ಯೆ ಕಾಣಿಸಿಕೊಳ್ಳಬಹುದು.
ಪ್ರತಿವರ್ಷ ಚಳಿಗಾಲ ಬಂದಾಗ ಅದರಲ್ಲೂ ಚಳಿಯ ತೀವ್ರತೆ ಹೆಚ್ಚಾದಾಗ ಜ್ವರ ಮತ್ತು ಶೀತದ ಪ್ರಕರಣಗಳು ಹೆಚ್ಚುತ್ತವೆ. ಅದಕ್ಕೆ ವೈರಾಣು ಕಾರಣ. ವೈರಾಣು ಆಗಾಗ ತನ್ನ ಗುಣಲಕ್ಷಣಗಳನ್ನು ಬದಲಾಯಿಸುತ್ತಿರುತ್ತದೆ. ಈ ಬಾರಿ ಅದಕ್ಕೆ ಎಚ್ಎಂಪಿವಿ ( ಹ್ಯೂಮನ್ ಮೆಟಾನ್ಯುಮೊವೈರಸ್) ಎಂದು ಹೆಸರಿಡಲಾಗಿದೆ. ಇದು ಖಂಡಿತವಾಗಿಯೂ ಅಪಾಯಕಾರಿ ವೈರಸ್ ಅಲ್ಲ. ಜ್ವರ, ಶೀತ ಇತ್ತೀಚೆಗೆ ಬಂದವರಿಗೆ ಎಚ್ಎಂಪಿ ಬಂದುಹೋಗಿರಬಹುದು. ಪರೀಕ್ಷೆ ಮಾಡದೆ ಇರುವುದರಿಂದ ಗೊತ್ತಾಗಿರುವುದಿಲ್ಲ. ಇದು ಸಾಮಾನ್ಯ ವೈರಸ್ ಆಗಿದ್ದು, ಕಾಳಜಿ ವಹಿಸಿದರೆ ಸಾಕು. ಅಷ್ಟಕ್ಕೂ, ಇದು ಹೊಸ ವೈರಸ್ ಏನಲ್ಲ. ಭಾರತ ಸೇರಿದಂತೆ ಹಲವು ದೇಶಗಳ ಜನರಲ್ಲಿ ಈ ಹಿಂದೆಯೇ ಕಾಣಿಸಿಕೊಂಡಿರುವ ವೈರಸ್ ಇದು. ವೈರಸ್ ಎದುರಿಸುವ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರದ ಆರೋಗ್ಯ ಇಲಾಖೆಯು ಸೂಕ್ತ ಸಲಹೆ, ಸೂಚನೆಗಳನ್ನು ಸೋಮವಾರ ಬಿಡುಗಡೆ ಮಾಡಿದೆ.
ಹ್ಯೂಮನ್ ಮೆಟಾನ್ಯುಮೊವೈರಸ್ (ಎಚ್ಎಂಪಿವಿ) ಉಸಿರಾಟಕ್ಕೆ ಸಂಬಂಧಿಸಿದ ವೈರಾಣು. ಇದು ಆರಂಭದಲ್ಲಿ ಸೌಮ್ಯ ಮತ್ತು ಮಧ್ಯಮ ಬಗೆಯ ಜ್ವರದ ಲಕ್ಷಣವನ್ನು ಹೊಂದಿರುತ್ತದೆ. ಈ ವೈರಾಣು ಚಳಿಗಾಲದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ.
ಕೆಮ್ಮು, ಶೀತ, ಗಂಟಲು ನೋವು, ಉರು ಕಟ್ಟಿದಂತಾಗುವುದು, ಉಸಿರಾಡಲು ತೊಂದರೆ.
ತನ್ನ ದೇಶದಲ್ಲಿ ಜನರಿಗೆ ಶೀತ, ಜ್ವರ, ಉಸಿರಾಟದ ಸಮಸ್ಯೆ, ಕೆಮ್ಮು ಸಾಂಕ್ರಾಮಿಕವಾಗಿ ಹರಡಿ, ಜನರು ಆಸ್ಪತ್ರೆಗೆ ದಾಖಲಾಗುತ್ತಿರುವ ವರದಿಗಳನ್ನು ಚೀನಾ ಸರ್ಕಾರ ಅಲ್ಲಗಳೆದಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಚಳಿಗಾಲದಲ್ಲಿ ಉಸಿರಾಟದ ಕಾಯಿಲೆಗಳ ಪ್ರಕರಣ ಕಡಿಮೆಯಾಗಿವೆ. ವಿದೇಶಿಯರು ಚೀನಾಕ್ಕೆ ಸುರಕ್ಷಿತವಾಗಿ ಪ್ರಯಾಣಿಸಬಹುದು ಎಂದು ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರೆ ಮಾವೊ ನಿಂಗ್ ಹೇಳಿದ್ದಾರೆ. ಆದಾಗ್ಯೂ, ಎಚ್ಎಂಪಿ ವಿರುದ್ಧ ಹೋರಾಡಲು ಚೀನಾದ ಆರೋಗ್ಯ ಇಲಾಖೆ ಕೆಲ ಮಾರ್ಗಸೂಚಿ ಜಾರಿಗೊಳಿಸಿದೆ. ಆದರೆ, ‘ಆರೋಗ್ಯ ತುರ್ತು ಪರಿಸ್ಥಿತಿ’ ಘೋಷಿಸಿಲ್ಲ. ಆದರೆ, ಕೆಲ ಮೂಲಗಳ ಪ್ರಕಾರ, ಚೀನಾ ನೈಜ ಪರಿಸ್ಥಿತಿಯನ್ನು ಮುಚ್ಚಿಡುತ್ತಿದೆ. ಅಲ್ಲಿನ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಬೆಡ್ಗಳೂ ಸಿಗುತ್ತಿಲ್ಲ. ಕೋವಿಡ್ ಸಮಯದಲ್ಲೂ ಚೀನಾ ಸುಳ್ಳು ಹೇಳಿ ಜಗತ್ತಿನ ದಾರಿ ತಪ್ಪಿಸಿತ್ತು. ಈ ಬಾರಿಯೂ ಹಾಗೇ ಮಾಡುತ್ತಿದೆ. ಹಾಗಾಗಿ, ವಿಶ್ವ ಆರೋಗ್ಯ ಸಂಸ್ಥೆ ಕೂಡಲೇ ಮಧ್ಯಪವೇಶಿಸಿ ಚೀನಾದಲ್ಲಿನ ಪರಿಸ್ಥಿತಿಯನ್ನು ಸ್ಪಷ್ಟಪಡಿಸಬೇಕು ಎಂಬ ಆಗ್ರಹಗಳೂ ಕೇಳಿಬಂದಿವೆ.
ಎಚ್ಎಂಪಿ ಮೂಲಕ ಸಾಂಕ್ರಾಮಿಕ ಕಾಯಿಲೆ ಕೋವಿಡ್ನಂತೆ ಜಗತ್ತಿನಾದ್ಯಂತ ಹರಡಲಿದೆಯೇ ಎಂಬ ಆತಂಕ ಶುರುವಾಗಿದೆ. ಆದರೆ, ವೈದ್ಯರ ಪ್ರಕಾರ, ಕರೊನಾ ಹೊಸ ವೈರಸ್ ಆಗಿದ್ದರಿಂದ ಅದನ್ನು ನಿಯಂತ್ರಿಸುವುದು ಮತ್ತು ಚಿಕಿತ್ಸೆ ನೀಡುವುದು ಸವಾಲಾಗಿ ಪರಿಣಮಿಸಿತು. ಈಗಿನ ಸ್ಥಿತಿಯನ್ನು ಅವಲೋಕಿಸಿದರೆ ಎಚ್ಎಂಪಿ ವಿಶ್ವಾದ್ಯಂತ ಹರಡಿಕೊಳ್ಳುವ ಸಾಧ್ಯತೆ ಕಡಿಮೆ. ಚಳಿಯ ತೀವ್ರತೆ ಹೆಚ್ಚಿದಾಗ ಮಾತ್ರ ಈ ವೈರಾಣು ಕಾಣಿಸಿಕೊಳ್ಳುತ್ತದೆ.
ದೇಶದಲ್ಲಿ ಎಚ್ಎಂಪಿ ವೈರಸ್ ಹರಡುವ ಭೀತಿ, ಮೂರನೇ ತ್ರೖೆಮಾಸಿಕದ ಗಳಿಕೆಯ ಆತಂಕ ಮತ್ತು ವಿದೇಶಿ ಹೂಡಿಕೆಯ ಹೊರ ಹರಿವಿನ ನಿರಂತರತೆ ಹಿನ್ನೆಲೆಯಲ್ಲಿ ಭಾರತೀಯ ಷೇರುಪೇಟೆ ಸೋಮವಾರ ಭಾರಿ ಪ್ರಮಾಣದಲ್ಲಿ ಕುಸಿಯಿತು. ಸೆನ್ಸೆಕ್ಸ್ 1258 ಅಂಕ ಕುಸಿದು 77,964ಕ್ಕೆ ತಲುಪಿತು. 3,474 ಕಂಪನಿಗಳ ಷೇರುಗಳು ನಷ್ಟ ಅನುಭವಿಸಿದರೆ, 656 ಕಂಪನಿಗಳ ಷೇರುಗಳು ಮಾತ್ರ ಲಾಭ ಕಂಡವು. ನಿಫ್ಟಿ 388 ಅಂಕ ಕುಸಿದು 23,616ಕ್ಕೆ ಮುಟ್ಟಿತು. ಹೂಡಿಕೆದಾರರಿಗೆ ಒಂದೇ ದಿನ 10.98 ಲಕ್ಷ ಕೋಟಿ ರೂ. ನಷ್ಟವಾಯಿತು.